ಕಳಸದ ಮನೆಯಲ್ಲಿ ಸ್ಪೋಟಕ ವಸ್ತು ಪತ್ತೆ, ಓರ್ವ ಶಂಕಿತ ಆರೋಪಿ ವಶಕ್ಕೆ

ಕಳಸ: ಮನೆ ಮಹಡಿ ಮೇಲೆ ಸ್ಪೋಟಕ ಸಾಮಗ್ರಿ ಸಂಗ್ರಹಿಸಿದ್ದ ಆರೋಪದಡಿ ಓರ್ವನನ್ನು ಮಂಗಳವಾರ ಕಳಸ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಳಸ ಪಟ್ಟಣದಲ್ಲಿ ಎರಡು ದಶಕಗಳಿಂದ ಅಡಕೆ, ಕಾಫಿ, ಕಾಳುಮೆಣಸು ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಕಳಸ ಪೊಲೀಸರು ಪಟ್ಟಣದಲ್ಲಿರುವ ಆರೋಪಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದಾಗ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್​ಗಳು ಪತ್ತೆಯಾಗಿವೆ. ಪೊಲೀಸರು ಶಂಕಿತ ಆರೋಪಿ ಮತ್ತು ಮನೆಯ ಸಿಸಿ ಟಿವಿ ಫುಟೇಜ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿ ಪರಿಶೀಲಿಸಿದರು.

ಫೆಬ್ರವರಿ ತಿಂಗಳಲ್ಲಿ ಕಳಸ ಹೋಬಳಿಯ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರಿಕಲ್ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ತನಿಖಾ ಠಾಣೆ ಮೇಲೆ ಕಿಡಿಗೇಡಿಗಳು ಎರಡು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದರು. ಘಟನೆಯಲ್ಲಿ ತನಿಖಾ ಠಾಣೆ ಸುಟ್ಟುಹೋಗಿತ್ತು. ಆರಂಭದಲ್ಲಿ ಈ ಘಟನೆ ನಕ್ಸಲರ ಕೃತ್ಯವೆಂದು ಶಂಕಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ ಈ ಘಟನೆಯಲ್ಲಿ ನಕ್ಸಲರ ಪಾತ್ರವಿಲ್ಲ ಎಂದು ಎಸ್ಪಿ ಹರೀಶ್ ಪಾಂಡೆ ಸ್ಪಷ್ಟಪಡಿಸಿದ್ದರು.

ತನಿಖಾ ಠಾಣೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬಂಧಿತ ಆರೋಪಿಗೂ ಚೆಕ್​ಪೋಸ್ಟ್ ಘಟನೆಗೂ ಸಂಬಂಧವಿದೆಯೇ ಎನ್ನುವ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಆತಂಕದಲ್ಲಿ ಕಳಸ ಜನತೆ: ಕಳಸ ಪಟ್ಟಣದ ಮನೆಯೊಂದರಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕಳಸ ಹೋಬಳಿ ಜನತೆ ಬೆಚ್ಚಿಬಿದ್ದಾರೆ. ಕಳಸ ಹೋಬಳಿಯಲ್ಲಿ ನಕ್ಸಲ್​ಪೀಡತ ಪ್ರದೇಶವೂ ಇದೆ. ಕೆಲವೊಮ್ಮೆ ನಕ್ಸಲರೊಂದಿಗೆ ಪೊಲೀಸರ ಗುಂಡಿನ ಚಕಮಕಿ ನಡೆದಿರುವ ಘಟನೆ ಹೊರತುಪಡಿಸಿ ಮನೆಯಲ್ಲಿ ಸ್ಪೋಟಕಗಳನ್ನು ಅಡಗಿಸಿಟ್ಟ ಘಟನೆ ಇದೇ ಪ್ರಥಮ ಬಾರಿಗೆ ಬೆಳಕಿಗೆ ಬಂದಿರುವುದರಿಂದ ಕಳಸ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕಳಸದಲ್ಲಿ ಈವರೆಗೂ ಸಾಮರಸ್ಯ ಕದಡುವ ಭಯೋತ್ಪಾದಕ ಚಟುವಟಿಕೆಗಳು ನಡೆದಿಲ್ಲ. ಮೊದಲ ಬಾರಿಗೆ ಸ್ಪೋಟಕಗಳು ಮನೆಯಲ್ಲಿ ಸಿಕ್ಕಿರುವುದರಿಂದ ಜನರು ಭಯಗೊಂಡಿದ್ದಾರೆ.