ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾರು ಉತ್ತರ?

ಬೆಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂಬುದು ಈಗ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆ ಮಾಡಿದೆ.

ಲೋಕಸಭಾ ಚುನಾವಣೆಗೆ ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಹೀಗಾಗಿ ಮೂರು ಪಕ್ಷಗಳಿಗೂ ಈ ಕ್ಷೇತ್ರದ ಉತ್ತರಾಧಿಕಾರಿ ವಿಚಾರ ಮುಖ್ಯವಾಗಿದೆ. ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪಕ್ಷ ತನ್ನ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಲು ಅನಂತಕುಮಾರ್ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿಯೇ ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ರಾಜ್ಯ ಮುಖಂಡರು ಪ್ರತ್ಯೇಕ ಚರ್ಚೆ ನಡೆಸಿ, ಗೌಪ್ಯತೆ ಕಾಪಾಡಿಕೊಂಡಿದ್ದರು.

ಕುಟುಂಬದವರಿಲ್ಲ: ಸಾಮಾನ್ಯವಾಗಿ ಜನಪ್ರತಿನಿಧಿ ನಿಧನರಾದರೆ ಅವರ ಕುಟುಂಬದವರಿಗೆ ಟಿಕೆಟ್ ನೀಡಿ ಅನುಕಂಪದ ಲಾಭ ಗಿಟ್ಟಿಸುವ ಯತ್ನ ನಡೆಸಲಾಗುತ್ತದೆ. ಈ ತಂತ್ರ ಉಪ ಚುನಾವಣೆಯಲ್ಲಿ ಪ್ರಭಾವ ಬೀರಲಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಹೇಳಲಾಗಲ್ಲ. ಅನಂತಕುಮಾರ್ ತೀವ್ರ ಅನಾರೋಗ್ಯಕ್ಕೆ ತುತ್ತಾದಾಗಲೇ ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕುಟುಂಬದವರ ಸ್ಪರ್ಧೆ ಇಲ್ಲವೆಂದು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದರೆಂದು ಮೂಲಗಳು ಖಚಿತಪಡಿಸಿವೆ. ಹೀಗಾಗಿ ಅನಂತ ಅವರಷ್ಟೇ ಸಮರ್ಥರ ಹುಡುಕಾಟ ಪ್ರಾರಂಭವಾಗಿದೆ.

ನಿಲೇಕಣಿ ಬಗ್ಗೆ ಚರ್ಚೆ: ಬಿಜೆಪಿಯ ವರಿಷ್ಠರು ಐಟಿ ಕ್ಷೇತ್ರದ ದಿಗ್ಗಜ ನಂದನ್ ನಿಲೇಕಣಿ ಕರೆತರಲು ಚರ್ಚೆ ನಡೆಸಿದ್ದು, ಅವರೊಂದಿಗೆ ಮಾತುಕತೆ ನಡೆದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಎದುರು ನೀಲೇಕಣಿ ಸ್ಪರ್ಧಿಸಿ ಸೋತಿದ್ದರು. ಅಲ್ಲದೆ, ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಜತೆಗೂ ನೀಲೇಕಣಿ ಉತ್ತಮ ಸಂಬಂಧ ಹೊಂದಿದ್ದರಿಂದ ಈ ಚಿಂತನೆ ನಡೆಸಿದ್ದು, ಅಂತಿಮವಾಗಿಲ್ಲವೆಂದು ಮೂಲಗಳು ಖಚಿತಪಡಿಸಿವೆ.

