ಚೈತ್ರ ಬಂದ್ರೆ ನಾನು ಬರೋದಿಲ್ಲ ಎಂದಿದರಂತೆ ಹರಿಪ್ರಿಯಾ: ನೀರ್​ದೋಸೆ ಬೆಡಗಿ ವಿರುದ್ಧ ಸಮರ ಸಾರಿದ ಸೂಜಿದಾರ ನಿರ್ಮಾಪಕ

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸೂಜಿದಾರ’ ಚಿತ್ರದ ವಿರುದ್ಧ ನಟಿ ಹರಿಪ್ರಿಯಾ ಅವರು ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ ಚಿತ್ರದ ನಿರ್ದೇಶಕ ಮೌನೇಶ್‌ ಮತ್ತು ನಿರ್ಮಾಪಕ ಸಚ್ಚೀಂದ್ರನಾಥ್ ಅವರು ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಮೌನೇಶ್ ಬಡಿಗೇರ್ ಮಾತನಾಡಿ, ಹರಿಪ್ರಿಯಾ ಹೇಳಿಕೆಯಿಂದ ನಮಗೆ ಮುಜುಗರ ಆಗಿದೆ. ನಟಿ ಹರಿಪ್ರಿಯಾ ಮುಂದೆ ಬಂದು ಸ್ಪಷ್ಟನೆ ನೀಡಬೇಕು. ಪೋಸ್ಟ್​ ಮೂಲಕ ವಿವಾದ ಬದಲು ಎದುರೇ ಹೇಳಲಿ ಎಂದು ಒತ್ತಾಯಿಸಿದ್ದಾರೆ.

​ಸಿನಿಮಾ ಶೂಟಿಂಗ್ ಮೊದಲೇ ಹರಿಪ್ರಿಯಾ ಅವರಿಗೆ ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಹೇಳಿದ್ದೇವು. ಅಲ್ಲದೆ ಇಡೀ ಸ್ಕ್ರೀಪ್ಟ್​ ಕೂಡ ನೀಡಿದ್ದೆವು. ಸಿನಿಮಾ ಶೂಟಿಂಗ್‌ ಮಾಡುವಾಗ ಏನೂ ಹೇಳಿಲ್ಲ. ಈಗ ಯಾಕೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಯಿಂದ ಸಿನಿಮಾದ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದ್ದು, ಸಿನಿಮಾದ ನಿರ್ಮಾಪಕರಿಗೆ ಬೇಸರದ ಜತೆಗೆ ನಷ್ಟವೂ ಆಗಿದೆ. ನಟಿ ಹರಿಪ್ರಿಯಾರ ಈ ರೀತಿಯ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಕಳೆದ ವರ್ಷ ವರಮಹಾಲಕ್ಷಿ ಹಬ್ಬದಲ್ಲಿ ಹರಿಪ್ರಿಯಾ ಹಾಗೂ ನಮ್ಮ‌ ನಡುವೆ ವೈಮನಸ್ಸು‌ ಆರಂಭವಾಗಿತ್ತು. ಹರಿಪ್ರಿಯಾ ಇರೋ ಸೂಜಿದಾರ ಪೋಸ್ಟ್ ಸಖತ್ ಸದ್ದು ಮಾಡಿತ್ತು. ನಂತರ ಸಿನಿಮಾದ ಎಲ್ಲ ಪಾತ್ರಧಾರಿಗಳನ್ನು ಪರಿಚಯಿಸುವ ಪೋಸ್ಟರ್ ರಿಲೀಸ್ ಮಾಡಿದ್ದೆವು. ಇದರಿಂದ ಹರಿಪ್ರಿಯ ಹಾಗೂ ಅವರ ತಾಯಿಗೆ ಇರಿಸು ಮುರುಸಾಯಿತು. ಅವರಿಗೆ ಪೋಸ್ಟರ್‌ನಲ್ಲಿ ಒಬ್ಬರೇ ಇರಬೇಕು ಎಂಬ ಆಸೆ ಇತ್ತು. ಬೇರೆ ಬೇರೆ ಪಾತ್ರಧಾರಿಗಳನ್ನು ಪರಿಚಯಿಸುತ್ತಾ ಹೋದಂತೆ ಅವರ ವರ್ತನೆ ಬದಲಾಯಿತು. ಅಲ್ಲಿಂದ‌ ನಮ್ಮ ಫೋನ್ ಸಂಪರ್ಕಕಕ್ಕೆ ಹರಿಪ್ರಿಯಾ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಸೂಜಿದಾರ ನಿರ್ಮಾಪಕ ಮಾತನಾಡಿ, ಕೋ ಆಕ್ಟರ್ ಚೈತ್ರ ಬಂದ್ರೆ ನಾನು ಪತ್ರಿಕಾಗೋಷ್ಠಿಗೆ ಬರೋದಿಲ್ಲ ಎಂದು ಹರಿಪ್ರಿಯಾ ಹೇಳುತ್ತಿದ್ದರು. ಹರಿಪ್ರಿಯಾಗೆ ಅವರೊಬ್ಬರೇ ಹೈಲೈಟ್ ಆಗಬೇಕು ಎಂಬ ಜಲಸ್ ಇತ್ತು. ಅವರ ಹೇಳಿಕೆಯಿಂದ ನನಗೆ ಲಾಸ್ ಆಗಿದೆ. ಹರಿಪ್ರಿಯಾ ನನಗೆ‌ ಆದ‌ ನಷ್ಟ ಭರಿಸಿಕೊಡಬೇಕು ಎಂದು ಹೇಳಿದರು.

ತಮ್ಮ ನಟನೆಯ ‘ಡಾಟರ್​ ಆಫ್​ ಪಾರ್ವತಮ್ಮ’ ಚಿತ್ರದ ಟ್ರೇಲರ್​ ಹಾಗೂ ಸಾಂಗ್ಸ್​ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹರಿಪ್ರಿಯಾ ಅವರು, ‘ಸೂಜಿದಾರ’ ಚಿತ್ರವನ್ನು ಇನ್ನೂ ದೊಡ್ಡ ಮಟ್ಟಕ್ಕೆ ತಲುಪಿಸಬಹುದಾಗಿತ್ತು. ಆದರೆ, ನಿರ್ದೇಶಕರು ನನ್ನ ಜತೆ ಚರ್ಚೆ ಮಾಡುವಾಗ ಹೇಳಿದ ಕತೆಯೇ ಬೇರೆ ಸಿನಿಮಾದಲ್ಲಿ ಮೂಡಿ ಬಂದಿರುವ ಕತೆಯೇ ಬೇರೆ. ನಾನು ಸಿನಿಮಾ ನೋಡಿದಾಗ ನನ್ನ ಜತೆ ಚರ್ಚೆ ಮಾಡಿದ ಅಂಶಗಳು ಅಷ್ಟಾಗಿ ಕಾಣಿಸಲಿಲ್ಲ. ಬೇಕಿಲ್ಲದ ದೃಶ್ಯಗಳನ್ನು ಹೆಚ್ಚು ಸಿನಿಮಾದಲ್ಲಿ ತೋರಿಸಲಾಗಿದೆ. ಅದನ್ನು ಮುಂಚೆಯೇ ನನ್ನ ಬಳಿ ಚರ್ಚೆ ಮಾಡಬಹುದಿತ್ತು. ಈ ಬಗ್ಗೆ ನಿರ್ಮಾಪಕರಿಗೂ ಬೇಸರವಿದೆ ಎಂದು ತಿಳಿಸಿದ್ದರು.(ದಿಗ್ವಿಜಯ ನ್ಯೂಸ್‌)