ಬೀದಿ ಕಾಮಣ್ಣರ ವಿರುದ್ಧ ರೌಡಿಶೀಟ್

ಕೊಳ್ಳೇಗಾಲ: ಹೆಣ್ಣು ಮಕ್ಕಳಿಗೆ ತೊಂದರೆ ನೀಡುವ ಬೀದಿ ಕಾಮಣ್ಣರ ವಿರುದ್ಧ ಆಯಾ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟ್ ತೆರೆಯಲಾಗುವುದು ಎಂದು ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಭರವಸೆ ನೀಡಿದರು.

ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು, ಕೊರತೆ ಹಾಗೂ ದೂರುಗಳನ್ನು ಆಲಿಸಿ ಸ್ಥಳದಲ್ಲಿಯೇ ಪ್ರತಿಕ್ರಿಯಿಸಿ ಮಾತನಾಡಿದರು.

ಜನರ ದೂರು ಮತ್ತು ಖಚಿತ ಮಾಹಿತಿ ಆಧರಿಸಿ ಪುಂಡ, ಪೋಕರಿ ಮತ್ತು ಬೀದಿ ಕಾಮಣ್ಣರನ್ನು ಪತ್ತೆಯಚ್ಚಿ ಅವರ ವಿರುದ್ಧ ರೌಡಿ ಶೀಟ್ ತೆರೆಯಲು ಆಯಾ ಠಾಣಾ ಪಿಎಸ್‌ಐಗಳಿಗೆ ಸೂಚಿಸುತ್ತೇನೆ. ತೊಂದರೆ ಅನುಭವಿಸುವ ಹೆಣ್ಣು ಮಕ್ಕಳನ್ನು ಆಯಾ ಶಾಲೆಯಲ್ಲಿ ಪೊಲೀಸರು ಭೇಟಿ ಮಾಡಿ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಸಂಚಾರ ನಿಯಮ ಪಾಲನೆ, ಅಪಘಾತ ತಡೆ ಹಾಗೂ ವಾಹನ ಕಳವು ಪ್ರಕರಣವನ್ನು ನಿಯಂತ್ರಿಸುವಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಪರಿಣಾಮ, 2016ರಲ್ಲಿ ಜಿಲ್ಲೆಯಲ್ಲಿ ವಾಹನ ತಪಾಸಣೆ ನಡೆಸಿ 25 ಸಾವಿರ ಜನರಿಗೆ ದಂಡ ಹಾಕಲಾಗಿದೆ. 2017ರಲ್ಲಿ 55, 2018ರಲ್ಲಿ 85 ಸಾವಿರ ಜನರಿಗೆ ದಂಡ ಹಾಕಲಾಗಿದ್ದು, ಈ ಮೂಲಕ ವಾಹನ ಚಾಲಕರು ಸಂಚಾರ ನಿಯಮ ಪಾಲಿಸಲು ಕಾನೂನು ರೀತಿಯಲ್ಲಿ ಅರಿವು ಮೂಡಿಸಲಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದರು.

ರಶೀದಿ ನೋಡಿ ದಂಡ ಪಾವತಿಸಿ: ವಾಹನ ತಪಾಸಣೆ ವೇಳೆ ಪೊಲೀಸರು ರಶೀದಿ ರಹಿತವಾಗಿ ದಂಡ ಪಾವತಿಸಿಕೊಳ್ಳಲು ಮುಂದಾದರೆ ರಾಜಿಯಾಗಬೇಡಿ. ರಶೀದಿ ನೋಡಿ ದಂಡದ ಹಣ ನೀಡಿ. ಲಂಚ ಪಡೆದರೆ ತಕ್ಷಣ ನನಗೆ ಮಾಹಿತಿ ನೀಡಿದಲ್ಲಿ ಪೊಲೀಸರ ವಿರುದ್ಧ ಕ್ರಮ ಜರುಗಿಸುತ್ತೇನೆ. ಆಟೋ ಸೇರಿ ಇತರೆ ಪ್ರಯಾಣಿಕರ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಕರೆದೋಯುವವರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಎಸ್ಪಿ ಹೇಳಿದರು.

