ಹೊಸ ಆಟಗಾರ್ತಿಯರು ಗ್ರಾಂಡ್ ಸ್ಲಾಂ ಗೆದ್ದಾಗ ಖುಷಿ: ವಿಜಯವಾಣಿ ಜತೆ ಅರಾಂಟ್​ಸ್ಕ್​​​ ಸ್ಯಾಂಚೇಜ್ ಮಾತುಕತೆ

| ಸಂತೋಷ್ ನಾಯ್ಕ್​

ಬೆಂಗಳೂರು: ರಾಫೆಲ್ ನಡಾಲ್, ಗಾರ್ಬಿನ್ ಮುಗುರುಜಾ ಈ ಹೆಸರುಗಳು ಇಂದು ಸ್ಪೇನ್ ಟೆನಿಸ್​ನಲ್ಲಿ ಚಿರ ಪರಿಚಿತ. ಫುಟ್​ಬಾಲ್ ಪ್ರೇಮದ ದೇಶದಲ್ಲಿ ಟೆನಿಸ್ ಪ್ರೀತಿಯನ್ನು ಬಿತ್ತಿದ ನಿಜವಾದ ತಾರೆ ಅರಾಂಟ್​ಸ್

ಸ್ಯಾಂಚೇಜ್ ವಿಕಾರಿಯೋ. ‘ಬಾರ್ಸಿಲೋನಾ ಬಂಬಲ್​ಬೀ’ ಖ್ಯಾತಿಯ 47 ವರ್ಷದ ಟೆನಿಸ್ ಆಟಗಾರ್ತಿ ಸ್ಯಾಂಚೇಜ್, ಗ್ರಾಂಡ್ ಸ್ಲಾಂ ಟ್ರೋಫಿ ಜಯಿಸಿದ ಮೊಟ್ಟಮೊದಲ ಸ್ಪೇನ್ ಆಟಗಾರ್ತಿ. ಪ್ರಸ್ತುತ ಸ್ಪೇನ್ 35 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದೆ. ಅಸಾಧ್ಯ ಆಟಗಾರ ರಾಫೆಲ್ ನಡಾಲ್ ಸೂಪರ್ ಸ್ಟಾರ್ ಆಗಿ ವಿಶ್ವದ ಮುಂದಿದ್ದಾರೆ. ಆದರೆ, ಇವೆಲ್ಲವೂ ಸಾಧ್ಯವಾಗಿದ್ದು, 1989ರಲ್ಲಿ 17 ವರ್ಷದ ಅರಾಂಟ್​ಸ್ ಸ್ಯಾಂಚೇಜ್ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದ ಬಳಿಕ. ನಾಲ್ಕು ಬಾರಿಯ ಸಿಂಗಲ್ಸ್ ಗ್ರಾ್ಯಂಡ್ ಸ್ಲಾಂ ಪ್ರಶಸ್ತಿ ವಿಜೇತೆ ಈ ಬಾರಿಯ ಬೆಂಗಳೂರಿನ ಟಿಸಿಎಸ್ ವರ್ಲ್ಡ್ 10ಕೆ ಓಟದ ಅಂತಾರಾಷ್ಟ್ರೀಯ ರಾಯಭಾರಿ. ಶನಿವಾರ ಕೆಎಸ್​ಎಲ್​ಟಿಎಯಲ್ಲಿ ಟೆನಿಸ್ ಕ್ಲಿನಿಕ್ ನಡೆಸಿಕೊಟ್ಟ ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

# ಮುಂದಿನ ವಾರ ಫ್ರೆಂಚ್ ಓಪನ್ ಆರಂಭವಾಗುತ್ತಿದೆ. ಈ ಟೂರ್ನಿಯಲ್ಲಿ ನಿಮ್ಮ ನೆನಪುಗಳು ವಿಶೇಷ. 1989ರಲ್ಲಿ ಬಂದ ಮೊದಲ ಗ್ರಾಂಡ್​ಸ್ಲಾಂ ಗೆಲುವಿನ ಬಗ್ಗೆ ಹೇಳಿ.

