‘ದಬಂಗ್‌ -3’ರಲ್ಲಿ ಸಲ್ಮಾನ್‌ ಖಾನ್‌ ಜತೆಗೆ ಕಿಚ್ಚ ಸುದೀಪ್‌ ಖಳನಾಯಕನಾಗಿ ಎಂಟ್ರಿ

ದಬಂಗ್‌- 3 ಬಾಲಿವುಡ್‌ನ ಬಹುನೀರೀಕ್ಷಿತ ಚಿತ್ರ. ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್ ನಟನೆಯ ಚಿತ್ರಕ್ಕೆ ಈಗಾಗಲೇ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸೇರಿರುವುದು ಹಳೆಯ ಸುದ್ದಿ. ಆದರೆ, ಇದೀಗ ತೆಲುಗಿನ ‘ಈಗ’ ಸಿನಿಮಾದ ಡಬ್ಬಿಂಗ್‌ ‘ಮಕ್ಕಿ’ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಇದೀಗ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಸಲ್ಮಾನ್‌ ಖಾನ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಮೂಲಗಳ ಪ್ರಕಾರ ಸುದೀಪ್‌ ಅವರನ್ನು ಈಗಾಗಲೇ ಚಿತ್ರತಂಡವು ಸಂಪರ್ಕಿಸಿದ್ದು, ಚಿತ್ರವನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರದಲ್ಲಿ ನಾಯಕ ಮತ್ತು ಖಳನಾಯಕನ ನಡುವೆಯೇ ಆಟ ನಡೆಯಲಿದ್ದು, ಅದು ಟಾಮ್‌ ಮತ್ತು ಜೆರಿಯ ಹೊಡೆದಾಟದಂತಿರುತ್ತದೆ. ಚಿತ್ರದಲ್ಲಿ ಸುದೀಪ್‌ಗೆ ಆಸಕ್ತಿದಾಯಕ ಕೆಲ ಶೇಡ್‌ಗಳನ್ನು ಕೂಡ ನೀಡಲಾಗಿರುತ್ತದೆ ಎನ್ನಲಾಗಿದೆ.

ಚುಲ್‌ಬುಲ್‌ ಪಾಂಡೆ ಹೆಸರಿನ ಪಾತ್ರದಲ್ಲಿ ಸಲ್ಮಾನ್ ಮತ್ತೆ ಮಿಂಚಲಿದ್ದರೆ ಸುದೀಪ್‌ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದ್ದು, ದಬಂಗ್‌ನ ಮೂರನೇ ಭಾಗ ಏಪ್ರಿಲ್‌ನಲ್ಲಿ ಸೆಟ್ಟೇರಲಿದೆ. ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಅವರು ನಾಯಕಿಯಾಗಿರಲಿದ್ದು, ಪ್ರಭುದೇವ ಅವರು ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ತೆರೆಹಿಂದೆಯೂ ಸಲ್ಮಾನ್‌ ಮತ್ತು ಸುದೀಪ್‌ ಅವರು ಬಾಡಿ ಬಿಲ್ಡಿಂಗ್‌ ಮತ್ತು ಸಿನಿಮಾಗಳ ಕುರಿತು ಉತ್ತಮ ಸಂಬಂಧ ಹೊಂದಿದ್ದು, ಈ ಹಿಂದೆಯೂ ಒಟ್ಟಿಗೆ ನಟಿಸುವ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತದೆ. ದಬಂಗ್‌ 3 ಸಿನಿಮಾದ ಕಥೆಯನ್ನು ಅಂತಿಮಗೊಳಿಸುವ ಕುರಿತು ನಿರ್ಧರಿಸಿದ್ದು, ಇಬ್ಬರು ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)