More

    ಸೌರಾಷ್ಟ್ರ ಬೃಹತ್ ಮೊತ್ತ, ಪೂಜಾರ ದ್ವಿಶತಕ, ಜಾಕ್ಸನ್ ಶತಕ; ಬಸವಳಿದ ಕರ್ನಾಟಕ ತಂಡ 

    ರಾಜ್​ಕೋಟ್: ರಾಷ್ಟ್ರೀಯ ಟೆಸ್ಟ್ ತಂಡದ ಸದಸ್ಯ ಚೇತೇಶ್ವರ ಪೂಜಾರ (248ರನ್, 390 ಎಸೆತ, 24 ಬೌಂಡರಿ, 1 ಸಿಕ್ಸರ್) ಹಾಗೂ ಶೆಲ್ಡನ್ ಜಾಕ್ಸನ್ (161 ರನ್, 299 ಎಸೆತ, 7 ಬೌಂಡರಿ, 6 ಸಿಕ್ಸರ್) ಜೋಡಿ 3ನೇ ವಿಕೆಟ್​ಗೆ ಆಡಿದ 394 ರನ್ ಜತೆಯಾಟದ ಫಲವಾಗಿ ಆತಿಥೇಯ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಎದುರು ಬೃಹತ್ ಮೊತ್ತ ದಾಖಲಿಸಿತು. ಸುಮಾರು ಒಂದೂವರೆ ದಿನಗಳ ಕಾಲ ಕರ್ನಾಟಕ ಬೌಲರ್​ಗಳಿಗೆ ದುಸ್ವಪ್ನವಾಗಿ ಕಾಡಿದ ಪೂಜಾರ ದೇಶೀಯ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳ ಒಡೆಯನಾದರು.

    ಮಾಧವ್​ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2 ವಿಕೆಟ್​ಗೆ 296 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಸೌರಾಷ್ಟ್ರ 166 ಓವರ್​ಗಳಲ್ಲಿ 7 ವಿಕೆಟ್​ಗೆ 581 ರನ್ ಪೇರಿಸಿ ಇನಿಂಗ್ಸ್​ಗೆ ಡಿಕ್ಲೇರ್ ಘೋಷಿಸಿತು. ಪ್ರತಿಯಾಗಿ ಇನಿಂಗ್ಸ್ ಕರ್ನಾಟಕ ತಂಡ ಆರಂಭಿಕ ಆಘಾತ ಕಂಡಿದ್ದು ದಿನದಾಟದ ಅಂತ್ಯಕ್ಕೆ 1 ವಿಕೆಟ್​ಗೆ 13 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 568 ರನ್ ಗಳಿಸಬೇಕಿದೆ.

    ಮೊದಲ ದಿನದಾಟದಲ್ಲೇ ಎರಡೂವರೆ ಅವಧಿ ಬ್ಯಾಟಿಂಗ್ ಮಾಡಿದ್ದ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ ಜೋಡಿ, ಭಾನುವಾರವೂ ಅದರ ಮುಂದುವರಿದ ಭಾಗದಂತೆ ಆಟವಾಡಿತು. ಕ್ರಮವಾಗಿ 162 ಹಾಗೂ 99 ರನ್​ನಿಂದ ಇನಿಂಗ್ಸ್ ಆರಂಭಿಸಿದ ಪೂಜಾರ ಹಾಗೂ ಶೆಲ್ಡನ್ ಭೋಜನ ವಿರಾಮದವರೆಗೂ ವಿಕೆಟ್ ಕಾಯ್ದುಕೊಂಡಿತು. ರಾಜ್ಯದ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದ ಈ ಜೋಡಿ ದಿನದಾಟದಲ್ಲಿ ಶನಿವಾರದ ಮೊತ್ತಕ್ಕೆ ಮತ್ತೆ 131 ರನ್ ಸೇರಿಸಿತು. 3ನೇ ವಿಕೆಟ್​ಗೆ ದಾಖಲೆಯ 394 ರನ್ ಕಲೆಹಾಕಿತು.

    ಅಂತಿಮವಾಗಿ ಸ್ಪಿನ್ನರ್ ಪವನ್ ದೇಶಪಾಂಡೆ (98ಕ್ಕೆ 2) ಈ ಜೋಡಿ ಬೇರ್ಪಡಿಸಲು ಯಶಸ್ವಿಯಾದರು. ಕರ್ನಾಟಕದ ಎದುರು 3ನೇ ಶತಕ ಸಿಡಿಸಿದ ಶೆಲ್ಡನ್, ಪವನ್ ಎಸೆತದಲ್ಲಿ ರೋನಿತ್ ಮೋರೆಗೆ ಕ್ಯಾಚ್ ನೀಡಿದರು. ಮತ್ತೊಂದು ತುದಿಯಲ್ಲಿ ದ್ವಿಶತಕ ಪೂರೈಸಿದ್ದ ಪೂಜಾರ ಕೂಡ ಶೆಲ್ಡನ್ ನಿರ್ಗಮನದ ಬೆನ್ನಲ್ಲೇ ರೋನಿತ್ ಮೋರೆಗೆ ವಿಕೆಟ್ ನೀಡಿದರು. ಬಳಿಕ ಅರ್ಪಿತ್ ವಸವಾಡ (35) ಹಾಗೂ ಪ್ರೇರಕ್ ಮಂಕಡ್ (86*) ಜೋಡಿ 5ನೇ ವಿಕೆಟ್​ಗೆ 66 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 500ರ ಗಡಿ ದಾಟಿಸಿತು.

