8 ತಾಸಿಗೆ ಎಂಟೆಕರೆ ಬಿತ್ತನೆ

ಬಾಗಲಕೋಟೆ: ಆರು ಕ್ವಿಂಟಾಲ್ ಶೇಂಗಾ ಬೀಜ, ಎಂಟು ಎಕರೆ ಹೊಲ, ಎಂಟು ಗಂಟೆಯಲ್ಲಿ ಬಿತ್ತನೆ ಕಾರ್ಯ ಮುಕ್ತಾಯ!

ಇದರಲ್ಲೇನು ವಿಶೇಷ ಅಂತೀರಾ? ಹೀಗೆ ಬಿತ್ತನೆ ಕಾರ್ಯ ನಡೆಸಿದ್ದು ಟ್ರ್ಯಾಕ್ಟರ್ ಸೇರಿ ಯಾವುದೇ ಯಂತ್ರಗಳ ಬಳಕೆಯಿಂದಲ್ಲ. ಹತ್ತಾರು ಕೂಲಿ ಕಾರ್ವಿುಕರಿಂದ ಬೀಜ ಹಾಕಿದ್ದೂ ಅಲ್ಲ. ಬದಲಿಗೆ ಬಲಭೀಮ ತಾಕತ್ತಿನ ರೈತಮಿತ್ರ(ಜೋಡೆತ್ತು) ಹಾಗೂ ರೈತನ ಸಾಹಸದ ಅನಾವರಣ.

ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದಲ್ಲಿ ಬುಧವಾರ ಒಂದೇ ದಿನದಲ್ಲಿ 12 ಇಂಚಿನ ಕೂರಗಿ ಬಳಕೆ ಮಾಡಿ ಎಂಟು ಎಕರೆ ಜಮೀನು ಬಿತ್ತನೆ ಕಾರ್ಯ ನಡೆಸಲಾಗಿದೆ. ಆ ಮೂಲಕ ಆ ಜೋಡಿ ಎತ್ತುಗಳು ಹಾಗೂ ಬಿತ್ತನೆ ಕಾರ್ಯ ಮಾಡಿದ ರೈತನ ಪರಿಶ್ರಮಕ್ಕೆ ಕಾಯಕಯೋಗಿಗಳಿಂದ ಶಹಬ್ಬಾಶ್ ಎನ್ನುವ ಉದ್ಗಾರಗಳ ಸುರಿಮಳೆ ಸ್ವೀಕರಿಸುವಂತಾಗಿದೆ.

ಸಾಮಾನ್ಯವಾಗಿ ಜೋಡಿ ಎತ್ತುಗಳ ಮೂಲಕ ಒಂದು ದಿನಕ್ಕೆ ಅಬ್ಬಬ್ಬಾ ಎಂದರೆ ನಾಲ್ಕರಿಂದ ಐದು ಎಕರೆ ಜಮೀನು ಬಿತ್ತನೆ ಮಾಡಬಹುದಾಗಿದೆ. ಆದರೆ, ಏನಾದರೂ ಒಂದು ಸಾಹಸ ಮಾಡಬೇಕು ಎನ್ನುವ ಕಾರಣಕ್ಕೆ ಶಿರೂರಿನ ರೈತ ರಂಗಪ್ಪ ಅವರು ಗ್ರಾಮದ ನೀಲಗಿರಿಯಪ್ಪ ಎನ್ನುವವರಿಗೆ ಸೇರಿದ ಜೋಡೆತ್ತಿನ ಮೂಲಕ ಕನಕಪ್ಪ ಎನ್ನುವವರ ಜಮೀನಿನಲ್ಲಿ ಒಂದೇ ದಿನದಲ್ಲಿ ಬೇಸಿಗೆ ಹಂಗಾಮಿನ ಶೇಂಗಾ ಬಿತ್ತನೆ ಮಾಡುವ ಮೂಲಕ ಎಲ್ಲರಿಂದ ಸೈ ಎನ್ನಿಸಿಕೊಂಡಿದ್ದಾರೆ.

ಭಲೇ ಭಲೇ ಎನ್ನುವ ಉದ್ಗಾರ!: ಬೆಳಗ್ಗೆ 6ಗಂಟೆಗೆ ಕೂರಗಿ ಕಟ್ಟಿದ ರೈತ ರಂಗಪ್ಪ ಬಿಡುವಿಲ್ಲದೆ ಬಿತ್ತನೆ ಕಾರ್ಯ ಆರಂಭಿಸಿದ. ಬಿತ್ತನೆ ಹೊಣೆ ತಾನು ಹೊತ್ತುಕೊಂಡರೆ ಹಿಂದಿಂದೆ ಗೊಬ್ಬರ ಹಾಕಲು ಮತ್ತೊಬ್ಬ ಯುವಕನ ನೆರವು ಪಡೆದರು. ಪಳಿ ಹೊಡೆಯಲು ಮತ್ತೊಂದು ಜೋಡಿ ಎತ್ತು ಸಾಥ್ ನೀಡಿದವು. ಗೊಬ್ಬರ ಹಾಕುವವರು, ಪಳಿ ಹೊಡೆಯುವ ರೈತರು ಬದಲಾದರೂ ಕೂರಗಿಯಿಂದ ಬಿತ್ತನೆ ಮಾಡಿದ್ದು ಮಾತ್ರ ರೈತ ರಂಗಪ್ಪ ಒಬ್ಬರು ಮಾತ್ರ. ಅದನ್ನು ಕಣ್ತುಂಬಿಕೊಳ್ಳಲು ಬಂದಿದ್ದ ನೂರಾರು ರೈತರು ಮಾತ್ರ ಭಲೇ ಭಲೇ ಬಲಭೀಮರೇ ಎಂದು ಉದ್ಗಾರ ತೆಗೆಯುತ್ತಿದ್ದರು.

