ಎಸ್​ಪಿ, ಕರ್ನಾಟಕದ ಸಿಂಗಂ ಖ್ಯಾತಿಯ ಕೆ. ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ?

ಬೆಂಗಳೂರು: ಸಾಕಷ್ಟು ಜನರಿಂದ ಸೂಪರ್​ಕಾಪ್​, ಸಿಂಗಂ ಎಂದು ಕರೆಸಿಕೊಳ್ಳುವ, ಯುವಕರ ಪಾಲಿನ ರೋಲ್​ ಮಾಡಲ್​, ಸಾಮಾನ್ಯ ಜನರ ಪಾಲಿನ ಆಶಾಕಿರಣರಾದ, ದಕ್ಷ ಐಪಿಎಸ್​ ಅಧಿಕಾರಿ ಕೆ.ಅಣ್ಣಾಮಲೈ ತಮ್ಮ ಐಪಿಎಸ್​ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ.

ಸಾಮಾಜಿಕ‌ ಸೇವೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗಿದ್ದು, ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸದ್ಯ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಅಣ್ಣಾಮಲೈ ಅವರು, ಇದಕ್ಕೂ ಮುನ್ನ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್​ಪಿಯಾಗಿ ಕಾರ್ಯನಿರ್ವಹಿಸಿದ್ದರು.

ಅಣ್ಣಾಮಲೈ ಅವರು 2011 ಐಪಿಎಸ್​ ಬ್ಯಾಚ್​ನ ಅಧಿಕಾರಿಯಾಗಿದ್ದು, ಇವರು ಬಿಇ (ಮೆಕ್ಯಾನಿಕಲ್​ ಇಂಜಿನಿಯರಿಂಗ್​), ಎಂಬಿಎ ಪದವಿಯನ್ನು ಪಡೆದಿದ್ದಾರೆ. (ದಿಗ್ವಿಜಯನ್ಯೂಸ್​)