ದ. ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದಲ್ಲಿ ಸಲಿಂಗಿ ವಿವಾಹ!

ಜೊಹಾನ್ಸ್​ಬರ್ಗ್: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವಾನ್ ನೈಕರ್ಕ್, ಸಹ ಆಟಗಾರ್ತಿ ಹಾಗೂ ಆಲ್ರೌಂಡರ್ ಮಾರಿಜಾನ್ನೆ ಕಾಪ್​ರನ್ನು ಕಳೆದ ಭಾನುವಾರ ವಿವಾಹವಾಗಿದ್ದಾರೆ. ಇದರೊಂದಿಗೆ ಹಾಲಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ಸಲಿಂಗ ವಿವಾಹವಾದ 2ನೇ ಜೋಡಿ ಎನಿಸಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡ ಆಮಿ ಸತ್ತರ್​ವೈಟ್ ಹಾಗೂ ಲೀ ತಾಹುಹು ಮದುವೆಯಾಗಿದ್ದರು. ವಿವಾಹದ ಚಿತ್ರಗಳನ್ನು ಮಾರಿಜಾನ್ನೆ ಇನ್​ಸ್ಟ್ರಾಗ್ರಾಮ್ ಪುಟದಲ್ಲಿ ಪ್ರಕಟಿಸಿದ್ದಾರೆ. ನೈಕರ್ಕ್ ಹಾಗೂ ಮಾರಿಜಾನ್ನೆ ವಿವಾಹಕ್ಕೆ ತಂಡದ ಇತರ ಆಟಗಾರ್ತಿಯರು ಸಾಕ್ಷಿಯಾಗಿದ್ದಾರೆ.

ವಿಶ್ವದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧ ಮಾಡಿದ 5ನೇ ದೇಶ ದಕ್ಷಿಣ ಆಫ್ರಿಕಾ. 2006ರಲ್ಲಿ ಸಲಿಂಗ ವಿವಾಹವನ್ನು ದಕ್ಷಿಣ ಆಫ್ರಿಕಾ ಮಾನ್ಯ ಮಾಡಿತ್ತು. 2009ರ ವಿಶ್ವಕಪ್ ವೇಳೆ 2 ದಿನಗಳ ಅಂತರದಲ್ಲಿ ನೈಕರ್ಕ್ ಹಾಗೂ ಕಾಪ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ನೈಕರ್ಕ್ ಹಾಗೂ ಮಾರಿಜಾನ್ನೆ ಕ್ರಿಕೆಟ್ ಜೀವನ ಸಮಾನ ರೀತಿಯಲ್ಲಿ ಸಾಗುತ್ತಿರುವುದು ವಿಶೇಷ. ನೈಕರ್ಕ್ 125 ವಿಕೆಟ್ ಕಬಳಿಸಿದ್ದು, ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿದ್ದಾರೆ. ಮತ್ತೊಂದೆಡೆ, 28 ವರ್ಷದ ಮಾರಿಜಾನ್ನೆ 99 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. 25 ವರ್ಷದ ನೈಕರ್ಕ್ 1,770 ರನ್​ಗಳಿಸಿದರೆ, ಮಾರಿಜಾನ್ನೆ 1,618 ರನ್ ಸಿಡಿಸಿದ್ದಾರೆ.

ಮಹಿಳಾ ಕ್ರಿಕೆಟ್​ನಲ್ಲಿ ಸಲಿಂಗ ವಿವಾಹ ಸಾಮಾನ್ಯ!

ಮಹಿಳಾ ಕ್ರಿಕೆಟ್​ನಲ್ಲಿ ಸಲಿಂಗ ವಿವಾಹವಾದ ಮೊದಲ ಜೋಡಿ ಇವರಲ್ಲ. 2015ರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ ಅಲೆಕ್ಸ್ ಬ್ಲಾಕ್​ವೆಲ್, ಇಂಗ್ಲೆಂಡ್​ನ ಲೆನ್ಸಿ ಆಸ್ಕೀವ್​ರನ್ನು ವರಿಸಿದ್ದರು. ಅಂದು ಆಸ್ಟ್ರೇಲಿಯಾದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲದ ಕಾರಣ ಈ ಜೋಡಿ ಇಂಗ್ಲೆಂಡ್​ನಲ್ಲಿ ಮದುವೆಯಾಗಿತ್ತು. 2017ರಲ್ಲಿ ಆಸ್ಟ್ರೇಲಿಯಾದ ಎಲ್ಲಿ ವಿಲ್ಲಾನಿ ಸಲಿಂಗ ಪ್ರೇಮದಲ್ಲಿರುವುದಾಗಿ ಘೋಷಿಸಿದ್ದರು. ಸಹ ಆಟಗಾರ್ತಿ ನಿಕೋಲ್ ಬೋಲ್ಟನ್, ತಾವು ಪ್ರೇಮದಲ್ಲಿರುವುದಾಗಿ ಪ್ರಕಟಿಸಿದ್ದಲ್ಲದೆ, ಸದ್ಯ ತಾವು ಜತೆಯಾಗಿಯೇ ಉಳಿದಿದ್ದೇವೆ ಎಂದಿದ್ದರು. 2017ರಲ್ಲಿ ಆಸ್ಟ್ರೇಲಿಯಾದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಬಳಿಕ, ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ್ತಿ ಮೇಗನ್ ಸ್ಕಟ್, ಗೆಳತಿ ಜೆಸ್ಸಿ ಹೋಲಿಯೋಕ್​ರನ್ನು ವಿವಾಹವಾಗುವುದಾಗಿ ಪ್ರಕಟಿಸಿದ್ದರು.