ಬಾಹ್ಯಾಕಾಶದಲ್ಲೂ ಇದೆ ತ್ಯಾಜ್ಯದ ಗೋಳು!

ಇತ್ತೀಚೆಗಷ್ಟೇ ಮಿಷನ್ ಶಕ್ತಿ ಪರೀಕ್ಷೆ ಮೂಲಕ ಉಪಗ್ರಹವನ್ನೇ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಕ್ಷಿಪಣಿ ತಯಾರಿಸಿರುವ ಭಾರತ ಹೆಮ್ಮೆಯಿಂದ ಬೀಗುತ್ತಿದ್ದರೆ, ಇತರ ರಾಷ್ಟ್ರಗಳು ಭಾರತದ ಸಾಧನೆಯನ್ನು ಅಚ್ಚರಿ ಕಣ್ಣುಗಳಿಂದ ನೋಡುತ್ತಿವೆ. ಅಮೆರಿಕವಂತೂ ಭಾರತದ ಪರೀಕ್ಷೆಯಿಂದ ಉಂಟಾಗಿರುವ ಬಾಹ್ಯಾಕಾಶ ತ್ಯಾಜ್ಯದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೀವ್ರತೆರನಾದ ಸಮಸ್ಯೆಯಾಗಲಿದೆ ಎಂದು ಹೇಳಿದೆ. ಇದಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ಭೂಮಿಯ ಕೆಳಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಿರುವುದರಿಂದ ತ್ಯಾಜ್ಯಗಳು 6 ತಿಂಗಳೊಳಗಾಗಿ ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ ಉರಿದು ಹೋಗಲಿವೆ ಎಂದಿದೆ. ಬಾಹ್ಯಾಕಾಶದಲ್ಲಿರುವ ತ್ಯಾಜ್ಯದ ಬಗ್ಗೆ ಅಮೆರಿಕ ಇಷ್ಟೊಂದು ಗಂಭೀರವಾಗಿ ಚಿಂತಿಸುತ್ತಿರುವುದು ಯಾವ ಕಾರಣಕ್ಕೆ? 10 ಸೆಂಟಿಮೀಟರ್​ನಷ್ಟು ದೊಡ್ಡದಾದ ತ್ಯಾಜ್ಯದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೇಗೆ ಸಮಸ್ಯೆಯಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ನಾಸಾ ಅಸಮಾಧಾನ ಹೊರಹಾಕುತ್ತಿರುವುದೇನಕ್ಕೆ?

ಭಾರತ ಮಾರ್ಚ್ 27ರಂದು ‘ಮಿಷನ್ ಶಕ್ತಿ’ ಪರೀಕ್ಷೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಸಾದ ವಿಜ್ಞಾನಿ ಬ್ರಿಡೆನ್​ಸ್ಟೀನ್ ಈ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಉಪಗ್ರಹದ 400 ತುಣುಕುಗಳಿದ್ದು, ಇದರಲ್ಲಿ 60 ತುಣುಕುಗಳು 10 ಸೆಮೀಗಿಂತ ಹೆಚ್ಚಿನ ಗಾತ್ರದ್ದಾಗಿದೆ. ಇವುಗಳಲ್ಲಿ 24 ತುಣುಕುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದತ್ತ ತೆರಳುತ್ತಿವೆ ಎಂದಿದ್ದರು. ಇದು ಬಾಹ್ಯಾಕಾಶ ಕೇಂದ್ರಕ್ಕೆ ಡಿಕ್ಕಿ ಹೊಡೆದರೆ ಭಾರಿ ಪ್ರಮಾಣದ ನಷ್ಟವಾಗಲಿದೆ ಎಂದು ಹೇಳಿದ್ದರು. ನಾಸಾದ ವಿಜ್ಞಾನಿಗಳು ಹೀಗೆ ಚಿಂತಿತರಾಗಲು ಕಾರಣವೂ ಇಲ್ಲದಿಲ್ಲ. ಬಾಹ್ಯಾಕಾಶದಲ್ಲಿರುವ ಏಕೈಕ ಶಾಶ್ವತ ಲ್ಯಾಬೋರೇಟರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ. ಇದು ಫುಟ್​ಬಾಲ್ ಮೈದಾನಕ್ಕಿಂತ ಸ್ವಲ್ಪ ದೊಡ್ಡದಾಗಿದೆ. 400 ಟನ್ ತೂಕದ ಈ ಕೇಂದ್ರ 400 ಕಿಮೀ ಎತ್ತರದಲ್ಲಿದೆ. ಬಾಹ್ಯಾಕಾಶದ ಪ್ರಯೋಗಗಳಿಗೆ ನೆರವಾಗುವ ಹಲವು ಯಂತ್ರೋಪಕರಣಗಳು ಇಲ್ಲಿದ್ದು, ಎಲ್ಲವೂ ದುಬಾರಿಯದ್ದಾಗಿದೆ. ಒಂದು ಬಾರಿಗೆ ಮೂರರಿಂದ ನಾಲ್ಕು ಗಗನಯಾನಿಗಳು ಇಲ್ಲಿ ಇರಬಹುದಾಗಿದ್ದು, ಬಾಹ್ಯಾಕಾಶ ಪ್ರಯೋಗಗಳನ್ನು ಮಾಡಲು ಇರುವ ಏಕೈಕ ವೇದಿಕೆಯಿದು.

