ನಟಿ ಭಾನುಪ್ರಿಯಾ ವಿರುದ್ಧ ದೌರ್ಜನ್ಯದ ಆರೋಪ: ದೂರು ದಾಖಲು

ಹೈದರಾಬಾದ್‌: ದಕ್ಷಿಣ ಭಾರತದ ಹಿರಿಯ ನಟಿ ಭಾನುಪ್ರಿಯಾ ಅವರು ಹದಿಹರೆಯದ ಹುಡುಗಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ.

ಸ್ವ ಸಹಾಯಕ್ಕೆಂದು ನೇಮಕ ಮಾಡಿಕೊಂಡಿದ್ದ 14 ವರ್ಷದ ಬಾಲಕಿಯ ತಾಯಿಯು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಮಲ್‌ಕೋಟಾದಲ್ಲಿ ನಟಿ ಭಾನುಪ್ರಿಯಾ ವಿರುದ್ಧ ದೂರು ದಾಖಲಿಸಿದ್ದು, ಈ ಕುರಿತ ಆರೋಪಗಳನ್ನು ನಟಿ ಭಾನುಪ್ರಿಯ ನಿರಾಕರಿಸಿದ್ದಾರೆ.

ಸ್ವ ಸಹಾಯಕ್ಕಾಗಿ ನೇಮಿಸಿಕೊಳ್ಳುತ್ತೇನೆ ಎಂದು ಹೇಳಿ ಭಾನುಪ್ರಿಯಾ ಅವರು ತನ್ನ ಮಗಳನ್ನು ಚೆನ್ನೈಗೆ ಕರೆದುಕೊಂಡು ಹೋಗಿದ್ದರು. ಪ್ರತಿ ತಿಂಗಳು 10 ಸಾವಿರ ಸಂಬಳ ನೀಡುವುದಾಗಿ ಭರವಸೆ ನೀಡಿದ್ದರು.

18 ತಿಂಗಳಿಂದಲೂ ತನ್ನ ಮಗಳಿಗೆ ಸಂಬಳ ನೀಡಿಲ್ಲ. ನನ್ನ ಮಗಳನ್ನು ಸಂಪರ್ಕಿಸಲು ಕೂಡ ಬಿಡುತ್ತಿಲ್ಲ. ಕಳೆದ ಕೆಲ ದಿನದ ಹಿಂದೆ ನನ್ನ ಮಗಳು ಯಾವುದೋ ನಂಬರ್‌ ನಿಂದ ಕರೆ ಮಾಡಿ ನಾನು ದೈಹಿಕ ಮತ್ತು ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದಾಗಿ ತಿಳಿಸಿದಳು. ಜ. 18ರಂದು ಚೆನ್ನೈಗೆ ತೆರಳಿ ಭೇಟಿ ಮಾಡಲು ಮುಂದಾದೆ ಆದರೆ ಅನುಮತಿ ನೀಡಲಿಲ್ಲ ಎಂದು ತಾಯಿ ಆರೋಪಿಸಿದ್ದಾರೆ.

ನಟಿ ಭಾನುಪ್ರಿಯಾ ಮತ್ತು ಆಕೆಯ ಸೋದರನ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಈ ಆರೋಪವನ್ನು ಅಲ್ಲಗಳೆದಿರುವ ನಟಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದು ವರ್ಷದಿಂದ ನನ್ನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ 16 – 17 ವರ್ಷದ ಬಾಲಕಿಯು ನನ್ನ ಮನೆಯಿಂದ ಹಣ, ಒಡವೆ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾಳೆ. ಕದ್ದ ವಸ್ತುಗಳನ್ನು ತನ್ನ ತಾಯಿ ನನ್ನ ಮನೆಗೆ ಭೇಟಿ ನೀಡುವಾಗೆಲ್ಲ ಅವಳ ಕೈಯಲ್ಲಿ ನೀಡಿ ಸಾಗಿಸಿದ್ದಾಳೆ. ಕದ್ದ ವಸ್ತುಗಳನ್ನು ಹಿಂತಿರುಗಿಸುವಂತೆ ಆಕೆಯ ತಾಯಿಯನ್ನು ಕೇಳಿದಾಗ ಐಪಾಡ್‌, ಕ್ಯಾಮರಾ ಮತ್ತು ವಾಚ್‌ನ್ನು ಮಾತ್ರ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಳು. ಆದರೆ ಈಗ ಸುಳ್ಳು ದೂರನ್ನು ದಾಖಲಿಸಿದ್ದಾಳೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)