ಕೈಬಿಟ್ಟು ಸೈಕಲ್ ಏರಿದ ಆನೆ

ಲಖನೌ: ಕೇಂದ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಸಮಾಜವಾದಿ (ಎಸ್​ಪಿ) ಹಾಗೂ ಬಹುಜನ ಸಮಾಜ (ಬಿಎಸ್​ಪಿ) ಪಕ್ಷಗಳು ಮೈತ್ರಿ ಅಂತಿಮಗೊಳಿಸಿರುವುದನ್ನು ಅಧಿಕೃತವಾಗಿ ಘೋಷಿಸಿವೆ.

ಉಭಯ ಪಕ್ಷಗಳ ಮುಖಂಡರಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಮೈತ್ರಿ ತೀರ್ವನವನ್ನು ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸಿದರು.

ಉತ್ತರಪ್ರದೇಶದ ಒಟ್ಟು 80 ಲೋಕಸಭಾ ಸೀಟುಗಳ ಪೈಕಿ ಎಸ್​ಪಿ ಹಾಗೂ ಬಿಎಸ್​ಪಿ ತಲಾ 38 ಸೀಟುಗಳಿಗೆ ಸ್ಪರ್ಧಿಸಲಿವೆ. ಉಳಿದ 4 ಸೀಟುಗಳಲ್ಲಿ 2 ಸೀಟುಗಳನ್ನು ಅಜಿತ್ ಸಿಂಗ್ ನೇತೃತ್ವದ ಆರ್​ಎಲ್​ಡಿ ಅಥವಾ ಇತರರಿಗೆ ಬಿಟ್ಟುಕೊಡಲು ನಿರ್ಧರಿಸಿವೆ.

ರಾಹುಲ್ – ಸೋನಿಯಾ ವಿರುದ್ಧ ಅಭ್ಯರ್ಥಿ ಇಲ್ಲ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ಬರೇಲಿ ಸೀಟುಗಳನ್ನು ಕಾಂಗ್ರೆಸ್​ಗೆ ಎಸ್​ಪಿ-ಬಿಎಸ್​ಪಿ ಬಿಟ್ಟುಕೊಟ್ಟಿವೆ. ಇದು ಮೈತ್ರಿಯ ಭಾಗವಲ್ಲ, ಕೇವಲ ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ನೈತಿಕ ಬೆಂಬಲ ಸೂಚಿಸಿ ಬಿಟ್ಟುಕೊಡಲಾಗಿದೆ. ಮೈತ್ರಿಯಿಂದ ಅಭ್ಯರ್ಥಿ ಕೂಡ ಹಾಕಲ್ಲ ಎಂದು ಉಭಯ ನಾಯಕರು ಹೇಳಿದರು.

ರಾಗಾ ದೋಸ್ತಿ ಯಾಕಿಲ್ಲ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದವು. ಅದರೆ ಈ ಮೈತ್ರಿಯಿಂದ ಎಸ್​ಪಿಗೆ ಯಾವುದೇ ಲಾಭವಾಗಲಿಲ್ಲ. ಕಾಂಗ್ರೆಸ್ ಮತಗಳು ಎಸ್​ಪಿ ಬದಲು ಬಿಜೆಪಿ ಸೇರಿದವು. ಬಿಜೆಪಿಗೆ ಆಗುವ ಲಾಭ ತಡೆಯಲು ಕಾಂಗ್ರೆಸ್​ನ್ನು ಹೊರಗಿಡುವ ನಿರ್ಧಾರ ಮಾಡಲಾಗಿದೆ. ಅಷ್ಟಕ್ಕೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಮಾಯಾವತಿ ಗುಡುಗಿದ್ದಾರೆ.

ಪರಿಣಾಮ ಏನು?

  • ಉತ್ತರಪ್ರದೇಶದಲ್ಲಿ ಬಿಜೆಪಿ-ಎಸ್​ಪಿ, ಬಿಎಸ್​ಪಿ-ಕಾಂಗ್ರೆಸ್ ತ್ರಿಕೋನ ಸ್ಪರ್ಧೆ
  • ಕಾಂಗ್ರೆಸ್ ಮತ ವಿಭಜನೆಯಿಂದ ಬಿಜೆಪಿಗೆ ಅಲ್ಪಮಟ್ಟಿನ ಲಾಭ
  • ಎಸ್​ಪಿ-ಬಿಎಸ್​ಪಿ ಮತ ಕ್ರೋಡೀಕರಣದಿಂದ ಬಿಜೆಪಿಗೆ ನಷ್ಟ
  • ಮಹತ್ವ ಪಡೆದುಕೊಳ್ಳಲಿರುವ ಜಾತಿ ಸಮೀಕರಣ
  • ಬೂತ್ ಮಟ್ಟದಲ್ಲಿ ಮೈತ್ರಿ ಪಾಲನೆಗೆ ಪಕ್ಷಗಳ ಹರಸಾಹಸ
  • ಟಿಕೆಟ್ ವಂಚಿತರು ಬಿಜೆಪಿ, ಕಾಂಗ್ರೆಸ್ ಸೇರುವ ಸಾಧ್ಯತೆ