ಸಣ್ಣ ತುಣುಕಿನಿಂದ ಸಮಸ್ಯೆಯೇನು?

ಬಾಹ್ಯಾಕಾಶದಲ್ಲಿರುವ ವಾತಾವರಣವನ್ನು ಗಣನೆಗೆ ತೆಗೆದುಕೊಂಡು ನೋಡುವುದಾದರೆ ಇಲ್ಲಿ ತ್ಯಾಜ್ಯ ಯಾವ ಗಾತ್ರದ್ದು, ಎಷ್ಟು ತೂಕದ್ದು ಎನ್ನುವುದು ಮುಖ್ಯ ವಿಷಯವಾಗಿರುವುದಿಲ್ಲ. ಇಲ್ಲಿ ತ್ಯಾಜ್ಯ ಭಾರಿ ವೇಗದಲ್ಲಿ ಸಂಚರಿಸುತ್ತದೆ. ಭಾರತ ಉಪಗ್ರಹ ಹೊಡೆದುರುಳಿಸಿರುವ ಭೂಮಿಯ ಕೆಳಕಕ್ಷೆಯಲ್ಲಿ ತ್ಯಾಜ್ಯಗಳು ಸೆಕೆಂಡಿಗೆ 8 ಮೀಟರ್ ವೇಗದಲ್ಲಿ ಸಂಚರಿಸುತ್ತವೆ. ಅಂದರೆ ಗಂಟೆಗೆ 28,000 ಕಿಮೀ! ಈ ವೇಗದಲ್ಲಿ ಸಂಚರಿಸುವ 100 ಗ್ರಾಂ ತೂಕದ ವಸ್ತು 100 ಕಿಮೀ ವೇಗದಲ್ಲಿ ಸಂಚರಿಸುವ 30 ಕೆಜಿ ತೂಕದ ಕಲ್ಲು ಮಾಡುವಷ್ಟೇ ಹಾನಿ ಮಾಡುತ್ತದೆ. ಹೀಗಾಗಿ ಭಾರತದ ಉಪಗ್ರಹದ ತ್ಯಾಜ್ಯ ಯಾವುದೇ ಉಪಗ್ರಹಕ್ಕೆ ಡಿಕ್ಕಿ ಹೊಡೆದರೂ ಅದರ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಬಲ್ಲದು.

ಈಗಾಗಲೇ ಇರುವ ತ್ಯಾಜ್ಯಗಳಿಂದ ಸಮಸ್ಯೆಯಿಲ್ಲವೇ?

