ಕನಸಾಗಿಯೇ ಉಳಿಯಿತು ಸೌಡ ಸೇತುವೆ

«ಇಬ್ಬರ ಜಗಳದಲ್ಲಿ ಬಡವಾಯಿತು ಸೇತುವೆ * ಪಕ್ಷಗಳ ಚುನಾವಣೆ ಪ್ರಚಾರ ವಸ್ತುವಾಗಿದ್ದ ಬ್ರಿಡ್ಜ್»

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಕಳೆದ ಚುನಾವಣೆ ಸಂದರ್ಭ ಶಂಕರನಾರಾಯಣ ಸೌಡ ಸೇತುವೆ ನಮ್ಮ ಸಾಧನೆ ಎಂದು ರಾಜಕೀಯ ಪಕ್ಷದವರು ನಾಮಫಲಕ ಹಾಕಿ ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿದ್ದರು. ವಿವಿಧ ಕಾಮಗಾರಿ ಉದ್ಘಾಟನೆ ಭರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೌಡ ಸೇತುವೆಗೆ ಶಿಲಾನ್ಯಾಸ ಕೂಡ ನೆರವೇರಿಸಿದ್ದರು. ಇದೆಲ್ಲ ಬೂಟಾಟಿಕೆ ಎಂಬ ಸತ್ಯ ಮಾಹಿತಿ ಹಕ್ಕು ಬಯಲು ಮಾಡಿದೆ!

ಸೌಡ ಸೇತುವೆಗೆ ಇನ್ನೂ ಟೆಂಡರ್ ಆಗಿಲ್ಲ. ರಾಜಕೀಯ ನಾಯಕರ ನಡುವೆ ವಾಕ್ಸಮರಕ್ಕೆ ವೇದಿಕೆಯಾದ, ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರತಿಷ್ಠೆಯ ಪ್ರಶ್ನೆಯಾದ, ಈ ಸೇತುವೆ ನಿರ್ಮಾಣಕ್ಕೆ ಮತ್ತೆಷ್ಟು ಕಾಲ ಕಾಯಬೇಕು ಎನ್ನುವುದು ಸದ್ಯ ಹುಟ್ಟಿಕೊಂಡಿರುವ ಪ್ರಶ್ನೆ. ಸೌಡ ಸೇತುವೆ ರಚನೆ ಕುರಿತು ಈ ಭಾಗದ ಜನರು ಹೋರಾಟ ನಡೆಸುತ್ತಿದ್ದು, ಇತ್ತೀಚೆಗೆ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಹೋರಾಟ ಮಾಡಿತ್ತು. ಸೌಡ ಸೇತುವೆ ಟೆಂಡರ್ ಆಗಿಲ್ಲ ಎಂಬ ವಿಷಯ ಗಮನಕ್ಕೆ ಬಂದಿದ್ದು ಮತ್ತೆ ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಸೌಡ ಸೇತುವೆ ಅರ್ಜಿ ಸಮಿತಿಯಲ್ಲಿ ವಿಷಯ ಮಂಡನೆ ಮಾಡಿ ಪ್ರಯತ್ನ ಮಾಡಿದ್ದು ಬಿಟ್ಟರೆ ಮುಂದೆ ಪ್ರಗತಿಯೇ ಆಗಿಲ್ಲ. ಜನ್ನಾಡಿಯಿಂದ ಶಂಕರನಾರಾಯಣ ಕಡೆಗೆ ಬರಲು ಇದ್ದ ನದಿಯ ಏಕೈಕ ದೋಣಿ ಮಾಯವಾಯಿತು. ರಾಜಕೀಯ ನಾಯಕರ ಭರವಸೆ ನಂಬಿ ಸೇತುವೆ ಆಗುತ್ತದೆ ಎಂದು ಕುಳಿತ ಜನರಿಗೆ ಇತ್ತ ಸೇತುವೆಯೂ ಇಲ್ಲ. ಅತ್ತ ಹೊಳೆಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿಯೂ ನಾಪತ್ತೆ!
ಶಿಲಾನ್ಯಾಸ ಆದ ಸೌಡ ಸೇತುವೆ ಟೆಂಡರ್ ಮುಗಿಸಿ, ಕಾಮಗಾರಿ ಆರಂಭಿಸದೆ ಮತ ಕೇಳಲು ಬಂದರೆ ಆಗ ತಕ್ಕ ಉತ್ತರ ನೀಡುತ್ತೇವೆ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆಯ ಸವಾಲು!: 
ಸೌಡ ಸೇತುವೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದು, ಚುನಾವಣೆ ಸಮಯ ಮಹತ್ವ ಪಡೆದುಕೊಳ್ಳುತ್ತದೆ. ಸೌಡ ಸೇತುವೆ ನನ್ನ ಪ್ರಯತ್ನ. ಅದಕ್ಕಾಗಿ ದೆಹಲಿಗೆ ಹೋಗಿ ಬಂದಿದ್ದು, ಸಚಿವರ ಹಾಗೂ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿದ್ದು ನಾನು. ಬಿಜೆಪಿಯವರು ಸೌಡ ಸೇತುವೆ ತಾವು ಮಾಡಿದ್ದು ಎಂಬುದಕ್ಕೆ ಪ್ರೂಫ್ ಕೊಟ್ಟರೂ ರಾಜಕೀಯಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅಂದಿನ ಬೈಂದೂರು ಶಾಸಕರು ಸವಾಲು ಹಾಕಿದ್ದರು. ಬೈಂದೂರು ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ನಡುವೆ ಸೌಡ ಸೇತುವೆ ಮಾತಿನ ಚಕಮಕಿಗೂ ಕಾರಣವಾಗಿತ್ತು.

