ಸೂರಜ್, ಸನಾ ಮಳಗಿ ಬಲಾಢ್ಯರು

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ನ್ಯೂ ಬಾಲಮಾರುತಿ ಜಿಮ್ನಾಶಿಯಂ 25ನೇ ವರ್ಷದ ಅಂಗವಾಗಿ ಕರ್ನಾಟಕ ಪವರ್ ಲಿಫ್ಟಿಂಗ್ ಸಹಯೋಗದಲ್ಲಿ ಮಂಗಳೂರು ಸ್ಕೌಟ್ ಗೈಡ್ಸ್ ಸಭಾಂಗಣದಲ್ಲಿ ಜರುಗಿದ ಮೂರು ದಿನಗಳ 44ನೇ ಪುರುಷ ಮತ್ತು 36ನೇ ಮಹಿಳಾ ರಾಜ್ಯ ಮಟ್ಟದ ಸೀನಿಯರ್ ಆ್ಯಂಡ್ ಮಾಸ್ಟರ್ಸ್‌ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಭಾನುವಾರ ಸಮಾಪನಗೊಂಡಿತು.
ಟೂರ್ನಿಯಲ್ಲಿ ಮಂಗಳೂರು ಬಾಲಾಂಜನೇಯ ಜಿಮ್ ಸದಸ್ಯ ಸೂರಜ್ ಕುಮಾರ್ ಸಿಂಗ್ ಕರ್ನಾಟಕದ ಬಲಾಢ್ಯ ಪುರುಷ ಹಾಗೂ ಧಾರವಾಡ ಜಿಲ್ಲೆಯ ಸನಾ ಮಳಗಿ ಕರ್ನಾಟಕದ ಬಲಿಷ್ಠ ಮಹಿಳೆ ಪ್ರಶಸ್ತಿ ಪಡೆದರು.
ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ತಂಡ ಪ್ರಶಸ್ತಿ ಪಡೆಯಿತು. ಶಿವಮೊಗ್ಗ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿತು. ಪುರುಷರ ವಿಭಾಗದಲ್ಲಿ ಬಾಲಾಂಜನೇಯ ಜಿಮ್ ಮಂಗಳೂರು ತಂಡ ಪ್ರಶಸ್ತಿ ಪಡೆದಿದ್ದು, ಸುಪರ್ ಬಾಡೀಸ್ ಬೆಂಗಳೂರು ದ್ವಿತೀಯ ಸ್ಥಾನ ಗಳಿಸಿದೆ.

ಮಾಸ್ಟರ್ಸ್‌ ವಿಭಾಗ: ಮಾಸ್ಟರ್ಸ್‌- 1 ವಿಭಾಗದಲ್ಲಿ ದಾವಣಗೆರೆಯ ಮುನಿಸಿಪಲ್ ಸ್ಪೋರ್ಟ್ಸ್ ಕ್ಲಬ್‌ನ ಬಿ.ಎಚ್.ಮಂಜುನಾಥ್, ಮಾಸ್ಟರ್ಸ್‌- 2 ವಿಭಾಗದಲ್ಲಿ ಮಂಗಳೂರು ಬಾಲಾಂಜನೇಯ ಜಿಮ್ ಸದಸ್ಯ ವಿಜಯ ಕಾಂಚನ್ ಹಾಗೂ ದಾವಣಗೆರೆಯ ಬೀರೇಶ್ವರದ ವೀರಭದ್ರಪ್ಪ ಕರ್ನಾಟಕದ ಬಲಿಷ್ಠ ಪುರುಷರಾಗಿ ಸ್ಥಾನ ಪಡೆದಿದ್ದಾರೆ.