ಐಎಸ್​ಎಸ್ ಮತ್ತು ಇತರ ಉಪಗ್ರಹಗಳಿಗೆ ಬಾಹ್ಯಾಕಾಶ ತ್ಯಾಜ್ಯದಿಂದ ನಿರಂತರವಾಗಿ ಸಮಸ್ಯೆಯಾಗುತ್ತಲೇ ಇದೆ. ಈ ತ್ಯಾಜ್ಯಗಳು ಯಾವ ದಾರಿಯಲ್ಲಿ ಸಂಚರಿಸುತ್ತಿವೆ ಎನ್ನುವುದನ್ನು ಆಧರಿಸಿ ಇದರಿಂದ ಆಗುವ ಪರಿಣಾಮದ ತೀವ್ರತೆ ತಿಳಿಯುತ್ತದೆ. ನಾಸಾ ಇದಕ್ಕೆಂದೇ ವಿಶೇಷ ವಿಭಾಗವೊಂದನ್ನು ಹೊಂದಿದ್ದು, ಸದ್ಯ ಇದು 23,000 ತುಣುಕುಗಳ ಬಗ್ಗೆ ನಿಗಾ ಇರಿಸಿದೆ. ಇದು ನಿರಂತರವಾಗಿ ತ್ಯಾಜ್ಯದಿಂದ ಎದುರಾಗುವ ಸಮಸ್ಯೆಗಳ ಪರಿಶೀಲನೆ ನಡೆಸುತ್ತಿರುತ್ತದೆ. ಅಗತ್ಯವಿದ್ದಲ್ಲಿ ಗ್ರೌಂಡ್ ಕಂಟ್ರೋಲ್ ಸ್ಟೇಷನ್ ಕ್ರಮ ಕೈಗೊಳ್ಳುತ್ತದೆ. ಪ್ರತಿದಿನ ಕನಿಷ್ಠ ಮೂರು ಬಾರಿಯಾದರೂ ತ್ಯಾಜ್ಯದ ಸಂಚಾರಪಥವನ್ನು ಗಮನಿಸಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಐಎಸ್​ಎಸ್​ನ ಸುತ್ತಲಿನ 25 ಕಿಮೀ*25 ಕಿಮೀ*4 ಕಿಮೀ(ಎತ್ತರ) ಪ್ರದೇಶವನ್ನು ಪ್ರವೇಶಿಸುವ ತ್ಯಾಜ್ಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತದೆ. ಇದನ್ನು ಆಧರಿಸಿ ನೋಡುವುದಾದರೆ ಭಾರತದ ಉಪಗ್ರಹ ತ್ಯಾಜ್ಯದಿಂದಲೇ ಐಎಸ್​ಎಸ್​ಗೆ ಸಮಸ್ಯೆ ಎನ್ನುವ ಹಾಗಿಲ್ಲ.

ಭಾರತ ಹೇಳಿದ್ದೇನು?

