Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ರಾಜತಾಂತ್ರಿಕ ಚಂದ್ರ

Sunday, 15.07.2018, 3:03 AM       No Comments

| ಉಮೇಶ್ ಕುಮಾರ್ ಶಿಮ್ಲಡ್ಕ

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ-ಇನ್ ಜು. 8ರಿಂದ 11ರ ತನಕ ಕೈಗೊಂಡ ಚೊಚ್ಚಲ ಭಾರತ ಪ್ರವಾಸ ಏಷ್ಯಾದ ರಾಜಕೀಯ ರಂಗಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ. ಮೂನ್ ಒಟ್ಟು 18 ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಈ ಪೈಕಿ ಹನ್ನೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಜತೆಗಿದ್ದರು. ಇದೇ ಮೊದಲ ಸಲ ನವದೆಹಲಿಯ ಗಾಂಧಿ ಸ್ಮಾರಕ ಮ್ಯೂಸಿಯಂಗೆ ಪ್ರಧಾನಿ ಮೋದಿ ವಿದೇಶಿ ಅತಿಥಿ ಜತೆಗೆ ಹೆಜ್ಜೆ ಹಾಕಿದ್ದು ವಿಶೇಷ. ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ‘ಆಕ್ಟ್ ಈಸ್ಟ್ ಪಾಲಿಸಿ’ ಅನುಸರಿಸುತ್ತಿದ್ದರೆ, ಮೂನ್ ಜೆ-ಇನ್ ನೇತೃತ್ವದ ದಕ್ಷಿಣ ಕೊರಿಯಾ ಸರ್ಕಾರ ‘ನ್ಯೂ ಸದರ್ನ್ ಪಾಲಿಸಿ’ ಅನುಸರಿಸುತ್ತಿದೆ. ರಾಜತಾಂತ್ರಿಕ ವಲಯದಲ್ಲಿ ಈ ಭೇಟಿಯನ್ನು ‘ಎರಡು ನೀತಿಗಳು ಸಂಧಿಸಿದ ಕ್ಷಣ’ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದು ಇಂಡೋ ಪೆಸಿಫಿಕ್ ವಲಯದಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.

‘2022ರಲ್ಲಿ ನವಭಾರತ’ ಎಂಬ ಮೋದಿಯವರ ಕನಸು ನನಸು ಮಾಡಿಸುವಲ್ಲಿ ದಕ್ಷಿಣ ಕೊರಿಯಾದ ಯಶೋಗಾಥೆ ಪ್ರೇರಣಾದಾಯಿ. ನೋಯ್ಡಾದಲ್ಲಿ ಜಗತ್ತಿನ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕ ಆರಂಭಿಸಲು ಸಹಕರಿಸಿದ ದಕ್ಷಿಣ ಕೊರಿಯಾ, ಭಾರತದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಇತರೆ ನೆರವು ನೀಡುತ್ತಿದೆ. ಇಂಡೋ ಪೆಸಿಫಿಕ್ ವಲಯದಲ್ಲಿ ಚೀನಾ ಪ್ರಾಬಲ್ಯ ತಡೆಯಲು ಭಾರತ ಮತ್ತು ದ.ಕೊರಿಯಾಕ್ಕೆ ಪರಸ್ಪರರ ಸಹಕಾರ, ನೆರವು ಅಗತ್ಯ.

ಇದೇ ವೇಳೆ, ಚೀನಾದ ಜತೆಗೂ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ದಕ್ಷಿಣ ಕೊರಿಯಾ ನಿಧಾನವಾಗಿ ಸಮತೋಲನದ ರಾಜತಾಂತ್ರಿಕ ನಡೆಯನ್ನು ಅನುಸರಿಸುತ್ತಿದೆ. ಈ ನಡೆಯ ರೂವಾರಿ ಮೂನ್ ಜೇ-ಇನ್ ಎಂದರೆ ತಪ್ಪಲ್ಲ. ರಷ್ಯಾ ಜತೆಗಿನ ಬಾಂಧವ್ಯ ವೃದ್ಧಿಗಾಗಿ ಮೂನ್ ‘ನ್ಯೂ ನಾರ್ದನ್ ಪಾಲಿಸಿ’ಯನ್ನು ಅನುಷ್ಠಾನಗೊಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಧ್ಯೆ ಇದ್ದ ಬಿಗುವಿನ ವಾತಾವರಣ, ಅವರ ಸಮರೋನ್ಮಾದ ತಗ್ಗಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು ಇದೇ ಮೂನ್ ಜೇ-ಇನ್. ಆ ಮೂಲಕ ಉತ್ತಮ ಮಧ್ಯಸ್ಥಿಕೆದಾರನಾಗಿ ಕಾಣಿಸಿಕೊಂಡರು.

