ಹುಬ್ಬಳ್ಳಿ: 2024ನೇ ವರ್ಷದೊಳಗೆ ರೈಲ್ವೆಯ ಸರಕು ಸಾಗಣೆ ಹೆಚ್ಚಿಸಲು ಮತ್ತು ಹೆಚ್ಚಿನ ಸರಕು ವಹಿವಾಟು ಆಕರ್ಷಿಸಲು ಕೈಗಾರಿಕೆಗಳೊಂದಿಗೆ ವಲಯ ಮತ್ತು ವಿಭಾಗೀಯ ಮಟ್ಟದಲ್ಲಿ ಉದ್ದಿಮೆ ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸುವಂತೆ ರೈಲ್ವೆ ಸಚಿವಾಲಯ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯ 2020ರ ಏಪ್ರಿಲ್ನಲ್ಲಿಯೇ ವಲಯ ಮತ್ತು ವಿಭಾಗೀಯ ಮಟ್ಟದಲ್ಲಿ ಘಟಕ ಸ್ಥಾಪಿಸಿ, ಸರಕು ಸಾಗಣೆಯಲ್ಲಿ ಅಭಿವೃದ್ಧಿ ಸಾಧಿಸಿದೆ. ಉದ್ಯಮಿಗಳು ಹೆಚ್ಚಿನ ಸರಕನ್ನು ರೈಲುಗಳ ಮೂಲಕ ಸಾಗಿಸುವುದಕ್ಕಾಗಿ ಹಲವಾರು ಯೋಜನೆಗಳನ್ನು ವಲಯ ಘೋಷಿಸಿದೆ.
ಲಾಕ್ಡೌನ್ನಿಂದಾಗಿ 2020-21ರ ಆರ್ಥಿಕ ವರ್ಷದ ಮೊದಲ ಎರಡು ತ್ರೖೆಮಾಸಿಕದಲ್ಲಿ ಸರಕು ಸಾಗಣೆ ಕುಸಿದಿತ್ತು. ಆದರೆ, ಹಲವಾರು ರಿಯಾಯಿತಿ ಮತ್ತು ಯೋಜನೆಗಳನ್ನು ಘೋಷಿಸಿದ ನಂತರ ಕಳೆದ 5 ತಿಂಗಳಲ್ಲಿ ಸರಕು ಸಾಗಣೆ ಏರಿಕೆಯಾಗಿದೆ. ಕಳೆದ ಆಗಸ್ಟ್ನಿಂದ ಪ್ರತಿ ತಿಂಗಳು 3 ದಶಲಕ್ಷ ಟನ್ ಸರಕು ಸಾಗಿಸಲಾಗಿದೆ. ಡಿಸೆಂಬರ್ ಅಂತ್ಯದವರೆಗೆ ಒಟ್ಟು 26.40 ದಶಲಕ್ಷ ಟನ್ ಸರಕು ಸಾಗಿಸಲಾಗಿದೆ.
ಕೋವಿಡ್ನ ಹಲವಾರು ನಿಯಮಗಳ ಮಧ್ಯೆಯೇ ತೋರಣಗಲ್ಲಿನ ಜೆಎಸ್ಡಬ್ಲ್ಯೂನಿಂದ 6.45 ದಶಲಕ್ಷ ಟನ್ ಸ್ಟೀಲ್, ರಂಜಿತಪುರ, ವ್ಯಾಸನಕೇರಿ, ಸ್ವಾಮಿಹಳ್ಳಿ, ಸಾಸಲು ಮತ್ತು ಚಿಕ್ಕಜಾಜೂರಿನಿಂದ 8.64 ದಶಲಕ್ಷ ಟನ್ ಕಬ್ಬಿಣದ ಅದಿರು, ವಿದ್ಯುತ್ ಉತ್ಪಾದನಾ ಘಟಕಗಳಿಗೆ 6.61 ದಶಲಕ್ಷ ಟನ್ ಕಲ್ಲಿದ್ದಲು ಸಾಗಿಸಲಾಗಿದೆ.
ತೋರಣಗಲ್ಲಿನ ಜೆಎಸ್ಡಬ್ಲ್ಯು, ಕುಡಿತಿನಿಯ ಎಸಿಸಿ ಲಿ. ಮತ್ತು ಗಿಣಿಗೇರಾದ ಅಲ್ಟ್ರಾಟೆಕ್ನಿಂದ ಸಿಮೆಂಟ್ ಸಾಗಿಸಲಾಗಿದೆ.
ರಾಣೆಬೆನ್ನೂರ, ಹಾವೇರಿ, ವಿಜಯಪುರ ಮತ್ತು ಬಾಗಲಕೋಟೆಯಿಂದ ಮೆಕ್ಕೆಜೋಳ ಸೇರಿ 10 ಸಾವಿರಕ್ಕೂ ಹೆಚ್ಚು ಟನ್ ಆಹಾರ ಧಾನ್ಯವನ್ನು ನೈಋತ್ಯ ರೈಲ್ವೆ ವಲಯ ಸಾಗಿಸಿದೆ.
ಕೈಗಾರಿಕೋದ್ಯಮಿಗಳೊಂದಿಗೆ ಮಾಡಿಕೊಂಡ ಒಪ್ಪಂದದಿಂದಾಗಿ ನೈಋತ್ಯ ರೈಲ್ವೆ ದೊಡ್ಡಬಳ್ಳಾಪುರ, ಪೆನುಕೊಂಡ, ಮಾಲೂರಿನಿಂದ ಆಟೋಮೊಬೈಲ್ ವಸ್ತುಗಳನ್ನು ಸಾಗಿಸಿದೆ.
ಹುಬ್ಬಳ್ಳಿ ವಿಭಾಗದ ಸಾಧನೆ : ಹುಬ್ಬಳ್ಳಿ ವಿಭಾಗ ಡಿಸೆಂಬರ್ವರೆಗೆ 2.7 ಮಿಲಿಯನ್ ಟನ್ಗೂ ಹೆಚ್ಚು ಸರಕು ಸಾಗಿಸಿದೆ. ಡಿಸೆಂಬರ್ವರೆಗೆ ನಿತ್ಯ 1,310 ಬೋಗಿಗಳ ಮೂಲಕ ಸರಕು ಸಾಗಿಸಿದ್ದು, ಕಳೆದ ವರ್ಷಕ್ಕಿಂತ ಶೇ. 16ರಷ್ಟು ಹೆಚ್ಚು ಸಾಧನೆ ತೋರಿದೆ ಎಂದು ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿಯಲ್ಲಿ ಗುರುವಾರ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರು ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಇತರರು ಇದ್ದರು.