ಸ್ಪೀಕರ್​ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ ಅತೃಪ್ತರು: ಬೆಳವಣಿಗೆಗಳ ಬಗ್ಗೆ ರಮೇಶ್​ಕುಮಾರ್​ ಹೇಳಿದ್ದೇನು ಗೊತ್ತಾ?

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಅತೃಪ್ತ ಶಾಸಕರೆಲ್ಲ ಇಂದು ಬೆಂಗಳೂರಿಗೆ ಆಗಮಿಸಿ ಸ್ಪೀಕರ್​ ಅವರನ್ನು ಭೇಟಿಯಾಗಿದ್ದಾರೆ.

ಅವರ ಭೇಟಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್​, ಇವತ್ತು ಅತೃಪ್ತ ಶಾಸಕರು ಸಲ್ಲಿಸಿದ ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿದ್ದೇನೆ. ಆದರೆ ಅಂಗೀಕರಿಸಿಲ್ಲ. ಇಂದು ನಡೆದ ಕಲಾಪಗಳನ್ನು ಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದೇನೆ. ಆ ವಿಡಿಯೋವನ್ನು ಸುಪ್ರಿಂಕೋರ್ಟ್​ಗೆ ಕಳಿಸುತ್ತೇನೆ. ರಾಜೀನಾಮೆ ನೀಡಿದ ಶಾಸಕರ ವಿಚಾರಣೆ ನಾನು ನಡೆಸಲೇಬೇಕು. ಹೀಗಾಗಿ ಅವರಿಗೂ ಸಮಯ ಕೊಟ್ಟಿದ್ದೇನೆ. ಇದನ್ನೆಲ್ಲ ಸುಪ್ರೀಂಕೋರ್ಟ್​ಗೆ ತಿಳಿಸುತ್ತೇನೆ ಎಂದು ಹೇಳಿದರು.

ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಮೇಶ್​ ಕುಮಾರ್​, ರಾಜೀನಾಮೆ ಸ್ವೀಕಾರಕ್ಕೆ ನನ್ನಿಂದ ವಿಳಂಬವಾಯಿತು ಎಂದು ಮಾಧ್ಯಮಗಳಲ್ಲಿ ಹೇಳುತ್ತಿದ್ದೀರಿ, ಬೇಕೆಂತಲೇ ನಾನು ತಡ ಮಾಡುತ್ತಿದ್ದೇನೆ ಎಂದು ಬರೆದಿದ್ದೀರಿ, ಇದು ತಪ್ಪು. ಹೀಗೆಲ್ಲ ಹೇಳಿದರೆ ಜನ ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ. ನಾನೂ ಯಾವುದೋ ಪಕ್ಷದ ಪರ ಇದ್ದೇನೆ ಎಂದುಕೊಳ್ಳುವುದಿಲ್ಲವಾ? ನಾನು ಯಾರ ನಿಯಂತ್ರಣದಲ್ಲೂ ಇಲ್ಲ. ಸಂವಿಧಾನ ಹಾಗೂ ರಾಜ್ಯದ ಹೊರತಾಗಿ ಇನ್ಯಾರ ಹಂಗಲ್ಲೂ ಇಲ್ಲ. ನಿಮ್ಮ ಕಾಲಿಗೆ ಬೀಳುತ್ತೇನೆ ಸತ್ಯ ಹೇಳಿ, ಸಾಯೋ ಕಾಲಕ್ಕೆ ಶಾಂತಿಯಿಂದ ಇರಲು ಬಿಡಿ ಎಂದರು.