ಮೂನ್ ಜೇ-ಇನ್ 1953ರ ಜನವರಿ 24ರಂದು ದಕ್ಷಿಣ ಕೊರಿಯಾದ ಜಿಯೋಜ್​ನಲ್ಲಿ ಜನಿಸಿದರು. ಕೊರಿಯನ್ ಸಮರ ಕೊನೇ ಹಂತ ತಲುಪಿದ್ದ ಕಾಲಘಟ್ಟವದು. ಮೂನ್ ಯಾಂಗ್-ಹ್ಯುಂಗ್ ಮತ್ತು ಕಾಂಗ್ ಹನ್-ಓಕ್ ದಂಪತಿಯ ಐವರು ಮಕ್ಕಳಲ್ಲಿ ಎರಡನೆಯವರು ಇವರು. ಆ ಕಾಲದಲ್ಲಿ ಈ ದಂಪತಿ ಯುದ್ಧ ನಿರಾಶ್ರಿತರಾಗಿ ಉತ್ತರ ಕೊರಿಯಾದ ಸೌತ್ ಹಮ್್ಯಾಂಗ್ ಪ್ರಾಂತ್ಯದಲ್ಲಿದ್ದು, ಕೊನೆಗೆ ಬುಸಾನ್​ನಲ್ಲಿ ನೆಲೆಕಂಡುಕೊಂಡಿದ್ದರು. ಸರ್ಕಾರಿ ಕೆಲಸ ಬಿಟ್ಟ ತಂದೆ, ಕಾಲುಚೀಲ ಮಾರಾಟಕ್ಕಿಳಿದರು. ಪರಿಣಾಮ ಕುಟುಂಬ ಸಾಲದ ಸುಳಿಗೆ ಬಿತ್ತು. ತಾಯಿ ಮೊಟ್ಟೆ ಮಾರುತ್ತಿದ್ದವರು, ಕೊನೆಗೆ ಪರಿಹಾರ ಕಾರ್ಯ ನಡೆಸುತ್ತಿದ್ದ ಸಂಘಟನೆಗಳಿಂದ ಉಡುಪು ಖರೀದಿಸಿ ಮಾರಾಟ ಮಾಡತೊಡಗಿದರು. ಸ್ಥಳೀಯ ಕ್ಯಾಥೋಲಿಕ್ ಚರ್ಚ್​ಗೆ ಪ್ರಾರ್ಥನೆ ಸಂದರ್ಭದಲ್ಲಿ ಹೋಗುತ್ತಿದ್ದ ಆಕೆ ಅಲ್ಲಿಂದ ಹಾಲಿನ ಪುಡಿ ತರುತ್ತಿದ್ದರು. ಅಷ್ಟರ ಮಟ್ಟಿನ ಬಡತನ ಎದುರಿಸಿದ ಮೂನ್ ಜೇ-ಇನ್ ಕ್ಯುನ್​ಗ್ನಾಮ್ ಹೈಸ್ಕೂಲ್​ನಲ್ಲಿ ಶಿಕ್ಷಣ ಪೂರ್ಣಗೊಳಿಸಿ, ಕಾನೂನು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡರು. ಅಲ್ಲೇ ಕಿಮ್ ಜುಂಗ್-ಸೂಕ್ ಎಂಬ ಸುಂದರ ಯುವತಿಯ ಪರಿಚಯವಾಯಿತು. ಅದು ಪ್ರೇಮಕ್ಕೆ ತಿರುಗಿ ಮುಂದೆ ವಿವಾಹವಾದರು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕನಾಗಿ ಕಾಣಿಸಿಕೊಂಡ ಅವರು, ಯೂಶಿನ್ ಕಾನ್​ಸ್ಟಿಟ್ಯೂಷನ್ ವಿರುದ್ಧ ಪ್ರತಿಭಟನೆ ಆಯೋಜಿಸಿ ಬಂಧನಕ್ಕೊಳಗಾದರು. ಅಷ್ಟೇ ಅಲ್ಲ ಕಾಲೇಜಿನಿಂದಲೇ ಉಚ್ಚಾಟಿತರಾದರು. ಕೊನೆಗೆ ಅವರು ಸೇನೆಗೆ ಸೇರಿದರು.