ಬಿಜೆಪಿಗೆ ನಿದ್ರೆ ‘ಮಾಯಾ’?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪತನಕ್ಕೆ ಉತ್ತರಪ್ರದೇಶ ನಾಂದಿ ಹಾಡಲಿದ್ದು, ಬಿಜೆಪಿ ಪಾಲಿಗೆ ಭವಿಷ್ಯದಲ್ಲಿ ನಿದ್ರೆಯಿಲ್ಲದ ದಿನಗಳು ಬರಲಿವೆ ಎಂದು ಮಾಯಾವತಿ ಹಾಗೂ ಅಖಿಲೇಶ್ ಎಚ್ಚರಿಸಿದ್ದಾರೆ. ಈ ಹೇಳಿಕೆಗಳು ನಿಜವಾಗುವ ಸಾಧ್ಯತೆಯೂ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 2014ರ ಲೋಕಸಭೆ ಚುನಾವಣೆ ಫಲಿತಾಂಶ ಗಮನಿಸಿದಾಗ ಸುಮಾರು 42 ಕ್ಷೇತ್ರಗಳಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ ಬಿಜೆಪಿಗಿಂತ ಹೆಚ್ಚಿನ ಮತ ಪಡೆದಿದೆ. ಹೀಗಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ 30ಕ್ಕಿಂತ ಹೆಚ್ಚಿನ ಸೀಟು ಕಳೆದುಕೊಳ್ಳುವ ಸಾಧ್ಯತೆಯಿದೆ.

1993ರಲ್ಲಿ ಮುರಿದಿತ್ತು ಮೈತ್ರಿ

ಬಾಬ್ರಿ ಮಸೀದಿ ಕೆಡವಿದ ಬಳಿಕ 1993ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಮುಲಾಯಂ ಸಿಂಗ್ ಯಾದವ್ ಹಾಗೂ ಕಾನ್ಶೀರಾಮ್ ಮೈತ್ರಿ ಮಾಡಿಕೊಂಡಿದ್ದರು. ಎಸ್​ಪಿ 109 ಹಾಗೂ ಬಿಎಸ್​ಪಿ 57 ಸೀಟುಗಳಲ್ಲಿ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಯಿತು. ಆದಾಗ್ಯೂ ಸ್ಥಳೀಯ ಪಕ್ಷಗಳ ನೆರವು ಪಡೆದು ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಆದರೆ 1995ರಲ್ಲಿ ಅತಿಥಿ ಗೃಹದಲ್ಲಿ ಮಾಯಾವತಿ ಮೇಲೆ ಎಸ್​ಪಿ ಕಾರ್ಯಕರ್ತರು ದಾಳಿ ನಡೆಸಿದ ಬಳಿಕ ಮೈತ್ರಿ ಸರ್ಕಾರ ಕುಸಿದುಬಿದ್ದಿತ್ತು.

ಬೊಫೋರ್ಸ್​ನಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ರಫೇಲ್​ನಿಂದ ಮೋದಿ ಸರ್ಕಾರ ಪತನವಾಗಲಿದೆ. ಬಿಜೆಪಿ ವಿರುದ್ಧ ಹೋರಾಡಲು ಒಂದಾಗಿದ್ದೇವೆ.

| ಮಾಯಾವತಿ ಬಿಎಸ್​ಪಿ ಅಧ್ಯಕ್ಷೆ

ಮಾಯಾವತಿಯನ್ನು ಅವಮಾನಿಸಿದರೆ ನನ್ನನ್ನು ಅವಮಾನಿಸಿದಂತೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ.

| ಅಖಿಲೇಶ್ ಯಾದವ್, ಎಸ್​ಪಿ ಅಧ್ಯಕ್ಷ

ಭ್ರಷ್ಟಾಚಾರ ಹಾಗೂ ರಾಜಕೀಯ ಅಸ್ಥಿರತೆಯ ಮೈತ್ರಿಕೂಟವಿದು. ಕಳೆದ ಚುನಾವಣೆಗಿಂತ ಹೆಚ್ಚಿನ ಸೀಟನ್ನು ಬಿಜೆಪಿ ಗೆಲ್ಲಲಿದೆ.

| ಯೋಗಿ ಆದಿತ್ಯನಾಥ್ ಉತ್ತರಪ್ರದೇಶ ಸಿಎಂ

Leave a Reply

Your email address will not be published. Required fields are marked *