ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಫುಟ್​ಪಾತ್

ಕಳಸ: ಇಲ್ಲಿಯ ಮುಖ್ಯ ರಸ್ತೆ ಅಂಚಿನಲ್ಲಿರುವ ಫುಟ್​ಪಾತ್​ನ ಚಪ್ಪಡಿ ಕಲ್ಲುಗಳು ಮುರಿದು ಹೋಗಿ ಸಾರ್ವಜನಿಕರು ಹಾಗೂ ಮಕ್ಕಳ ಪ್ರಾಣಕ್ಕೆ ಮುಳುವಾಗುತ್ತಿದೆ.

ಕಳಸ ಮುಖ್ಯ ರಸ್ತೆಯ ಕಲಶೇಶ್ವರ ದೇವಸ್ಥಾನದಿಂದ ಅಂಬಾತೀರ್ಥದ ತಿರುವುವರೆಗೆ ಕಾಂಕ್ರಿಟ್ ಹಾಗೂ ಡಾಂಬರೀಕರಣ ಮಾಡಲಾಗಿದೆ. ರಸ್ತೆಯ ಎರಡೂ ಅಂಚಿನಲ್ಲಿ ಫುಟ್​ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ ಈ ಫುಟ್​ಪಾತ್ ಅಳವಡಿಸಿದ ಕಾಂಕ್ರಿಟ್ ಚಪ್ಪಡಿಗಳು ಅಲ್ಲಲ್ಲಿ ಮುರಿದು ಹೋಗಿ ರಾಡುಗಳು ಮೇಲೆದ್ದು ಜನರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ.

ಈ ರಸ್ತೆಯ ಅಂಚಿನಲ್ಲಿ ಪ್ರತಿಯೊಂದು ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಅಂಗನವಾಡಿಗಳು ಇವೆ. ನಿತ್ಯ ನೂರಾರು ಜನರ ಇದರ ಮೇಲೆ ಸಂಚಾರ ಮಾಡುತ್ತಾರೆ. ಈ ಫುಟ್​ಪಾತ್​ನಲ್ಲಿ ನಡೆದುಕೊಂಡು ಹೋಗುವ ಅದೆಷ್ಟೋ ನಾಗರಿಕರು ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಅಂಗನವಾಡಿಗೆ ಹೋಗುತ್ತಿದ್ದ ಮಗುವಿನ ಕಾಲು ಫುಟ್​ಪಾತ್ ಒಳಗೆ ಸಿಕ್ಕಿ ಹಾಕಿಕೊಂಡ ಪರಿಣಾಮ ಆಸ್ಪತ್ರೆ ಸೇರಬೇಕಾಯಿತು. ಮಹಿಳೆಯೊಬ್ಬರು ನಡೆದುಕೊಂಡು ಹೋಗುವಾಗ ಕಾಂಕ್ರಿಟ್ ಚಪ್ಪಡಿಯಿಂದ ಕಿತ್ತುಹೋದ ರಾಡು ಕಾಲಿಗೆ ಸಿಕ್ಕಿ ಹಾಕಿಕೊಂಡು ಬಿದ್ದು ಪೆಟ್ಟು ಮಾಡಿಕೊಂಡ ಘಟನೆ ನಡೆದಿದೆ. ಕಳಸ ಸರ್ಕಾರಿ ಆಸ್ಪತ್ರೆ ಸಮೀಪವೆ ವೃದ್ಧರೊಬ್ಬರು ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹೀಗೆ ಫುಟ್​ಪಾತ್ ಗುಂಡಿಗೆ ಬಿದ್ದವರ ಪಟ್ಟಿಯೇ ದೊಡ್ಡದಾಗುತ್ತದೆ.

ಇದರಿಂದ ಬೇಸತ್ತ ಪಾದಚಾರಿಗಳು ಫುಟ್​ಪಾತ್ ಸಹವಾಸವೇ ಬೇಡ ಎಂದು ರಸ್ತೆಯ ಮೇಲೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.

ಪಿಡಬ್ಲ್ಯುಡಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಕೂಡ ಫುಟ್​ಪಾತ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸ್ಥಳಿಯ ಇಂಜಿನಿಯರುಗಳಿಗೆ ಕಾಂಕ್ರಿಟ್ ಚಪ್ಪಡಿಗಳನ್ನು ಸರಿಪಡಿಸಲು ತಿಳಿಸಿದ್ದರು. ಅಲ್ಲದೆ ಚಪ್ಪಡಿ ಶಿಥಿಲಗೊಳ್ಳಲು ಯಾರು ಕಾರಣರೋ ಅವರನ್ನು ಗುರುತಿಸಿ ಅವರ ಮೇಲೆ ಪ್ರಕರಣವನ್ನು ದಾಖಲಿಸಿ ಎಂದು ಸೂಚಿಸಿದ್ದರು. ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಫುಟ್​ಪಾತ್ ಸಮಸ್ಯೆ ಬಗ್ಗೆ ಗಮನ ಸೆಳೆದು ಸರಿಪಡಿಸುವಂತೆ ಕೇಳಿಕೊಂಡಿದ್ದರು. ಆದರೆ ಇದ್ಯಾವುದರ ಬಗ್ಗೆಯೂ ಸಂಬಂಧಪಟ್ಟವರು ತಲೆಕೆಡಿಸಿಕೊಂಡಿಲ್ಲ.

ಕಳಸ ಮುಖ್ಯ ರಸ್ತೆಯ ಕಾಂಕ್ರೀಟಿಕರಣ ಯಾವಾಗ ಆಯಿತೋ ಅಲ್ಲಿಂದಲೇ ಅಸಮರ್ಪಕ ಫುಟ್​ಪಾತ್ ಬಗ್ಗೆ ಸಾರ್ವಜನಿಕರು ಚಕಾರವೆತ್ತುತ್ತಲೇ ಬಂದಿದ್ದಾರೆ. ಆದರೆ ಅವ್ಯವಸ್ಥೆ ಮಾತ್ರ ಮುಂದುವರಿಯುತ್ತಲೇ ಇದೆ ಎನ್ನುತ್ತಾರೆ ಸಾರ್ವಜನಿಕರು.