ನೈತಿಕ ಪೊಲೀಸ್​ಗಿರಿ ನಡೆಸಿದರೆ ಹುಷಾರ್​: ಚಿಕ್ಕಮಗಳೂರು ಎಸ್ಪಿ ಖಡಕ್​ ಎಚ್ಚರಿಕೆ

ಬಾಳೆಹೊನ್ನೂರು: ಜಿಲ್ಲೆಯಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ಯಾವುದೇ ವ್ಯಕ್ತಿ, ಸಂಘಟನೆಗಳು ನೈತಿಕ ಪೊಲೀಸ್​ಗಿರಿ ನಡೆಸಲು ಯತ್ನಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಗೋವುಗಳ ಕಳ್ಳತನ ಕುರಿತು ಪೊಲೀಸ್ ಇಲಾಖೆ ದಿಟ್ಟ ಕ್ರಮ ತೆಗೆದುಕೊಳ್ಳುತ್ತಿದೆ. ಅಕ್ರಮವಾಗಿ ಗೋವು ಸಾಗಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋವುಗಳ ಕಳ್ಳತನದ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರಿಂದ ರಾತ್ರಿ ಪಾಳಿ ವ್ಯವಸ್ಥೆ ಹೆಚ್ಚು ಮಾಡಲಾಗಿದೆ. ಜಿಲ್ಲೆಯ ವಿವಿಧೆಡೆ ಹೆಚ್ಚಿನ ಚೆಕ್​ಪೋಸ್ಟ್​ಗಳನ್ನು ತೆರೆಯಲಾಗುವುದು. ಜಿಲ್ಲೆಯಿಂದ ದಕ್ಷಿಣ ಕನ್ನಡಕ್ಕೆ ತೆರಳುವ ಗಡಿಭಾಗವಾದ ಕೊಟ್ಟಿಗೆಹಾರ, ತನಿಕೋಡು ಬಳಿ ವಿಶೇಷ ಚೆಕ್​ಪೋಸ್ಟ್ ತೆರೆದು ಎರಡೂ ಕಡೆಗಳಲ್ಲಿ ತಲಾ ಒಂದೊಂದು ಡಿಆರ್ ತುಕಡಿ ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.

ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಎಲ್ಲ ವಾಹನಗಳನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಲಾಗುವುದು. ಇದರಿಂದ ಈ ಭಾಗದಲ್ಲಿ ನಡೆಯುವ ಅಕ್ರಮ ಗೋ ಸಾಗಣೆ ಪ್ರಕರಣಗಳಿಗೆ ಕಡಿವಾಣ ಬೀಳುವುದು. ಇತ್ತೀಚೆಗೆ ಚಾರ್ವಡಿ ಘಾಟ್​ಗೆ ಕೊಲೆ ಮಾಡಿ ಶವ ತಂದು ಎಸೆಯುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚೆಕ್​ಪೋಸ್ಟ್, ವಾಹನ ತಪಾಸಣೆಯಿಂದ ಇಂತಹ ಪ್ರಕರಣಗಳಿಗೂ ತಡೆ ಬೀಳಲಿದೆ ಎಂದರು.