ವಿಜಯವಾಣಿ ಸುದ್ದಿಜಾಲ ಮೈಸೂರು
ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ‘ಫ್ರೀ ಕಾಶ್ಮೀರ’ ಪೋಸ್ಟರ್ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಂಬಂಧಿಸಿದ ವಿದ್ಯಾರ್ಥಿಗಳನ್ನು ವಿಶ್ವ ವಿದ್ಯಾಲಯದಿಂದ ಹೊರಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ನಡುವೆಯೇ ಪ್ರತಿಭಟನೆ ಸಂಘಟಿಸಿದವರಿಗೆ, ಭದ್ರತಾ ಸಿಬ್ಬಂದಿಗೆ ವಿಶ್ವವಿದ್ಯಾಲಯ ನೋಟಿಸ್ ಜಾರಿ ಮಾಡಿದೆ.
ಮಾನಸಗಂಗೋತ್ರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲು ವಿವಿಯಿಂದ ಅನುಮತಿ ಪಡೆದಿಲ್ಲ. ಅನುಮತಿ ಇಲ್ಲದೆ ನಡೆಸಿರುವ ಪ್ರತಿಭಟನೆಯು ವಿವಿ ನಿಯಮಾವಳಿಗೆ ವಿರುದ್ಧವಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿರುವುದು, ಘೋಷಣೆಗಳನ್ನು ಕೂಗಿರುವುದು ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಿಂದ ತಿಳಿದುಬಂದಿದೆ. ಅಂತಹ ಹೇಳಿಕೆಗಳನ್ನು ನೀಡಿದ ವಿದ್ಯಾರ್ಥಿಗಳ ಮಾಹಿತಿ, ಸೂಕ್ತ ವಿವರಣೆ ಹಾಗೂ ಸಮಜಾಯಿಷಿಯನ್ನು ತಿಳಿಸುವಂತೆ ಕುಲಸಚಿವ ಆರ್.ಶಿವಪ್ಪ ದಲಿತ ವಿದ್ಯಾರ್ಥಿ ಒಕ್ಕೂಟ, ಮೈಸೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘಕ್ಕೆ ನೋಟಿಸ್ ನೀಡಿದ್ದಾರೆ.
ಅನುಮತಿ ಪಡೆಯದೆ ಪ್ರತಿಭಟನೆ ನಡೆದರೂ ಈ ವಿಚಾರವನ್ನು ವಿವಿಯ ಗಮನಕ್ಕೆ ತಾರದೆ ಇರುವುದು ಹಾಗೂ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ವಿವಿಯು ಭದ್ರತಾ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಕ್ರಮಕ್ಕೆ ಎಬಿವಿಪಿ ಒತ್ತಾಯ:
ಮಾನಸಗಂಗೋತ್ರಿಯಲ್ಲಿ ಫ್ರೀ ಕಾಶ್ಮೀರ ಪೋಸ್ಟರ್‌ಗಳನ್ನು ಪ್ರದರ್ಶಿಸಿ ವಿಶ್ವವಿದ್ಯಾಲಯದ ಪರಿಸರವನ್ನು ಹಾಳು ಮಾಡಿದ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಬಿವಿಪಿ ನಗರ ಕಾರ್ಯದರ್ಶಿ ಆದರ್ಶ್, ಕುಲಸಚಿವ ಆರ್. ಶಿವಪ್ಪ ಅವರಿಗೆ ಮನವಿ ಪತ್ರ ನೀಡಿದ್ದಾರೆ.
ದೇಶವನ್ನು ದುರ್ಬಲಗೊಳಿಸುವ ಯತ್ನ:
ಪೋಸ್ಟರ್ ಪ್ರದರ್ಶನವನ್ನು ಪೊಲೀಸರು ಲಘುವಾಗಿ ಪರಿಗಣಿಸಬಾರದು. ಇದರ ಹಿಂದೆ ಜಿಹಾದಿ, ನಕ್ಸಲ್, ಕಮ್ಯುನಿಸ್ಟ್ ಶಕ್ತಿಗಳು ಇವೆ. ಇದು ದೇಶವನ್ನು ದುರ್ಬಲಗೊಳಿಸಲು ನಡೆದಿರುವ ಪ್ರಯತ್ನವಾಗಿದ್ದು, ಕೂಡಲೇ ದೇಶದ್ರೋಹಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಒತ್ತಾಯಿಸಿದ್ದಾರೆ.
