ರಾನಿಲ್ ವಿಕ್ರಮ ಸಿಂಘೆ ಅವರೇ ಶ್ರೀಲಂಕಾದ ಕಾನೂನು ಬದ್ಧ ಪ್ರಧಾನಿ: ಸಿರಿಸೇನಾಗೆ ಸ್ಪೀಕರ್​ ಜಯಸೂರ್ಯ ಪತ್ರ

ಕೊಲಂಬೊ: ರಾನಿಲ್ ವಿಕ್ರಮಸಿಂಘೆ ಅವರೇ ದ್ವೀಪರಾಷ್ಟ್ರದ ಕಾನೂನು ಬದ್ಧ ಪ್ರಧಾನ ಮಂತ್ರಿ ಎಂದು ಅಂಗೀಕಾರ ಮಾಡುವುದಾಗಿ ಸಂಸತ್ತಿನ ಸ್ಪೀಕರ್​ ಕರು ಜಯಸೂರ್ಯ ಹೇಳಿದ್ದಾರೆ.

ಈ ಬಗ್ಗೆ ಸ್ಪೀಕರ್ ಅಧ್ಯಕ್ಷ ಸಿರಿಸೇನಾ ಅವರಿಗೆ ಪತ್ರ ಬರೆದಿದ್ದು​, ಪ್ರಧಾನಿ ಸ್ಥಾನಕ್ಕೆ ಇನ್ನೋರ್ವ ಅಭ್ಯರ್ಥಿ ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸುವವರೆಗೂ ವಿಕ್ರಮಸಿಂಘೆ ಅವರೇ ದೇಶದ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಇದು ಪ್ರಜಾಪ್ರಭುತ್ವ ಪರವಾದ, ನ್ಯಾಯೋಚಿತ ವಿನಂತಿ ಪೂರ್ವಕ ಹೇಳಿಕೆ ಎಂದು ನಾನು ಪರಿಗಣಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ವಿಕ್ರಮಸಿಂಘೆ ಅವರು ಮೂರು ದಿನಗಳ ಹಿಂದೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರಿಂದ ಪದಚ್ಯುತಿಗೊಂಡಿದ್ದರು. ಬಹುಮತ ಇಲ್ಲದಿದ್ದರೂ ಮಹಿಂದಾ ರಾಜಪಕ್ಸೆಯನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ್ದರು. ಆ ಬಳಿಕ ದೇಶದಲ್ಲಿ ರಾಜಕೀಯ ಕ್ರಾಂತಿ ಉಂಟಾಗಿತ್ತು.
ಹಾಗೇ ಮೂರು ವಾರಗಳ ಕಾಲ ಸಂಸತ್ತಿನ ಕಾರ್ಯ ಕಲಾಪಗಳನ್ನು ಸ್ಥಗಿತಗೊಳಿಸಿದ್ದು ದ್ವೀಪರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟನ್ನು ಉಂಟು ಮಾಡುವ ಬಗ್ಗೆ ಎಚ್ಚರಿಕೆ ಇರಲಿ ಎಂದು ಕೂಡ ಅಧ್ಯಕ್ಷ ಸಿರಿಸೇನಾ ಅವರಿಗೆ ಪತ್ರದಲ್ಲಿ ಹೇಳಿದ್ದಾರೆ. ವಿಕ್ರಮಸಿಂಘೆ ಅವರು ಸರ್ಕಾರದ ನಾಯಕ. ಉತ್ತಮ ಆಡಳಿತ ನೀಡಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು ಜನರಿಂದ ಆದೇಶ ಪಡೆದ ವ್ಯಕ್ತಿ ಎಂದು ಸ್ಪೀಕರ್​ ಹೇಳಿದ್ದಾರೆ.

ನ.16ರವರೆಗೆ ಸಂಸತ್ತನ್ನು ಸ್ಥಗಿತಗೊಳಿಸುವುದರಿಂದ ದೇಶದ ಮೇಲೆ ಗಂಭೀರ, ಅನಪೇಕ್ಷಿತ ಪರಿಣಾಮಗಳು ಉಂಟಾಗುತ್ತವೆ. ಅದನ್ನೆಲ್ಲ ತಡೆಯಬೇಕು. ನೀವು ಸಹ ವಿಕ್ರಮಸಿಂಘೆಯನ್ನೇ ಸದ್ಯದ ಪ್ರಧಾನಿಯೆಂದು ಒಪ್ಪಿಕೊಳ್ಳಿ ಎಂದು ಸಿರಿಸೇನಾ ಅವರ ಬಳಿ ಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿರಿಸೇನಾ ಅವರ ಯುಪಿಎಫ್​ಎ ಹಾಗೂ ವಿಕ್ರಮಸಿಂಘ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್​ಪಿ) ಮೈತ್ರಿಕೂಟದ ಸರ್ಕಾರದಲ್ಲಿ ಕಾಣಿಸಿಕೊಂಡ ಬಿರುಕು ಮಿತಿಮೀರಿದ ಕಾರಣ ಅಧ್ಯಕ್ಷ ಸಿರಿಸೇನಾ ರಾಜಪಕ್ಸೆಯನ್ನು ಪ್ರಧಾನಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.
ಅದಾದ ಬಳಿಕ ವಿಕ್ರಮಸಿಂಘೆ ತಮ್ಮ ಬಹುಮತ ಸಾಬೀತು ಪಡಿಸಲು ತುರ್ತು ಸಂಸತ್ತು ಅಧಿವೇಶನ ಕರೆದಿದ್ದರು. ಆದರೆ ಸಿರಿಸೇನಾ ಸ್ಪೀಕರ್​ ಜಯಸೂರ್ಯ ಅವರ ಬಳಿ ಕೂಡ ಚರ್ಚಿಸದೆ ನ.16ರವರೆಗೆ ಸಂಸತ್ತನ್ನೇ ಅಮಾನತಿನಲ್ಲಿಟ್ಟಿದ್ದು ಹಲವು ಗೊಂದಲಗಳಿಗೆ ಕಾರಣವಾಗಿದೆ.