ತಂದೆಯ ನಿಧನಾನಂತರ ವಕೀಲಿಕೆ ಮಾಡಬೇಕೆಂಬ ಮನಸ್ಸಾಯಿತು ಅವರಿಗೆ. ಬೌದ್ಧ ದೇಗುಲ ದೇಹೇಉಂಗ್ಸಾಕ್ಕೆ ತೆರಳಿ ಅಲ್ಲೇ ಇದ್ದು ಓದುತ್ತ 1979ರಲ್ಲಿ ಎರಡು ಸುತ್ತುಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1980ರಲ್ಲಿ ವ್ಯಾಸಂಗ ಮುಗಿಸಿ ಹಿಂದಿರುಗಿದ ಅವರು, ಜುಡಿಷಿಯಲ್ ರಿಸರ್ಚ್ ಆಂಡ್ ಟ್ರೇನಿಂಗ್ ಇನ್​ಸ್ಟಿಟ್ಯೂಟ್​ಗೆ ಸೇರಿದರು. ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದರೂ, ಪ್ರತಿಭಟನೆಯಲ್ಲಿ ಭಾಗಿಯಾದ ಪೂರ್ವೆತಿಹಾಸದ ಕಾರಣ ನ್ಯಾಯಾಧೀಶರಾಗುವುದೋ ಅಥವಾ ಸರ್ಕಾರಿ ವಕೀಲರಾಗುವುದೋ ಸಾಧ್ಯವಾಗಲಿಲ್ಲ. ಆದರೆ ಖಾಸಗಿಯಾಗಿ ವಕೀಲಿಕೆ ಮಾಡಬಹುದಿತ್ತು. ರೋಹ್ ಮೂ-ಹ್ಯುನ್(2003-08ರ ಅವಧಿಯಲ್ಲಿ ದ.ಕೊರಿಯಾದ ಅಧ್ಯಕ್ಷ) ಜತೆ ಸೇರಿ ವಕೀಲಿಕೆ ಆರಂಭಿಸಿದರು. ರೋಹ್ ಮುಖ್ಯವಾಗಿ ಮಾನವ ಹಕ್ಕು ಮತ್ತು ನಾಗರಿಕ ಹಕ್ಕುಗಳ ವಿಷಯ ನಿರ್ವಹಿಸುತ್ತಿದ್ದರು. ಈ ಮಧ್ಯೆ ರೋಹ್ ಅಧ್ಯಕ್ಷರಾದಾಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ನಿಮೂಲನೆಯ ಹೊಣೆಗಾರಿಕೆಯನ್ನು ಮೂನ್​ಗೆ ಹೊರಿಸಿದ್ದರು. ಅವರ ನಿರ್ಧಾರಗಳು ವಿವಾದಕ್ಕೀಡಾದವು. ರೋಹ್ ಅವರ ‘ಛಾಯೆ’ ಎಂಬ ಮಟ್ಟಿಗೆ ಮೂನ್ ಕಾಣಿಸಿಕೊಂಡಿದ್ದರು. ಅವರ ಈ ಗೆಳೆತನ 2009ರಲ್ಲಿ ರೋಹ್ ಆತ್ಮಹತ್ಯೆ ಮಾಡಿಕೊಳ್ಳುವ ತನಕವೂ ಮುಂದುವರಿಯಿತು. ಮೂನ್ ಜೇ-ಇನ್ 2012ರಲ್ಲಿ ರಾಜಕೀಯ ರಂಗ ಪ್ರವೇಶಿಸಿದರು. ಇದಕ್ಕೂ ಮುನ್ನ ‘ಮೂನ್ ಜೇ-ಇನ್; ದ ಡೆಸ್ಟಿನಿ’ ಎಂಬ ಆತ್ಮಕಥೆಯನ್ನು ಪ್ರಕಟಿಸಿದರು. ಅದರಿಂದಾಗಿ ಅವರ ಜನಪ್ರಿಯತೆಯೂ ಹೆಚ್ಚಿತು. ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧಿ ಪಾರ್ಕ್ ಗುನ್-ಹೇ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿದರು. ಆ ವರ್ಷ ಸೋಲು ಅನುಭವಿಸಿದರೂ, ರಾಷ್ಟ್ರಮಟ್ಟದಲ್ಲಿ ಸುಧಾರಣಾವಾದಿ ಮತ್ತು ವಿವೇಚನಾಶೀಲ ನಾಯಕನೆಂಬ ಛಾಪು ಮೂಡಿಸುವಲ್ಲಿ ಯಶಸ್ವಿಯಾದರು. ಪಾರ್ಕ್ ಗುನ್-ಹೇ ಹಗರಣದಲ್ಲಿ ಸಿಲುಕಿದ್ದರ ಪರಿಣಾಮ 2017ರಲ್ಲಿ ನಡೆದ ಚುನಾವಣೆಯಲ್ಲಿ ಮೂನ್ ಭಾರಿ ಗೆಲುವನ್ನೆ ದಾಖಲಿಸಿದರು. ಅಧ್ಯಕ್ಷರಾದ ತರುವಾಯ ಹಂತ ಹಂತವಾಗಿ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ಜಾಗತಿಕವಾಗಿ ದೇಶವನ್ನು ಉತ್ತಮ ರಾಜತಾಂತ್ರಿಕ ಸಂಬಂಧದೊಡನೆ ಮುನ್ನಡೆಸಲು ಆರಂಭಿಸಿದ್ದರ ಫಲ ಒಂದೇ ವರ್ಷದ ಅವಧಿಯಲ್ಲಿ ಕಾಣತೊಡಗಿದೆ. ಶತ್ರುತ್ವ ಹೊಂದಿದ್ದ ಕೊರಿಯನ್ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸಿತು. ಎಷ್ಟರಮಟ್ಟಿಗೆ ಎಂದರೆ ಸದಾ ಯುದ್ಧೋನ್ಮಾದದಲ್ಲಿದ್ದ ಉತ್ತರ ಕೊರಿಯಾದ ಕಿಮ್ ಕೂಡ ದಕ್ಷಿಣ ಕೊರಿಯಾದ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಉಮೇದು ವ್ಯಕ್ತಪಡಿಸಿದರು.

ಮೂನ್ ಜೇ-ಇನ್ ರೋಮನ್ ಕ್ಯಾಥೋಲಿಕ್ ಧರ್ಮದ ಅನುಯಾಯಿಯಾಗಿದ್ದು, ಧಾರ್ವಿುಕವಾಗಿ ‘ತಿಮೋತಿ’ ಎಂಬ ಹೆಸರು ಹೊಂದಿದ್ದಾರೆ. ಪತ್ನಿ ಕಿಮ್ ಜಂಗ್-ಸೂಕ್. ಇಬ್ಬರು ಮಕ್ಕಳು.

ಇತ್ತೀಚಿನ ಅವರ ಭಾರತ ಪ್ರವಾಸ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ವಿಚಾರದಲ್ಲಿ ಧನಾತ್ಮಕ ಪರಿಣಾಮ ಬೀರಿದೆ. 2020ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತೇನೆ ಎಂಬ ಮಾತುಗಳಲ್ಲಿ ಭಾರತದ ಮೇಲೆ ಅವರಿಗಿರುವ ವಿಶ್ವಾಸ ಬಿಂಬಿತವಾಗುತ್ತದೆ.

Leave a Reply

Your email address will not be published. Required fields are marked *

Back To Top