ಟೆಸ್ಟ್​ಗೆ ಪ್ಲೆಸಿಸ್, ಟಿ20ಗೆ ಡಿಕಾಕ್ ನಾಯಕ: ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ, ಹೊಸಬರಿಗೆ ಮಣೆ

ಜೊಹಾನ್ಸ್​ಬರ್ಗ್: ಭಾರತದಲ್ಲಿ ಸಾಕಷ್ಟು ಐಪಿಎಲ್ ಪಂದ್ಯವಾಡಿದ ಅನುಭವ ಇರುವ ಕ್ವಿಂಟನ್ ಡಿಕಾಕ್ ಮುಂಬರುವ ಭಾರತ ಪ್ರವಾಸದ ವೇಳೆ ದಕ್ಷಿಣ ಆಫ್ರಿಕಾ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ಸರಣಿಗೆ ಮೂವರು ಹೊಸ ಆಟಗಾರರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ. ತೆಂಬಾ ಬವುಮಾ ಹಾಗೂ ಆನ್ರಿಚ್ ನೋರ್ಜೆಗೆ ಟಿ20 ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದ್ದರೆ, ಬಿಜೋರ್ನ್ ಫೋರ್ಟುನ್​ಗೆ ಪದಾರ್ಪಣೆ ಅವಕಾಶ ನೀಡಲಾಗಿದೆ.

ಅಚ್ಚರಿ ಎನ್ನುವಂತೆ ಫಾಫ್ ಡು ಪ್ಲೆಸಿಸ್​ರನ್ನು ದಕ್ಷಿಣ ಆಫ್ರಿಕಾ ಟಿ20 ತಂಡದಿಂದ ಕೈಬಿಡಲಾಗಿದ್ದು, 3 ಪಂದ್ಯಗಳ ಟೆಸ್ಟ್ ಸರಣಿಗೆ ತಂಡದ ನಾಯಕರಾಗಿ ಇರಲಿದ್ದಾರೆ. ಟೆಸ್ಟ್ ತಂಡದಲ್ಲೂ ಮೂವರು ಹೊಸಮುಖಗಳನ್ನು ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ. ದಕ್ಷಿಣ ಆಫ್ರಿಕಾ ಪರವಾಗಿ ನಾಲ್ಕು ಏಕದಿನ ಪಂದ್ಯವಾಡಿರುವ ಅನುಭವಿ ಆನ್ರಿಚ್ ನೋರ್ಜೆ, ವಿಕೆಟ್ ಕೀಪರ್ ರುಡಿ ಸೆಕೆಂಡ್ ಹಾಗೂ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸೇನುರನ್ ಮುತ್ತುಸ್ವಾಮಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಹೊಸಬರಾಗಿದ್ದಾರೆ.

ಏಕದಿನ ವಿಶ್ವಕಪ್​ನಲ್ಲಿ ನೀರಸ ನಿರ್ವಹಣೆ ತೋರಿದ ಏಡೆನ್ ಮಾರ್ಕ್ರಮ್ ಲುಂಜಿ ಎನ್​ಗಿಡಿ ಹಾಗೂ ಥೇನಿಯಸ್ ಡಿ ಬ್ರುಯನ್​ರನ್ನು ಟಿ20 ತಂಡಕ್ಕೆ ಪರಿಗಣನೆ ಮಾಡಲಾಗಿಲ್ಲ. ಆದರೆ, ಈ ಮೂವರೂ ಸೆಪ್ಟೆಂಬರ್​ನಲ್ಲಿ ಭಾರತ ಎ ತಂಡದ ವಿರುದ್ಧದ ಚತುರ್ದಿನ ಟೆಸ್ಟ್ ಸರಣಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿಟಾಲಿಟಿ ಬ್ಲಾಸ್ಟ್​ನಲ್ಲಿ ಹ್ಯಾಂಪ್​ಷೈರ್ ತಂಡದ ಪರವಾಗಿ ಆಡುತ್ತಿರುವ ಆಲ್ರೌಂಡರ್ ಕ್ರಿಸ್ ಮೊರಿಸ್ ತಾವು ಆಯ್ಕೆಗೆ ಲಭ್ಯರಿಲ್ಲ ಎಂದು ತಿಳಿಸಿದ್ದಾರೆ.

ಟೆಸ್ಟ್ ಸರಣಿಯ ತಂಡ: ಪ್ಲೆಸಿಸ್ (ನಾಯಕ), ತೆಂಬಾ ಬವುಮಾ (ಉಪನಾಯಕ), ಡಿ ಬ್ರುಯನ್, ಡಿಕಾಕ್, ಎಲ್ಗರ್, ಜುಬ್ಯಾರ್ ಹಮ್ಜಾ, ಕೇಶವ್ ಮಹಾರಾಜ್, ಮಾರ್ಕ್ರಮ್ ಸೇನುರನ್ ಮುತ್ತುಸ್ವಾಮಿ, ಎನ್​ಗಿಡಿ, ಆನ್ರಿಚ್ ನೋರ್ಜೆ, ಫಿಲಾಂಡರ್, ಪೀಡ್ಟ್, ರಬಾಡ, ರುಡಿ ಸೆಕೆಂಡ್.

ಟಿ20 ತಂಡ: ಡಿಕಾಕ್ (ನಾಯಕ), ರಸ್ಸಿ ವಾನ್ ಡರ್ ಡುಸೆನ್ (ಉಪನಾಯಕ), ಬವುಮಾ, ಜೂ. ಡಾಲಾ, ಫೋರ್ಟುನ್, ಬೌರೆನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಆನ್ರಿಚ್ ನೋರ್ಜೆ, ಪೆಹ್ಲುಕ್​ವಾಯೋ, ಪ್ರಿಟೋರಿಯಸ್, ರಬಾಡ, ಶಮ್ಸಿ, ಜಾನ್ ಜಾನ್ ಸ್ಮಟ್ಸ್.

ಸೆಪ್ಟೆಂಬರ್ 15ರಿಂದ ಸರಣಿ

ಸೆ. 15ರಂದು ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ದಕ್ಷಿಣ ಆಫ್ರಿಕಾ ತಂಡದ ಪ್ರವಾಸ ಆರಂಭವಾಗಲಿದೆ. ಧರ್ಮಶಾಲಾ, ಮೊಹಾಲಿ (ಸೆ.18) ಹಾಗೂ ಬೆಂಗಳೂರು (ಸೆ.22) ಟಿ20 ಪಂದ್ಯಗಳನ್ನು ಆಯೋಜಿಸಲಿದ್ದರೆ, ಅ.2 ರಿಂದ 23ರವರೆಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ವಿಶಾಖಪಟ್ಟಣ, ರಾಂಚಿ ಹಾಗೂ ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ.

Leave a Reply

Your email address will not be published. Required fields are marked *