-ಪ್ಯಾರಿಸ್ ನೆಲದಲ್ಲಿ ಗೆಲುವು ಕಂಡು 30 ವರ್ಷಗಳಾಗಿವೆ. ಸ್ಟೆಫಿಗ್ರಾಫ್ ವಿರುದ್ಧ 1989ರಲ್ಲಿ ಬಂದ ಆ ಗೆಲುವು ಇಂದಿಗೂ ನನ್ನ ಸ್ಮರಣೀಯ ನೆನಪು. ಅಂದು ಆ ಗೆಲುವಿನ ಹಿಂದೆ ಹಲವರಿದ್ದರು. ಈಗಲೂ ಅವರು, ನಾನು ಪ್ಯಾರಿಸ್​ಗೆ ಬಂದು ಆ ಗೆಲುವಿನ ಬಗ್ಗೆ ಮಾತನಾಡುವುದನ್ನು ಕಾಯುತ್ತಿರುತ್ತಾರೆ. ನನ್ನಲ್ಲಿದ್ದ ಉತ್ತಮ ಆಟವನ್ನು ಹೊರತೆಗೆದ ಆಟಗಾರ್ತಿ ಸ್ಟೆಫಿಗ್ರಾಫ್. ಪ್ರಸ್ತುತ ಫ್ರೆಂಚ್ ಓಪನ್​ನಲ್ಲಿ ಹೊಸ ಹೊಸ ಚಾಂಪಿಯನ್​ಗಳು ಬರುತ್ತಿದ್ದಾರೆ. ಸುಂದರ ಫ್ರೆಂಚ್ ಓಪನ್ ಟ್ರೋಫಿಯನ್ನು ಹೊಸ ಹೊಸ ಆಟಗಾರ್ತಿಯರನ್ನು ಹಿಡಿಯುವುದನ್ನು ನೋಡುವುದೇ ಖುಷಿ. ಅದೊಂದು ಟ್ರೋಫಿ ಗೆಲುವಿನಲ್ಲಿ ವಿಶೇಷವಾದ ಭಾವನೆಗಳಿರುತ್ತವೆ. ಈ ಬಾರಿ ಟ್ರೋಫಿಯನ್ನು ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲವೂ ನನಗಿದೆ.

# 17ನೇ ವಯಸ್ಸಲ್ಲಿ ಅಂದಿನ ಅಗ್ರ ಆಟಗಾರ್ತಿಯನ್ನು ಫ್ರೆಂಚ್ ಫೈನಲ್​ನಲ್ಲಿ ಎದುರಿಸುವ ವೇಳೆ ಸಿದ್ಧತೆ ಹೇಗಿತ್ತು?

-ನಿಜ ಹೇಳಬೇಕೆಂದರೆ ನನ್ನ ಎದುರಾಳಿ ಸ್ಟೆಫಿಗ್ರಾಫ್ ಎಂದು ಯೋಚಿಸಿಯೇ ಇರಲಿಲ್ಲ. ಹಾಗೇನಾದರೂ ಮಾಡಿದ್ದರೆ ಆಟದ ಮೇಲೆ ಪರಿಣಾಮ ಬೀರುತ್ತಿತ್ತು. ನನ್ನ ಉತ್ತಮ ಟೆನಿಸ್ ಆಡಬೇಕು ಎಂದಷ್ಟೇ ಬಯಸಿದ್ದೆ. ಎಷ್ಟು ದೀರ್ಘ ಸಮಯ ನಾನು ಹೋರಾಟ ಮಾಡಿ ಅಂಕ ಗಳಿಸುತ್ತೇನೋ ಅಲ್ಲಿಯವರೆಗೂ ಗೆಲುವಿನ ಅವಕಾಶವಿದೆ ಎಂದುಕೊಂಡಿದ್ದೆ. ಕೊನೆಗೆ ಇದು ಟೆನಿಸ್ ಇತಿಹಾಸದ ಅತಿಶ್ರೇಷ್ಠ ಪಂದ್ಯವಾಗಿ ಉಳಿದುಕೊಂಡಿತು. ನಾನು ಆಡುವ ದಿನಗಳಲ್ಲಿ ನಂ.1 ಆಟಗಾರ್ತಿಯನ್ನು ಗ್ರಾಂಡ್ ಸ್ಲಾಂ ಫೈನಲ್​ನಲ್ಲಿ ಸೋಲಿಸಿದ್ದೇನೆ ಎನ್ನುವ ಅಂಶಕ್ಕಿಂತ ಖುಷಿ ನನಗೆ ಇನ್ನೊಂದಿಲ್ಲ. ಫ್ರೆಂಚ್ ಓಪನ್ ಗೆದ್ದ ಬಳಿಕ ಮತ್ತೆ 3 ಗ್ರಾಂಡ್ ಸ್ಲಾಂ ಜಯಿಸಿದೆ. ಕೊನೆಗೆ ವಿಶ್ವ ನಂ.1 ಕೂಡ ಆದೆ.