ಅತೃಪ್ತ ಶಾಸಕರು ಶನಿವಾರ ಮಧ್ಯಾಹ್ನ 2.30ಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದು ನಾನು 12.30 ರವರೆಗೆ ಕಚೇರಿಯಲ್ಲಿ ಇದ್ದೆ. ಅದಾದ ಬಳಿಕ ನನ್ನ ಸ್ವಂತ ಕೆಲಸಕ್ಕೆ ಹೋದೆ. ಈ ಶಾಸಕರು ತಾವು ಬರುವ ವಿಚಾರವನ್ನು ನನಗೆ ಮೊದಲು ತಿಳಿಸಿಲ್ಲ. ಪತ್ರದ ಅಥವಾ ದೂರವಾಣಿ ಮೂಲಕ ಹೇಳಬೇಕಾಗಿತ್ತಲ್ಲವೇ? ಭಾನುವಾರ ರಜಾ. ಈ ಬೆಳವಣಿಗೆಯಾಗುತ್ತದೆಯೆಂಬುದು ನನಗೇನು ಗೊತ್ತಿತ್ತು? ಹಾಗಾಗಿ ಸೋಮವಾರ ನನ್ನ ವೈಯಕ್ತಿಕ ಕಾರ್ಯಕ್ಕೆ ತೆರಳಿದ್ದೆ. ಅಷ್ಟಕ್ಕೇ ಶಾಸಕರು ರಾಜೀನಾಮೆ ನೀಡಲು ಬರುವುದು ಗೊತ್ತಾಗಿ ನಾನು ಓಡಿಹೋಗಿದ್ದೇನೆ ಎಂದು ಹೇಳುವುದು ಸರಿಯಲ್ಲ. ಮಂಗಳವಾರ ಬಂದಾಗ ನನ್ನ ಕಚೇರಿಯಲ್ಲಿ ಒಟ್ಟು 13 ರಾಜೀನಾಮೆಗಳು ಇದ್ದವು ಎಂದು ಮಾಹಿತಿ ನೀಡಿದರು.

ರಾಜೀನಾಮೆ ಕೊಡಲು ನಿಯಮಗಳಿವೆ

ನಮ್ಮ ವಿಧಾನಸಭೆಯ ನಡಾವಳಿ 202ರ ಪ್ರಕಾರ ಸದಸ್ಯರು ರಾಜೀನಾಮೆ ನೀಡಲು ನಿಯಮಗಳಿವೆ. ಅದಕ್ಕೆಂದೇ ನಮೂನೆಗಳಿವೆ. ಆದರೆ 13 ಶಾಸಕರ ರಾಜೀನಾಮೆಗಳಲ್ಲಿ ಎಂಟು ಜನರ ಪತ್ರ ಆ ನಮೂನೆಯಲ್ಲಿ ಇರಲಿಲ್ಲ. ಉಳಿದ ಐವರದ್ದು ಸರಿಯಾಗಿ ಇತ್ತು. ಆ ಎಂಟು ಜನರಿಗೆ ಸರಿಯಾದ ಕ್ರಮದಲ್ಲಿ ರಾಜೀನಾಮೆ ನೀಡಲು ತಿಳಿಸಿದ್ದೆ. ಹಾಗೇ ರಾಜೀನಾಮೆ ಪತ್ರ ಸರಿಯಾಗಿರುವ ಶಾಸಕರನ್ನು ನಾನು ವಿಚಾರಣೆ ಮಾಡುವುದು ಕರ್ತವ್ಯ. ಸಂವಿಧಾನ ಪ್ರಕಾರ ಮಾಡಲೇ ಬೇಕು. ಇಲ್ಲದಿದ್ದರೆ ತಪ್ಪಾಗುತ್ತದೆ ಎಂದು ತಿಳಿಸಿದರು.

ಸುಪ್ರೀಂ ಅರ್ಥ ಮಾಡಿಕೊಳ್ಳಬೇಕಾಗಿತ್ತು

ರಾಜೀನಾಮೆ ನೀಡಿದ ಶಾಸಕರು ಕರ್ನಾಟಕದಲ್ಲೇ ಇದ್ದು ಸಮಯ ತೆಗೆದುಕೊಂಡು ಬಂದು ನನ್ನನ್ನು ಭೇಟಿಯಾಗುವುದನ್ನು ಬಿಟ್ಟು ಮುಂಬೈಗೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದಾರೆ. ಅಲ್ಲ, ವಿಧಾನಸಭಾ ಸದಸ್ಯರು ನನ್ನನ್ನು ಭೇಟಿಯಾಗಲು ಸುಪ್ರೀಂಕೋರ್ಟ್​ ಅನುಮತಿ ಅಗತ್ಯವಿದೆಯಾ? ಇವರನ್ನೆಲ್ಲ ಹಿಡಿದಿಟ್ಟವರು ಯಾರು? ಅಲ್ಲಿಂದ ಪೊಲೀಸ್​ ಬಿಗಿ ಭದ್ರತೆಯಲ್ಲಿ ಬರುತ್ತಾರಲ್ಲ. ಅಗತ್ಯವಿತ್ತಾ ಇದೆಲ್ಲ? ಸುಪ್ರೀಂಕೋರ್ಟ್​ ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹೇಳಿದರು.

Leave a Reply

Your email address will not be published. Required fields are marked *