 

ಸೌಡ ಸೇತುವೆ ನಿರ್ಮಾಣ ಪ್ರದೇಶದಲ್ಲಿ ವಾರಾಹಿ ನದಿ ಒಂದು ದಡ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತು ಇನ್ನೊಂದು ತೀರ ಉಡುಪಿ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಸೌಡ ಸೇತುವೆ ರಚನೆ ಆದರೆ ಉಪ ನೋಂದಣಿ ಕಚೇರಿ ಸಹಿತ ಹತ್ತು ಹಲವು ಸರ್ಕಾರಿ ಕಚೇರಿ ಹೊಂದಿರುವ ಶಂಕರನಾರಾಯಣ, ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಹುಂಬಾಡಿ ಮಂಡಾಡಿ, ಯಡಾಡಿ ಮತ್ಯಾಡಿ, ಕೊರ್ಗಿ, ಜಪ್ತಿ, ಹೆಸ್ಕತೂರು ಗ್ರಾಮಗಳ ಜನರಿಗೆ ಅತಿ ಸನಿಹ ಹಾಗೂ ಸಮಯ ಉಳಿತಾಯವಾಗಲಿದೆ. ಈ ಭಾಗದ ಜನರು ಕುಂದಾಪುರ ಹಾಗೂ ಉಡುಪಿಗೆ ಪ್ರಯಾಣಿಸಲು 10ರಿಂದ 12 ಕಿ.ಮೀ ದೂರ ಕಡಿಮೆಯಾಗಲಿದೆ .
-ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಸಂಚಾಲಕ, ಶಂಕರ ನಾರಾಯಣ ತಾಲೂಕು ಹೋರಾಟ ಸಮಿತಿ

ಸೌಡ ಸೇತುವೆ ರಚನೆ ಕುರಿತು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದಿಂದ ಮಾಹಿತಿ ಕೋರಿದ್ದು, ಸೌಡ ಸೇತುವೆ ಟೆಂಡರ್ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಜನಪ್ರತಿನಿಧಿಗಳು ಇನ್ನಾದರೂ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಟೆಂಡರ್ ಜಾರಿಯಾಗಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಒಳಿತು.
-ಬಿ.ಕೆ.ಶ್ರೀನಿವಾಸ ಸೌಡ, ಗ್ರಾಪಂ ಸದಸ್ಯ ಶಂಕರನಾರಾಯಣ