ಎಸ್‌ಪಿ-ಬಿಎಸ್‌ಪಿ ಮೈತ್ರಿ ಘೋಷಣೆ, ಇದೊಂದು ಅಪಾಯಕಾರಿ ತಪ್ಪು ಎಂದ ಕಾಂಗ್ರೆಸ್‌!

ಲಖನೌ: ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಉತ್ತರಪ್ರದೇಶದಲ್ಲಿ ಗೆಲ್ಲಲು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್‌ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಪ್ಲ್ಯಾನ್‌ ರೂಪಿಸಿದ್ದರೆ, ಇತ್ತ ಕಾಂಗ್ರೆಸ್‌ ಈ ಬೆಳವಣಿಗೆಯನ್ನು ಇದೊಂದು ಅಪಾಯಕಾರಿ ತಪ್ಪು ಎಂದು ವರ್ಣಿಸಿದೆ.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಮೈತ್ರಿ ಕುರಿತು ಇಂದು ಅಧಿಕೃತ ಘೋಷಣೆ ಸಾಧ್ಯತೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ಸಿದ್ಧ ಎಂದು ಹೇಳಿದೆ.

ನಿನ್ನೆಯಷ್ಟೇ ಮಾತನಾಡಿದ್ದ ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ನಡುವಿನ ಮೈತ್ರಿ ರಾಹುಲ್ ಗಾಂಧಿಯವರ ಪಕ್ಷವನ್ನು ಒಳಗೊಂಡಿದೆಯೇ ಇಲ್ಲವೇ ಎಂಬ ಬಗ್ಗೆ ನೇರ ಉತ್ತರವನ್ನು ನೀಡಲು ನಿರಾಕರಿಸಿದ್ದರು.

ಮಹಾಘಟಬಂಧನ್ ಅಥವಾ ವಿಪಕ್ಷಗಳ ಮೈತ್ರಿಯು ದೊಡ್ಡ ಅಪಾಯಕಾರಿ ತಪ್ಪು ಮತ್ತು ರಾಜ್ಯದಲ್ಲಿ ಒಬ್ಬಂಟಿಯಾಗಿ ಚುನಾವಣೆಯನ್ನು ಎದುರಿಸಲು ಸಿದ್ಧವಿದೆ. ನಾವು ಇವತ್ತು ಕಷ್ಟದ ದಿನಗಳಲ್ಲಿರಬಹುದು, ಆದರೆ ಅವರು ನಮ್ಮನ್ನ ನಿರ್ಲಕ್ಷಿಸಿದ್ದು ದೊಡ್ಡ ತಪ್ಪು ಎಂದು ಸಾಬೀತು ಮಾಡುತ್ತೇವೆ. ಪ್ರತಿಯೊಬ್ಬರು ಅದನ್ನು ಅರಿತಿರುವ ಕಾರಣದಿಂದಾಗಿ ಭವಿಷ್ಯದಲ್ಲಿ ಸಂತೋಷ ಮತ್ತು ಸಾಮರಸ್ಯದ ಪರಿಹಾರವನ್ನು ಕಾಣುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಗ್ವಿ ತಿಳಿಸಿದ್ದಾರೆ.

80 ಲೋಕಸಭಾ ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ 73 ಸ್ಥಾನಗಳಲ್ಲಿ ಈ ಹಿಂದೆ ಬಿಜೆಪಿ ಜಯ ಸಾಧಿಸಿತ್ತು.
ಅಮೇತಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳನ್ನು ಮಾತ್ರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಬಿಟ್ಟುಕೊಡಲು ಮಾಯಾವತಿ ಮತ್ತು ಅಖಿಲೇಶ್‌ ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

Leave a Reply

Your email address will not be published. Required fields are marked *