ರಾಜ್ಯ ಮುಖಂಡರ ಅಭಿಪ್ರಾಯ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ಪ್ರೊ. ವೆಂಕಟಗಿರಿಗೌಡ ಅವರನ್ನು ಹೊರತುಪಡಿಸಿ ಬ್ರಾಹ್ಮಣರು ಹೆಚ್ಚು ಬಾರಿ ಗೆಲುವು ಸಾಧಿಸಿದ್ದರಿಂದ, ಇಲ್ಲಿ ಬ್ರಾಹ್ಮಣ ಅಭ್ಯರ್ಥಿಯೇ ಸೂಕ್ತವೆಂದು ರಾಜ್ಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೆಲ ದಿನಗಳ ಹಿಂದೆ ಶಾಸಕರಾದ ಉದಯ ಗರುಡಾಚಾರ್ ಹಾಗೂ ರವಿಸುಬ್ರಮಣ್ಯ ಜತೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸ್ಪರ್ಧೆಗೆ ರವಿ ಸುಬ್ರಮಣ್ಯ ಆಸಕ್ತಿ ತೋರಿಲ್ಲ. ಉದಯ ಗರುಡಾಚಾರ್ ಸಹ ಪೂರ್ಣ ಮನಸ್ಸಿನಿಂದ ಒಪ್ಪಿಗೆ ನೀಡಿಲ್ಲ. ಪಕ್ಷ ಸೂಚಿಸಿದರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಸಾಧ್ಯತೆ ಬಹುತೇಕ ಇಲ್ಲ. ಮುಂದಿನ ಏಪ್ರಿಲ್, ಮೇ ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯೇ ಗಟ್ಟಿ. ಆದ್ದರಿಂದ ಅಷ್ಟರೊಳಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸಿದ್ಧವಾಗಲು ಪಕ್ಷ ಸೂಚಿಸಲಿದೆ.

ಗೌಡರ ತಂತ್ರ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ಗಣನೀಯ ಸಂಖ್ಯೆಯಲ್ಲಿ ಇರುವುದರಿಂದ ಈ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್​ನ ಒಕ್ಕಲಿಗ ಮುಖಂಡರ ಜತೆಗೆ ಮಾತುಕತೆ ಸಹ ನಡೆಸಿದ್ದಾರೆಂದು ಜೆಡಿಎಸ್ ಮೂಲಗಳು ಖಚಿತಪಡಿಸಿವೆ. ಎರಡು ಪಕ್ಷದ ಒಕ್ಕಲಿಗ ಮುಖಂಡರು ಟಿಕೆಟ್​ಗಾಗಿ ಪಟ್ಟು ಹಿಡಿಯುವಂತೆ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ. ಅನಂತಕುಮಾರ್ ವಿರುದ್ಧ ಕಾಂಗ್ರೆಸ್ ಎರಡು ಬಾರಿ ಒಕ್ಕಲಿಗರನ್ನು ಕಣಕ್ಕೆ ಇಳಿಸಿತ್ತು. ಆದರೆ, ಫಲ ನೀಡಿರಲಿಲ್ಲ.

ತೇಜಸ್ವಿನಿಯೇ ಸೂಕ್ತ ಅಭ್ಯರ್ಥಿ

ಅನಂತಕುಮಾರ್ ಬೆಂಬಲಿಗರು ಹಾಗೂ ಪಕ್ಷದ ಕೆಲ ಮುಖಂಡರಲ್ಲಿ ತೇಜಸ್ವಿನಿ ಅವರೇ ಉತ್ತಮ ಅಭ್ಯರ್ಥಿ ಎಂಬ ಭಾವನೆ ಇದೆ. ಅನಂತಕುಮಾರ್ ಪಕ್ಷ ಸಂಘಟನೆ, ಸರ್ಕಾರದ ಕೆಲಸ, ಬೇರೆ ಬೇರೆ ರಾಜ್ಯಗಳ ಉಸ್ತುವಾರಿಯಲ್ಲಿ ತೊಡಗಿಕೊಂಡಿದ್ದಾಗ, ಕ್ಷೇತ್ರದ ಜನರೊಂದಿಗೆ ಒಡನಾಡಿಯಾಗಿದ್ದವರು ತೇಜಸ್ವಿನಿ. ಅಭಿವೃದ್ಧಿ ಕಾರ್ಯಗಳು ಎಲ್ಲಿಯೂ ಕುಂಠಿತವಾಗದಂತೆ ಎಚ್ಚರವಹಿಸಿದ್ದರು. ಅದಮ್ಯ ಚೇತನ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯದಲ್ಲಿ ತೇಜಸ್ವಿನಿ ತೊಡಗಿಸಿಕೊಳ್ಳುತ್ತಿದ್ದರಿಂದ ಸಹಜವಾಗಿಯೇ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಂಡಿರುವುದು ಗಮನಾರ್ಹ.