ಸೂಜಿದಾರ ಮೇಲೆ ಹರಿಪ್ರಿಯಾ ಬೇಸರ: ಅವರಿಂದ ನಮಗೆ ಯಾವುದೇ ಬೆಂಬಲ ಸಿಕ್ಕಿಲ್ಲವೆಂದ ನಿರ್ದೇಶಕ

ಬೆಂಗಳೂರು: ಒಂದಕ್ಕಿಂತ ಒಂದು ಭಿನ್ನ ಸಿನಿಮಾ ಮಾಡುತ್ತ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ ಹರಿಪ್ರಿಯಾ. ಅವರ ನಟನೆಯ ‘ಸೂಜಿದಾರ’ ಚಿತ್ರ ಮೇ 10ರಂದು ತೆರೆಕಂಡಿದೆ. ವಿಮರ್ಶಕರ ವಲಯದಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದರೂ ಚಿತ್ರಮಂದಿರಕ್ಕೆ ಜನರನ್ನು ಕರೆತರುವಲ್ಲಿ ಈ ಸಿನಿಮಾ ಕೊಂಚ ಹಿಂದೆಬಿದ್ದಿದೆ. ಅಷ್ಟೇ ಅಲ್ಲ, ಹರಿಪ್ರಿಯಾ ಅಭಿಮಾನಿಗಳಿಗೆ ‘ಸೂಜಿದಾರ’ ಬೇಸರ ಮೂಡಿಸಿದೆಯಂತೆ! ಈ ಬಗ್ಗೆ ಸ್ವತಃ ಹರಿಪ್ರಿಯಾ ಹೇಳಿಕೊಂಡಿದ್ದಾರೆ.

‘ಇತ್ತೀಚೆಗೆ ಮನೆಗೆ ಬಂದು ಮಾತನಾಡಿಸಿದ ನನ್ನ ಅಭಿಮಾನಿಗಳು ತಮಗೆ ‘ಸೂಜಿದಾರ’ ಸಿನಿಮಾ ಇಷ್ಟವಾಗಿಲ್ಲ ಎಂಬುದಾಗಿ ಹೇಳಿದರು. ತೆರೆಮೇಲೆ ಹೆಚ್ಚು ಹೊತ್ತು ನನ್ನನ್ನು ನೋಡಲು ಅವರೆಲ್ಲ ಬಯಸಿದ್ದರು. ಆದರೆ ಈ ಚಿತ್ರದಲ್ಲಿ ನನ್ನ ಪಾತ್ರ ಹೆಚ್ಚಾಗಿ ಕಾಣಿಸಿಕೊಂಡಿಲ್ಲವಾದ್ದರಿಂದ ಅವರೆಲ್ಲ ಚಿತ್ರಮಂದಿರದಿಂದ ಹೊರನಡೆದರಂತೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿರ್ದೇಶಕರು ಹೇಳಿದ ಕಥೆ ಅದಾಗಿರಲಿಲ್ಲ. ನಂತರ ಅನವಶ್ಯಕ ಅಂಶಗಳನ್ನು ಸೇರಿಸಲಾಗಿದೆ. ಮೊದಲ ದಿನ ಸಿನಿಮಾ ನೋಡಿದಾಗಲೇ ನನಗೆ ಬೇಸರವಾಯಿತು. ಆದರೂ ಸುಮ್ಮನಿದ್ದೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಒಂದು ತಂಡಕ್ಕೆ ಬೆಂಬಲ ನೀಡುವುದು ನನ್ನ ಉದ್ದೇಶವಾಗಿತ್ತು. ಆದರೆ ಈಗ ಏನಾಗಿದೆ ನೋಡಿ. ಇದಕ್ಕಾಗಿ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಹರಿಪ್ರಿಯಾ. ಈ ಚಿತ್ರವನ್ನು ಮೌನೇಶ್ ಬಡಿಗೇರ್ ನಿರ್ದೇಶನ ಮಾಡಿದ್ದು, ನಾಯಕನಾಗಿ ಯಶವಂತ್ ಶೆಟ್ಟಿ ನಟಿಸಿದ್ದಾರೆ.

ಹರಿಪ್ರಿಯಾ ಹೇಳಿಕೆ ಹಾಸ್ಯಾಸ್ಪದ ಎನಿಸುತ್ತಿದೆ. ಚಿತ್ರೀಕರಣಕ್ಕೂ ಮುನ್ನ ಪೂರ್ತಿ ಸ್ಕ್ರಿಪ್ಟ್ ಅವರಿಗೆ ನೀಡಿದ್ದೆವು. ಅದಕ್ಕೂ ಚಿತ್ರಕ್ಕೂ ಏನಾದರೂ ವ್ಯತ್ಯಾಸ ಇದ್ದರೆ ತೋರಿಸಲಿ. ಆಗ ನಾನೇ ಒಪ್ಪಿಕೊಳ್ಳುತ್ತೇನೆ. ರಂಗಭೂಮಿ ತಂಡಕ್ಕೆ ಅವರು ಅನುಕಂಪ ತೋರಿಸುವ ಅಗತ್ಯವಿಲ್ಲ. ಅವರಿಂದ ನಮಗೆ ಯಾವುದೇ ಬೆಂಬಲ ಸಿಕ್ಕಿಲ್ಲ. 6 ತಿಂಗಳಿಂದ ಅವರು ದೂರವಾಣಿ ಸಂಪರ್ಕಕ್ಕೂ ಸಿಗಲಿಲ್ಲ. ಅದರಿಂದಾಗಿಯೇ ಚಿತ್ರದ ಬಿಡುಗಡೆ ತಡವಾಯ್ತು.

| ಮೌನೇಶ್ ಬಡಿಗೇರ್ ನಿರ್ದೇಶಕ

Leave a Reply

Your email address will not be published. Required fields are marked *