ಆರು ಕ್ವಿಂಟಾಲ್ ಬೀಜ ಬಿತ್ತನೆ: ಇತ್ತೀಚೆಗೆ ಕೊಳವೆಬಾವಿ ಕೊರೆಸಿದ್ದ ಎಂಟು ಎಕರೆ ಜಮೀನಿನಲ್ಲಿ ಬಿತ್ತನೆಗಾಗಿ ಹೊಲವನ್ನು ಹದ ಗೊಳಿಸಲಾಗಿತ್ತು. ಅಷ್ಟರಲ್ಲೇ ಜೋಡೆತ್ತು ಬಳಕೆ ಮಾಡಿಕೊಂಡು ಗಂಟೆಗೆ ಒಂದು ಎಕರೆಯಂತೆ ಬಿತ್ತನೆ ಮಾಡಿದರೆ ಹೇಗೆ ಎಂದು ಆಲೋಚಿಸಿ ಅದನ್ನು ಕಾರ್ಯ ರೂಪಕ್ಕೂ ತಂದರು. 8 ಕ್ವಿಂಟಾಲ್ ಬೀಜದ ಪೈಕಿ ಆರು ಕ್ವಿಂಟಾಲ್ ಬೀಜ ಬಿತ್ತನೆಗೆ ಬಳಕೆ ಮಾಡಲಾಯಿತು. ಪ್ರತಿ ಸಾಲು ಮುಗಿದ ಮೇಲೆ ಉಡಿಯಲ್ಲಿ ಬೀಜ ತುಂಬಿಕೊಂಡು ಮತ್ತೆ ಬಿತ್ತನೆ ಮಾಡುತ್ತಿದ್ದರು. ದಣಿವು ಆರಿಸಿಕೊಳ್ಳಲು ಎತ್ತುಗಳಿಗೆ ಎಳನೀರು ಹಾಗೂ ಬಿತ್ತನೆ ಮಾಡುವ ರೈತನಿಗೆ ಮಜ್ಜಗಿ ಕೊಡಲಾಗುತ್ತಿತ್ತು.

16 ವರ್ಷಗಳಿಂದ ಒಕ್ಕಲುತನ ಮಾಡುತ್ತಿದ್ದೇನೆ. ಈ ಮೊದಲು ಒಂದು ದಿನಕ್ಕೆ ನಾಲ್ಕರಿಂದ ಐದು ಎಕರೆ ಜಮೀನು ಬಿತ್ತನೆ ಮಾಡುತ್ತಿದ್ದೆ. ಇಂದು ಗ್ರಾಮದ ರೈತರ ಪೋ›ತ್ಸಾಹ ಹಾಗೂ ದಣಿವರಿಯದ ಎತ್ತುಗಳ ಸಹಕಾರದಿಂದ ಎಂಟು ಎಕರೆ ಶೇಂಗಾ ಬಿತ್ತನೆ ಮಾಡಿರುವುದು ಖುಷಿ ತಂದಿದೆ.

| ರಂಗಪ್ಪ (ಬಿತ್ತನೆ ಮಾಡಿದ ರೈತ)

ಇಡೀ ಊರಿನ ಜನರು ಹೆಮ್ಮೆ ಪಡುವ ವಿಚಾರ. ಗ್ರಾಮದ ಎತ್ತುಗಳು ಹಾಗೂ ರೈತ ಇಂಥ ಸಾಹಸ ಮಾಡುವ ಮೂಲಕ ಇತರರಿಗೂ ಪ್ರೇರಣೆ ನೀಡಿದಂತಾಗಿದೆ. ಕೃಷಿ ಚಟುವಟಿಕೆಗೆ ಯಂತ್ರಗಳ ಬದಲಿಗೆ ಎತ್ತುಗಳನ್ನು ಬಳಕೆ ಮಾಡಲು ಅನೇಕರು ಮನಸ್ಸು ಮಾಡುವಂತಾಗಿದೆ.

| ನಿಂಗಪ್ಪ ಮೆಣಸಗಿ, ಶಿವಕುಮಾರ ಶಿರೂರ ಗ್ರಾಮಸ್ಥ