# ನೀವು ಫ್ರೆಂಚ್ ಓಪನ್ ಗೆದ್ದ ಬಳಿಕ ಸ್ಪೇನ್ ಟೆನಿಸ್​ಗೆ ತೆರೆದುಕೊಂಡಿತು. ಅಂದಿನಿಂದ ಸ್ಪೇನ್ ಟೆನಿಸ್​ನಲ್ಲಿ ಆದ ಬದಲಾವಣೆ ಏನು?

-ಹೌದು, ಸ್ಪೇನ್​ನಲ್ಲಿ ದೊಡ್ಡ ಬದಲಾವಣೆಗಳಾದವು. ಇಂದು ವಿಶ್ವದ ಅಗ್ರ ಆಟಗಾರರನ್ನು ನಾವು ಹೊಂದಿದ್ದೇವೆ. 1989ರ ಬಳಿಕ ಸ್ಪೇನ್​ನ ಮಹಿಳಾ ಟೆನಿಸ್​ನಲ್ಲಿ ಬಹುದೊಡ್ಡ ಬದಲಾವಣೆ ಕಂಡೆವು. ಇದಕ್ಕೆ ನನ್ನ ಗೆಲುವು ಕಾರಣವಾಯಿತು ಎನ್ನುವ ಅಂಶ ಬಹಳ ಹೆಮ್ಮೆ ನೀಡುತ್ತದೆ. ಆ ಬಳಿಕ ಹಲವಾರು ಆಟಗಾರ್ತಿಯರು ಬಂದರು. ಈಗ ನಡಾಲ್​ರಂಥ ವಿಶ್ವಶ್ರೇಷ್ಠ ಹೆಸರು ನಮ್ಮಲ್ಲಿದೆ. ಅವರನ್ನು ಹಿಂಬಾಲಿಸುವ ಬಹುದೊಡ್ಡ ಅಭಿಮಾನಿ ವರ್ಗವಿದೆ. ಕೆಲವೊಂದು ಆಟಗಾರ್ತಿಯರು ನನ್ನ ಕ್ರೀಡಾ ಜೀವನವನ್ನು ಹಿಂಬಾಲಿಸಿ ಟೆನಿಸ್​ನಲ್ಲಿ ಹೆಸರು ಮಾಡಿದ್ದಾರೆ ಎನ್ನುವುದು ಕೇಳಿದಾಗ ಸಂತೃಪ್ತಿ ಎನಿಸುತ್ತದೆ. ಸ್ಪೇನ್ ಟೆನಿಸ್ ಹಾಗೂ ಸ್ಪೇನ್ ಟೆನಿಸ್ ಆಟಗಾರರ ಪ್ರಶ್ನೆ ಬಂದಾಗ ನಾವು ಯಶಸ್ಸಿನ ಪಥದಲ್ಲಿದ್ದೇವೆ ಎನ್ನುವ ಅಭಿಪ್ರಾಯ ನನ್ನದು.

# ಬೆಂಗಳೂರಿಗೆ ಬಂದು ಮೂರು ದಿನಗಳಾಗಿವೆ, ಹೇಗನಿಸಿದೆ ನಮ್ಮ ನಗರ?

-ಸಿಟಿಯನ್ನು ಎಂಜಾಯ್ ಮಾಡುತ್ತಿದ್ದೇನೆ. ನನ್ನ ಟೀಮ್ ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದೆ. ಇಂದು ಇಲ್ಲಿನ ಮಕ್ಕಳೊಂದಿಗೆ ಟೆನಿಸ್ ಆಟವನ್ನು ನಾನು ಬಹಳ ಖುಷಿ ಪಟ್ಟು ಆಡಿದ್ದೇನೆ. ಈಗಿನ ದಿನಗಳಲ್ಲಿ ಭಾರತದ ಟೆನಿಸ್ ಸಾಕಷ್ಟು ಪ್ರಗತಿ ಕಂಡಿದೆ. ಅದರಲ್ಲಿ ಬೆಂಗಳೂರಿನ ಪಾತ್ರವೂ ಇದೆ ಎಂದು ನಂಬಿದ್ದೇನೆ.

# ಬಾರ್ಸಿಲೋನಾ ಬಂಬಲ್​ಬೀ ನಿಕ್​ನೇಮ್ ಬಗ್ಗೆ…

-ಇಂದಿಗೂ ವಿಶ್ವದ ಟಿವಿ-ಪತ್ರಿಕೆಗಳಲ್ಲಿ ಇದೇ ಹೆಸರಿನಿಂದ ನನ್ನನ್ನು ಕರೆಯಲಾಗುತ್ತದೆ. ಪತ್ರಕರ್ತರೊಬ್ಬರು ಮೊದಲ ಬಾರಿಗೆ ನನ್ನನ್ನು ಈ ಹೆಸರಿನಿಂದ ಕರೆದಿದ್ದರು. 1998ರ ಫ್ರೆಂಚ್ ಓಪನ್ ಗೆಲುವಿನ ವೇಳೆ ಮೊದಲ ಬಾರಿಗೆ ಈ ನಿಕ್​ನೇಮ್ ಕೇಳಿದ್ದೆ. ಟಿವಿ ನೇರಪ್ರಸಾರದ ವೇಳೆ ಇದನ್ನು ಅವರು ಹೇಳಿದ್ದರು. ಈ ನಿಕ್​ನೇಮ್ಂದಾಗಿಯೇ ಅರಾಂಟ್​ಸ್ ಸ್ಯಾಂಚೇಜ್ ಯಾರು ಎನ್ನುವುದು ಗೊತ್ತಾಗಿದೆ.

Leave a Reply

Your email address will not be published. Required fields are marked *