ಪಿಎಸ್​ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ಬಾಗಲಕೋಟೆ: ದುರ್ವರ್ತನೆ ತೋರುತ್ತಿರುವ ಇಳಕಲ್ಲ ನಗರಠಾಣೆ ಪಿಎಸ್​ಐ ನಾಗರಾಜ ಖಿಲಾರಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಇಳಕಲ್ಲ ನಗರದ ಬೀದಿ ವ್ಯಾಪಾರಸ್ಥರು ಸೋಮವಾರ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಶಾಸಕ ದೊಡ್ಡಗೌಡ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ಮೂಲಕ ಎಸ್ಪಿ ಕಚೇರಿಗೆ ಆಗಮಿಸಿದ ಬೀದಿಬದಿ ವ್ಯಾಪಾರಸ್ಥರು ಪಿಎಸ್​ಐ ವಿರುದ್ಧ ಘೊಷಣೆ ಕೂಗಿದರು. ಬಳಿಕ ಎಸ್ಪಿಗೆ ಮನವಿ ಸಲ್ಲಿಸಿದರು. ಪಿಎಸ್​ಐ ನಾಗರಾಜ ಖಿಲಾರೆ ಬೀದಿ ವ್ಯಾಪಾಸ್ಥರು, ಜನ ಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರ ವರ್ತನೆಯಿಂದ ಭಯದ ವಾತಾವರಣ ನಿರ್ವಣವಾಗಿದೆ. ಇದರಿಂದ ಪೊಲೀಸ್ ಇಲಾಖೆಗೂ ಕಳಂಕ ಉಂಟಾಗಿದೆ. ಈ ಕುರಿತು ದೂರಿದರೂ ಇಲಾಖೆ ಮೌನ ವಹಿಸಿರುವುದು ಸರಿಯಲ್ಲ. ಕೂಡಲೇ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪಿಎಸ್​ಐ ನಾಗರಾಜ ಖಿಲಾರಿ ಭಾನುವಾರ ಇಳಕಲ್ಲ ನಗರದ ಯುವಕನ ಮೇಲೆ ಸುಖಾಸುಮ್ಮನೆ ಹಲ್ಲೆ ಮಾಡಿದ್ದಾರೆ. ಬೀದಿ ವ್ಯಾಪಾರಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಅನವಶ್ಯಕವಾಗಿ ಬೆದರಿಕೆ ಹಾಕಿ ಹಣ ಕಿತ್ತುಕೊಳ್ಳುತ್ತಿದ್ದಾರೆ. ಈ ರೀತಿ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ನಾಗರಾಜ ಖಿಲಾರೆ ಅವರನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ ನಾಗರಿಕರು ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಪರುತಗೌಡ ಪಾಟೀಲ, ಚೋಳಪ್ಪ ಇಂಡಿ, ವೆಂಕಟೇಶ ಪೋತ, ವೆಂಕಟೇಶ ಗುಡಗುಂಟಿ ಇತರರು ಇದ್ದರು. 15ಕ್ಕೂ ಹೆಚ್ಚು ಕ್ರೂಸರ್ ವಾಹನದಲ್ಲಿ ಆಗಮಿಸಿದ ನೂರಾರು ಬೀದಿ ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದೂರು ನೀಡಿದ ಪಿಎಸ್​ಐ: ಇಳಕಲ್ಲ (ಗ್ರಾ): ನಗರದ ಪಿಎಸ್​ಐ ನಾಗರಾಜ ಖಿಲಾರಿ ಹಾಗೂ ಪೊಲೀಸ್ ಸಿಬ್ಬಂದಿ ಸಿ.ಐ. ಬಳಿಗೇರ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವರಾಜ ಚಿಲವೇರಿ ಹಾಗೂ ಇತರ ಮೂವರು ನಗರದ ಚವಾಣ್ ಪ್ಲಾಟ್​ನಲ್ಲಿ ಮದ್ಯ ಸೇವಿಸುತ್ತ ಕುಳಿತಿದ್ದಾಗ ದ್ವಿಚಕ್ರ ವಾಹನ ವಶಕ್ಕೆ ಪಡೆದಾಗ ಠಾಣೆಗೆ ಆಗಮಿಸಿದ ಶಿವರಾಜ ಚಿಲವೇರಿ ಹಾಗೂ ಇತರ ಮೂವರು ನಮಗೆ ನೋಟಿಸ್ ಏಕೆ ನೀಡಿದ್ದೀರಿ ಎಂದು ಪ್ರಶ್ನಿಸಿ ನನ್ನ ಹಾಗೂ ಪೇದೆ ಸಿ.ಐ. ಬಳಿಗೇರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಿಎಸ್​ಐ ಖಿಲಾರಿ ದೂರು ನೀಡಿದ್ದಾರೆ. ಎಎಸ್​ಐ ಕದಂ ಪ್ರಕರಣ ದಾಖಲಿಸಿಕೊಂಡಿದ್ದು. ಪಿಎಸ್​ಐ ಹಾಗೂ ಪೇದೆ ಇಳಕಲ್ಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.