ಯುವ ಮನಸ್ಸು ಕೆಡಿಸಬೇಡಿ:
ದೇಶ ಒಡೆಯಲು ಯುವ ಮನಸ್ಸುಗಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಮೈಸೂರು ಎಲ್ಲ ಧರ್ಮವನ್ನು ಮೀರಿ ನಿಂತಿರುವ ಸಾಂಸ್ಕೃತಿಕ ನಾಡಾಗಿದೆ. ಇಲ್ಲಿ ದೇಶದ ಅಖಂಡತೆಗೆ ಧಕ್ಕೆ ತರುವಂತಹ ಕೃತ್ಯಗಳು ನಡೆದಿರುವುದು ಬೇಸರದ ಸಂಗತಿ. ಕೂಡಲೇ ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಎ. ರಾಮದಾಸ್ ಒತ್ತಾಯಿಸಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಿ:
ವಿಶ್ವವಿದ್ಯಾಲಯದ ಆವರಣದಲ್ಲಿ ದೇಶ ವಿರೋಧಿ ಪೋಸ್ಟರ್‌ಗಳನ್ನು ಪ್ರದರ್ಶಿಸಿರುವುದು ಖಂಡನೀಯ. ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶ ಇದೆ. ಆದರೆ, ಪ್ರತಿಭಟನೆ ಹೆಸರಿನಲ್ಲಿ ದೇಶದ ಅಖಂಡತೆಗೆ ಧಕ್ಕೆ ತರುವ ಪ್ರಯತ್ನ ನಡೆದರೆ ಸಹಿಸಲು ಸಾಧ್ಯವಿಲ್ಲ. ದೇಶ ವಿರೋಧಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಲ್. ನಾಗೇಂದ್ರ ಒತ್ತಾಯಿಸಿದ್ದಾರೆ.
ಮಾಹಿತಿ ಕಲೆ ಹಾಕಿದ ಪೊಲೀಸರು
ಫ್ರೀ ಕಾಶ್ಮೀರ ಪೋಸ್ಟರ್‌ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದ ನಂತರ ಜಯಲಕ್ಷ್ಮೀಪುರಂ ಪೊಲೀಸರು ವಿವಿಯ ಆವರಣಕ್ಕೆ ಆಗಮಿಸಿ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದರು. ಪ್ರತಿಭಟನೆ ಸಂಘಟಿಸಿದ ಸಂಘಟನೆಗಳು, ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದರು. ಅಲ್ಲದೆ, ಪ್ರತಿಭಟನೆಗೆ ಸಂಬಂಧಿಸಿದ ಫೋಟೋ, ವೀಡಿಯೋಗಳನ್ನು ಸಂಗ್ರಹಿಸಿದ್ದಾರೆ.
ವಿವಿಯಿಂದ ಹೊರ ಹಾಕಿ
ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಿದೆ. ಜೆಎನ್‌ಯು ವಿದ್ಯಾರ್ಥಿಗಳ ಹಲ್ಲೆ ಖಂಡಿಸುವ ನೆಪದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ ಕಾರ್ಯ ಮಾಡಿದ್ದಾರೆ. ಇಂಥ ವಿದ್ಯಾರ್ಥಿಗಳಿಂದ ವಿವಿಯ ವಾತಾವರಣ ಕಲುಷಿತಗೊಳ್ಳುವ ಆತಂಕ ಇದೆ. ಹೀಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಅವರನ್ನು ವಿಶ್ವ ವಿದ್ಯಾಲಯದಿಂದ ಹಾಗೂ ವಿವಿಯ ವಿದ್ಯಾರ್ಥಿನಿಲಯದಿಂದ ಹೊರ ಹಾಕಬೇಕೆಂದು ವಿವಿಯ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಕುಲಸಚಿವ ಆರ್. ಶಿವಪ್ಪ ಅವರಿಗೆ ಲಿಖಿತ ದೂರು ನೀಡಿದ್ದಾರೆ.