ನೀವು ಕೊಳ್ಳೇಗಾಲಕ್ಕೂ ಎಸ್ಪಿಯಲ್ಲವೇ? : ಸಭೆಯಲ್ಲಿ ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಸುಂದರ್‌ರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲಾ ಕೇಂದ್ರದ ಹೆದ್ದಾರಿ ಬದಿಯನ್ನು ನಿಲ್ದಾಣವನ್ನಾಗಿಸಿಕೊಂಡಿರುವ ವಾಹನಗಳ ವಿರುದ್ಧ ನೀವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೀರಿ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಅವರನ್ನು ಪ್ರಶಂಸಿದರಲ್ಲದೆ, ನೀವು ಕೇವಲ ಚಾಮರಾಜನಗರ ಸಿಟಿಗೆ ಮಾತ್ರ ಎಸ್ಟಿಯೇ ಅಥವಾ ಕೊಳ್ಳೇಗಾಲಕ್ಕೂ ಎಸ್ಪಿಯೇ ಎಂದು ನೇರವಾಗಿ ಪ್ರಶ್ನಿಸಿದರು.

ಕೊಳ್ಳೇಗಾಲದ ಮುಖ್ಯರಸ್ತೆ ಬದಿಯಲ್ಲಿ ಪ್ರಯಾಣಿಕರು ಹತ್ತಲೆಂದು 10 ನಿಮಿಷಕ್ಕೂ ಹೆಚ್ಚು ಕಾಲ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇತರೆ ರಸ್ತೆಗಳಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸುತ್ತವೆ. ಶಾಲೆಗಳ ಬಳಿ ಹುಡುಗಿಯರನ್ನು ಚುಡಾಯಿಸಲಾಗುತ್ತಿದೆ. ಬೇಕಿದ್ದರೆ ಇದೆಲ್ಲವನ್ನು ನಿಮಗೆ ವಾಟ್ಸಪ್ ಮಾಡುತ್ತೇನೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕೊಳ್ಳೇಗಾಲದಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಇಲ್ಲಿ ಟ್ರಾಫಿಕ್ ಠಾಣೆ ಆರಂಭಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಠಾಣೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ. ಈಗಾಗಲೇ ಇಲ್ಲಿನ ಪೊಲೀಸರಿಗೆ ಸಮಸ್ಯೆ ನಿವಾರಿಸಲು ಸೂಚನೆ ನೀಡಲಾಗಿದೆ ಎಂದರು.

ನಗರಸಭೆ ಮಾಜಿ ಉಪಾಧ್ಯಕ್ಷ ಅಕ್ಮಲ್‌ಪಾಷ, ದೊಡ್ಡಿಂದುವಾಡಿ ಗ್ರಾ.ಪಂ.ಸದಸ್ಯ ಅಕ್ರಂಪಾಷ, ಚೆಲುವನಹಳ್ಳಿ ಮಲ್ಲಿಕಾರ್ಜುನಪ್ಪ, ಕುಣಗಳ್ಳಿ ಮರಿಸ್ವಾಮಿ, ಅಣಗಳ್ಳಿ ದಶರಥ್, ಸತ್ತೇಗಾಲದ ಜಯಚಂದ್ರ, ತಾ.ಪಂ.ಮಾಜಿ ಅಧ್ಯಕ್ಷ ಪುಟ್ಟರಾಜು, ಧನಗೆರೆ ಸುವರ್ಣ, ಹೊಸಮಾಲಂಗಿ ಬಸವರಾಜು, ಮಧುವನಹಳ್ಳಿ ಗ್ರಾ.ಪಂ.ಸದಸ್ಯ ಸತೀಶ್, ಅಧ್ಯಕ್ಷೆ ಡಾ.ಯಶೋಧ, ಕುಂತೂರು ಗ್ರಾ.ಪಂ.ಉಪಾಧ್ಯಕ್ಷ ಕುಮಾರಸ್ವಾಮಿ ಅವರು ಗ್ರಾಮ ವ್ಯಾಪ್ತಿಯ ಕೆಲ ಸಮಸ್ಯೆಗಳ ಕುರಿತು ಮಾತನಾಡಿ ಗಮನ ಸೆಳೆದರು.

ಡಿವೈಎಸ್ಪಿ ಪುಟ್ಟಮಾದಯ್ಯ, ಸಿಪಿಐ ಆರ್.ಶ್ರೀಕಾಂತ್, ಪಿಎಸ್‌ಗಳಾದ ವಿ.ಸಿ.ವನರಾಜು, ವೀರಭದ್ರಪ್ಪ, ವೀಣಾನಾಯಕ್ ಇದ್ದರು. ಇದೇ ವೇಳೆ ಇತ್ತೀಚೆಗೆ ತಿಮ್ಮರಾಜಿಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಸಿದ ಉತ್ತಮ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಕುರಿತ ಪ್ರಬಂಧ ವಿಜೇತ 12 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.