‘ಎಲ್ಲದಕ್ಕೂ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರನ್ನು ಎಳೆಯಬೇಡಿ’: ಸಚಿವೆ ಜಯಮಾಲಾ ಹೀಗೆ ಹೇಳಿದ್ದೇಕೆ?

ಬೆಳಗಾವಿ: ವಿಧಾನ ಪರಿಷತ್​ ಸಭಾಪತಿ ಆಯ್ಕೆಯಲ್ಲಿ ಯಾವುದೇ ರಾಜಕಾರಣವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದರು.

ಸಭಾಪತಿ ಆಯ್ಕೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಾಪ ಆ ಹೆಣ್ಮಗಳು ಏನೂ ಮಾಡಿಲ್ಲ. ಎಲ್ಲದಕ್ಕೂ ಯಾಕೆ ಆಕೆಯನ್ನು ಎಳೆದು ತರುತ್ತೀರಿ ಎಂದು ಪ್ರಶ್ನಿಸಿದರು.

ಎಸ್​.ಆರ್​.ಪಾಟೀಲ್​ ಅವರು ಹಿರಿಯರು. ಏಳು ಬಾರಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಸ್ಥಾನ ಸಿಗಬಹುದು ಎಂದ ಜಯಮಾಲಾ, ನಮ್ಮ ಪಕ್ಷದಲ್ಲಿ ಯಾವುದೇ ಜಟಾಪಟಿ ಇಲ್ಲ. ಎಲ್ಲದಕ್ಕೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಹೇಳುವುದು ಸರಿಯಲ್ಲ ಎಂದರು.
ಉತ್ತರ ಕರ್ನಾಟಕ ನಮ್ಮ ಹೃದಯ

ಉತ್ತರ ಕರ್ನಾಟಕ ನಮ್ಮ ಹೃದಯ ಭಾಗ. ಅದರತ್ತ ನಾವು ನಿರ್ಲಕ್ಷ್ಯ ಮಾಡುವುದಿಲ್ಲ. ಆ ಹೃದಯಕ್ಕೆ ತೊಂದರೆ ಆದರೆ ನಮ್ಮ ಬದುಕೇ ನಿಂತು ಹೋಗುತ್ತದೆ ಎಂದು ಹೇಳಿದರು.