    ವಿದರ್ಭ ತಂಡಕ್ಕೆ 9 ವಿಕೆಟ್ ಜಯ

    ಹಾಲಿ ಚಾಂಪಿಯನ್ ವಿದರ್ಭ ತಂಡ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಬಂಗಾಳ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿತು. ಬಂಗಾಳ ಮೊದಲ ಇನಿಂಗ್ಸ್ 170 ರನ್​ಗಳಿಸಿದರೆ, ಪ್ರತಿಯಾಗಿ ವಿದರ್ಭ ತಂಡ 212 ರನ್ ಪೇರಿಸಿತು. 42 ರನ್ ಇನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಸರದಿ ಬ್ಯಾಟಿಂಗ್ ಆರಂಭಿಸಿದ ಬಂಗಾಳ 99 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ 58 ರನ್ ಗೆಲುವಿನ ಗುರಿ ಬೆನ್ನಟ್ಟಿದ 1 ವಿಕೆಟ್​ಗೆ 61 ಪೇರಿಸಿ ಗೆಲುವಿನ ನಗೆ ಬೀರಿತು.

    ಕರ್ನಾಟಕಕ್ಕೆ ಆಘಾತ

    ಆತಿಥೇಯ ತಂಡ ಇನಿಂಗ್ಸ್​ಗೆ ಡಿಕ್ಲೇರ್ ಘೋಷಿಸಿದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ಮೊದಲ ಓವರ್​ನಲ್ಲೇ ಆಘಾತ ಕಂಡಿತು. ಪ್ರಸಕ್ತ ದೇಶೀಯ ಋತುವಿನಲ್ಲಿ ತಂಡಕ್ಕೆ ಆಧಾರ ಸ್ತಂಭವಾಗಿರುವ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕಲ್ ಎದುರಿಸಿದ 4ನೇ ಎಸೆತದಲ್ಲೇ ಔಟಾದರು. ನಾಯಕ ಜೈದೇವ್ ಉನಾದ್ಕತ್ ಎಸೆತದಲ್ಲಿ ವಿಕೆಟ್ ಕೀಪರ್ ಸ್ನೆಲ್ ಪಟೇಲ್​ಗೆ ಕ್ಯಾಚ್ ನೀಡಿದರು. ಖಾತೆ ತೆರೆಯುವ ಮುನ್ನವೇ ಕರ್ನಾಟಕ ನಂಬಿಕಸ್ತ ಬ್ಯಾಟ್ಸ್​ಮನ್ ಕಳೆದುಕೊಂಡಿತು. ಸಮರ್ಥ್ (6) ಹಾಗೂ ರೋಹನ್ ಕದಂ (7) ಜೋಡಿ ಮುರಿಯದ 2ನೇ ವಿಕೆಟ್​ಗೆ 13 ರನ್ ಪೇರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

    ಸೌರಾಷ್ಟ್ರ ಪ್ರಥಮ ಇನಿಂಗ್ಸ್: 166 ಓವರ್​ಗಳಲ್ಲಿ 7 ವಿಕೆಟ್​ಗೆ 581 ಡಿಕ್ಲೇರ್

    • (ಶನಿವಾರ 2 ವಿಕೆಟ್​ಗೆ 296)
    • ಪೂಜಾರ ಸಿ ಪಡಿಕಲ್ ಬಿ ರೋನಿತ್ 248
    • ಶೆಲ್ಡನ್ ಜಾಕ್ಸನ್ ಸಿ ರೋನಿತ್ ಬಿ ಪವನ್ 161
    • ವಸವಾಡ ಎಲ್​ಬಿಡಬ್ಲ್ಯು ಬಿ ಪವನ್ 35
    • ಪ್ರೇರಕ್ ಮಂಕಡ್ ಔಟಾಗದೆ 86
    • ಚಿರಾಗ್ ಜಾನಿ ಬಿ ಪ್ರವೀಣ್ ದುಬೆ 7
    • ಧಮೇಂದ್ರ ಜಡೇಜಾ ಬಿ ಪ್ರವೀಣ್ ದುಬೆ 1
    • ಜೈದೇವ್ ಉನಾದ್ಕತ್ ಔಟಾಗದೆ 3

    ಇತರ: 11. ವಿಕೆಟ್ ಪತನ: 2-33, 3-427, 4-452, 5-518, 6-545, 7-553. ಬೌಲಿಂಗ್: ರೋನಿತ್ 29-4-86-1, ಪ್ರತೀಕ್ ಜೈನ್ 27-10-53-0, ಸುಚಿತ್ 41-4-129-2, ಶ್ರೇಯಸ್ ಗೋಪಾಲ್ 26-2-126-0, ಪವನ್ ದೇಶಪಾಂಡೆ 27-1-98-2, ಪ್ರವೀಣ್ ದುಬೆ 16-0-80-2.

    ಕರ್ನಾಟಕ ಪ್ರಥಮ ಇನಿಂಗ್ಸ್:

    • 8 ಓವರ್​ಗಳಲ್ಲಿ 1 ವಿಕೆಟ್​ಗೆ 13
    • ಆರ್ ಸಮರ್ಥ್ ಬ್ಯಾಟಿಂಗ್ 6
    • ದೇವದತ್ ಪಡಿಕಲ್ ಸಿ ಸ್ನೆಲ್ ಬಿ ಉನಾದ್ಕತ್ 0
    • ರೋಹನ್ ಕದಂ ಬ್ಯಾಟಿಂಗ್ 7

    ವಿಕೆಟ್ ಪತನ: 1-1. ಬೌಲಿಂಗ್: ಜೈದೇವ್ ಉನಾದ್ಕತ್ 4-0-8-1, ಚಿರಾಗ್ ಜಾನಿ 2-1-4-0, ಧಮೇಂದ್ರ ಜಡೇಜಾ 2-1-1-0.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts