ದುಬೈ: ಏಕದಿನ ಪಂದ್ಯದಲ್ಲಿ ಇನ್ನೂರು ರನ್ ಗಡಿ ದಾಟುವ ಮೂಲಕ ಸೌಮ್ಯ ಸರ್ಕಾರ್ ಅವರು ದ್ವಿಶತಕ ಸಾಧನೆ ಮಾಡಿದ ಮೊದಲ ಬಾಂಗ್ಲಾದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಬುಧವಾರ ನಡೆದ ಢಾಕ ಪ್ರಿಮಿಯರ್ ಲೀಗ್ ಪಂದ್ಯದಲ್ಲಿ ಸೌಮ್ಯ ಸರ್ಕಾರ್ ಅವರು ಅಬ್ಬರಿಸಿದ್ದಾರೆ. ಅಬಾನಿ ಲಿಮಿಟೆಡ್ ತಂಡದ ಪರ ಆಡಿದ ಸೌಮ್ಯ ಸರ್ಕಾರ್, ಶೇಕ್ ಜಮಾಲ್ ಧನ್ಮಂಡಿ ಕ್ಲಬ್ ವಿರುದ್ಧ ಅಜೇಯ ದ್ವಿಶತಕ(208) ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ತಾವು ಎದುರಿಸಿದ 153 ಎಸೆತಗಳಲ್ಲಿ 14 ಬೌಂಡರಿ ಹಾಗೂ 16 ಸಿಕ್ಸರ್ ಒಳಗೊಂಡಂತೆ ಅಜೇಯ 208 ರನ್ ಬಾರಿಸಿದ ಸರ್ಕಾರ್, ಮೊದಲ ದ್ವಿಶತಕ ಸಾಧಿಸಿದ ಬಾಂಗ್ಲಾದ ಮೊದಲ ಆಟಗಾರನೆಂಬ ಇತಿಹಾಸವನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಮೊದಲು ಬ್ಯಾಟ್ ಮಾಡಿದ ಧನ್ಮಂಡಿ ಕ್ಲಬ್ 50 ಓವರ್ಗಳಲ್ಲಿ 318 ರನ್ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಅಬಾನಿ ಲಿಮಿಟೆಡ್ ಒಂದು ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಗುರಿ ಮುಟ್ಟಿತು. ಈ ಮೂಲಕ ಢಾಕ ಪ್ರೀಮಿಯರ್ ಟೈಟಲ್ ಅನ್ನು ಮುಡಿಗೇರಿಸಿಕೊಂಡಿತು. (ಏಜೆನ್ಸೀಸ್)