ಭಾರತದ ಕ್ಷಿಪಣಿಗೆ 1000 ಕಿಮೀ ಎತ್ತರದಲ್ಲಿರುವ ಉಪಗ್ರಹವನ್ನು ಹೊಡೆದು ರುಳಿಸುವ ಸಾಮರ್ಥ್ಯ ಇದೆ ಎನ್ನಲಾಗಿದೆ. ಆದರೆ ಇದರ ಪರೀಕ್ಷೆಯನ್ನು 300 ಕಿಮೀ ಎತ್ತರದಲ್ಲಿರುವ ಉಪಗ್ರಹದ ಮೇಲೆ ಮಾಡಲಾಗಿದ್ದು, ಇದು ಬಾಹ್ಯಾಕಾಶ ತ್ಯಾಜ್ಯವನ್ನು ಗಮನದಲ್ಲಿರಿಸಿಕೊಂಡೇ ನಡೆಸಿರುವ ಪರೀಕ್ಷೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಭೂಮಿಯ ಕೆಳಕಕ್ಷೆಯಲ್ಲಿ ಪರೀಕ್ಷೆ ನಡೆದಿರುವುದರಿಂದ ಕೆಲ ವಾರಗಳಲ್ಲೇ ತ್ಯಾಜ್ಯ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ಉರಿದು ಹೋಗಲಿದೆ ಎಂದು ಭಾರತೀಯ ವಿಜ್ಞಾನಿಗಳು ವಿವರಿಸಿದ್ದಾರೆ. ಭೂಮಿಯ ಕೆಳಕಕ್ಷೆ ಅಂದರೆ 300 ಕಿಮೀ ಎತ್ತರದಲ್ಲಿ ಅಲ್ಪಪ್ರಮಾಣದ ಗುರುತ್ವಾಕರ್ಷಣೆ ಕಂಡುಬರುತ್ತದೆ. ಹೀಗಾಗಿ ನಿಧಾನವಾಗಿಯಾದರೂ ತ್ಯಾಜ್ಯಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಲಿದ್ದು, ಗಾಳಿಯಲ್ಲಾಗುವ ಘರ್ಷಣೆಯಿಂದ ಉರಿದು ಹೋಗಲಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ, ಉಪಗ್ರಹ ಸ್ಪೋಟಿಸಿರುವ ಸ್ಥಳ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ನಡುವಿನ ಅಂತರದ ಬಗ್ಗೆಯೂ ವಿಜ್ಞಾನಿಗಳು ಪ್ರಶ್ನೆಗಳನ್ನೆತ್ತಿದ್ದಾರೆ. ಇಸ್ರೋ 300 ಕಿಮೀ ಎತ್ತರದಲ್ಲಿರುವ ಉಪಗ್ರಹವನ್ನು ಗುರಿಯಾಗಿರಿಸಿಕೊಂಡು ಪರೀಕ್ಷೆ ನಡೆಸಿತ್ತು. ಆದರೆ ಐಎಸ್​ಎಸ್ ಇರುವುದು 400 ಕಿಮೀ ಎತ್ತರದಲ್ಲಿ. ಉಪಗ್ರಹ ಸ್ಪೋಟಗೊಂಡ ಸಂದರ್ಭದಲ್ಲಿ ಇದರ ತುಣುಕುಗಳು ಹರಡಿ ಹೋಗುವ ಸಾಧ್ಯತೆ ಇದೆ. ಆದರೆ ಈ ತುಣುಕುಗಳು 50 ಕಿಮೀ ಎತ್ತರದವರೆಗೆ ಮಾತ್ರ ಹಾರಬಹುದು. ಹೀಗಿರುವಾಗ 400 ಕಿಮೀ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭಾರತದ ಪರೀಕ್ಷೆಯಿಂದ ಯಾವ ರೀತಿಯಲ್ಲಿ ಸಮಸ್ಯೆಯಾಗಲಿದೆ ಎಂದು ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ಆದರೆ ಇಸ್ರೋದಲ್ಲಿ ಬಾಹ್ಯಾಕಾಶದಲ್ಲಿರುವ ತ್ಯಾಜ್ಯದ ಪರಿಶೀಲನೆ ನಡೆಸಲು ಬೇಕಾದ ತಂತ್ರಜ್ಞಾನಗಳಿಲ್ಲ. ಇದು ನಾಸಾದ ಮೇಲೆ ಅವಲಂಬಿಸಿದೆ. ನಾಸಾ ನೀಡುವ ಮಾಹಿತಿಗಳನ್ನು ಆಧರಿಸಿಯೇ ಇದು ಉಪಗ್ರಹಗಳ ಉಡಾವಣೆ, ಉಪಗ್ರಹಗಳ ದಿಕ್ಕು ಬದಲಾವಣೆ ಮುಂತಾದ ಕಾರ್ಯಗಳನ್ನು ನಡೆಸುತ್ತದೆ. ಹೀಗಾಗಿ ‘ಮಿಷನ್ ಶಕ್ತಿ’ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಹೆಚ್ಚುವರಿಯಾಗಿ ಎಷ್ಟು ತ್ಯಾಜ್ಯವಿದೆ ಎಂದು ತಿಳಿಸಲು ಇಸ್ರೋ ಶಕ್ತವಾಗಿಲ್ಲ. ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ಇದಕ್ಕೇ ಸೀಮಿತವಾದ ನೆಟ್​ವರ್ಕ್ ಇದ್ದು, ಬಾಹ್ಯಾಕಾಶದ ತುಂಬ ರಡಾರ್ ಮತ್ತು ಆಪ್ಟಿಕಲ್ ಇನ್ಸ್​ಸ್ಟ್ರಮೆಂಟ್ ಅಳವಡಿಸಿದೆ.

ಬಾಹ್ಯಾಕಾಶ ತ್ಯಾಜ್ಯಕ್ಕೆ ಅಮೆರಿಕ ಕೊಡುಗೆಯಿಲ್ಲವೇ?

ಬಾಹ್ಯಾಕಾಶ ತ್ಯಾಜ್ಯಕ್ಕೆ ಅಮೆರಿಕ ಕೊಡುಗೆಯೂ ಅಪಾರವೇ. 1980ರ ದಶಕದಿಂದಲೇ ಹಲವು ಬಾರಿ ಈ ಪರೀಕ್ಷೆ ನಡೆಸಿದ್ದ ರಾಷ್ಟ್ರ ಅಮೆರಿಕ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಬಾಹ್ಯಾಕಾಶದಲ್ಲಿ ಉಳಿದುಕೊಂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಮಾತ್ರವೇ ಆಂಟಿ ಸೆಟಲೈಟ್ ಕ್ಷಿಪಣಿ ಪರೀಕ್ಷೆ ನಡೆಸಿದೆ. 2007ರಲ್ಲಿ ಪೆಂಗ್​ಯುುನ್-1ಸಿ ಪರೀಕ್ಷೆಯಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಬಾಹ್ಯಾಕಾಶದಲ್ಲಿ ಉಳಿದುಕೊಳ್ಳುವಂತಾಗಿದೆ. ಮೂಲಗಳ ಪ್ರಕಾರ, ಇದರಿಂದ 1.5 ಲಕ್ಷ ಸಣ್ಣ ಮತ್ತು ದೊಡ್ಡ ಗಾತ್ರದ ತ್ಯಾಜ್ಯಗಳು ಬಾಹ್ಯಾಕಾಶದಲ್ಲಿ ಸೃಷ್ಟಿಯಾಗಿದ್ದು, ಇದರಲ್ಲಿ 3,428 ದೊಡ್ಡ ಪ್ರಮಾಣದ ತ್ಯಾಜ್ಯಗಳಾಗಿವೆ. ಅಲ್ಲದೆ ಈ ಪರೀಕ್ಷೆ ಭಾರಿ ಎತ್ತರದಲ್ಲಿ ನಡೆದಿದ್ದರಿಂದ ಇದರ ತ್ಯಾಜ್ಯಗಳು ಬೇಗನೆ ನಾಶವಾಗುವುದೂ ಇಲ್ಲ.

2009ರಲ್ಲಿ ಎರಡು ಗಗನನೌಕೆಗಳ ಡಿಕ್ಕಿಯಿಂದಲೂ ಭಾರಿ ಪ್ರಮಾಣದ ತ್ಯಾಜ್ಯ ಬಾಹ್ಯಾಕಾಶವನ್ನು ಸೇರಿದೆ. ಇದೊಂದು ತೀರಾ ಅಪರೂಪದ ಘಟನೆಯಾಗಿದ್ದು 2009ರ ಫೆಬ್ರವರಿಯಲ್ಲಿ ರಷ್ಯಾದ ಉಪಗ್ರಹ ಕಾಸ್ಮೋಸ್ 2251 ಮತ್ತು ಅಮೆರಿಕ ಕಂಪನಿಯೊಂದರ ಸಂವಹನ ಉಪಗ್ರಹ ಇರಿಡಿಯಂ 33 ನಡುವೆ ಡಿಕ್ಕಿ ಸಂಭವಿಸಿ ಹೆಚ್ಚಿನ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿತ್ತು.