ಕಳುವಾಗಿರುವ 10 ಲಕ್ಷ ರೂ. ಹುಡುಕಿಕೊಡಿ ಎಂದು ವಿಧಾನಸಭೆಯಲ್ಲಿ ಗಳಗಳನೆ ಅತ್ತ ಶಾಸಕ

ಲಖನೌ: ನನ್ನ 10 ಲಕ್ಷ ರೂ. ಕಳ್ಳತನವಾಗಿದೆ. ದಯವಿಟ್ಟು ಅದನ್ನು ಹುಡುಕಿಕೊಡಿ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಮಾಜವಾದಿ ಪಕ್ಷದ ಶಾಸಕರೊಬ್ಬರು ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಗಳಗಳನೆ ಅತ್ತಿದ್ದಾರೆ.

ಸೋಮವಾರ ವಿಧಾನಸಭೆಯ ಕಲಾಪದ ವೇಳೆ ಸದನದಲ್ಲಿ ಮಾತನಾಡಿದ ಅಜಮ್​ಗಢದ ಮೆಹಾನಗರ ವಿಧಾನಸಭೆ ಕ್ಷೇತ್ರದ ಶಾಸಕ ಕಲ್ಪನಾಥ್​ ಪಾಸ್ವಾನ್​ ಅವರು ಅಜಮ್​ಗಢದ ಹೋಟೆಲ್​ ಒಂದರಲ್ಲಿ ನನ್ನ 10 ಲಕ್ಷ ರೂ. ಕಳ್ಳತವಾಗಿದೆ. ಒಂದೂವರೆ ತಿಂಗಳಿಂದ ನಾನು ಎಫ್​ಐಆರ್​ ದಾಖಲಿಸಲು ಪರದಾಡುತ್ತಿದ್ದೇನೆ. ಆದರೆ ಪೊಲೀಸರು ಎಫ್​ಐಆರ್​ ದಾಖಲಿಸಿಕೊಳ್ಳುತ್ತಿಲ್ಲ. ನನಗೆ ಇಲ್ಲಿ ನ್ಯಾಯ ಸಿಗದಿದ್ದರೆ ನಾನು ಬೇರೆ ಎಲ್ಲಿಗೆ ಹೋಗಲಿ. ನಾನೊಬ್ಬ ಬಡ ಕೃಷಿಕ, ನನ್ನ ಹಣವನ್ನು ಹುಡುಕಿಕೊಡಿ ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಳುತ್ತಾ ಬೇಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್​ ಕುಮಾರ್​ ಖನ್ನಾ ಅವರು ನಿಮಗೆ ನ್ಯಾಯ ದೊರಕಿಸಿಕೊಡಲು ಪೂರ್ಣ ಪ್ರಯತ್ನ ಮಾಡಲಾಗುವುದು. ಎಫ್​ಐಆರ್​ ದಾಖಲಿಸಿಕೊಂಡು ಕಳ್ಳರನ್ನು ಬಂಧಿಸಲು ಕ್ರಮ ತೆಗೆದುಕೊಳ್ಳುವಂತೆ ಗೃಹ ಇಲಾಖೆಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)