ಚತುರ್ಭಾಷೆಯಲ್ಲಿ ಸೋನು ಶೈನಿಂಗ್: ಸುದೀಪ್ ಹೇಳಿದಾಗಲೇ ‘ಐ ಲವ್ ಯೂ’ ಚಿತ್ರದಲ್ಲಿ ನಾನಿದ್ದೇನೆಂದು ಗೊತ್ತಾಗಿದ್ದು

| ಮದನ್ ಬೆಂಗಳೂರು

ಈ ವರ್ಷ ‘ಫಾರ್ಚುನರ್’ ಮತ್ತು ‘ಚಂಬಲ್’ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ನಟಿ ಸೋನು ಗೌಡ ಜೂ. 14ರಂದು ಬಿಡುಗಡೆ ಆಗುತ್ತಿರುವ ‘ಐ ಲವ್ ಯೂ’ ಸಿನಿಮಾದಲ್ಲೂ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ಕೂಡ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಮೂಲಕ ನಿರ್ದೇಶಕ ಆರ್. ಚಂದ್ರು ಸಿಕ್ಕಾಪಟ್ಟೆ ಕೌತುಕ ಕೆರಳಿಸಿದ್ದಾರಾದರೂ ಸೋನು ಪಾತ್ರದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ. ಒಟ್ಟಾರೆ ಸಿನಿಮಾ ಕುರಿತು ‘ಸಿನಿವಾಣಿ’ ಜತೆ ಸೋನು ಮಾತನಾಡಿದ್ದಾರೆ.

# ಪೋಸ್ಟರ್ ಮತ್ತು ಮೊದಲ ಟ್ರೇಲರ್​ನಲ್ಲಿ ನೀವು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ನಿರ್ದೇಶಕರು ಮೊದಲೇ ನಿಮಗೆ ತಿಳಿಸಿದ್ದರಾ?

ಹೌದು, ಮೊದಲೇ ಹೇಳಿದ್ದರು. ಅದರ ಬಗ್ಗೆ ನನಗೆ ಕಿಂಚಿತ್ತೂ ಬೇಸರ ಇಲ್ಲ. ಯಾಕೆಂದರೆ, ಅವರ ಉದ್ದೇಶ ಒಳ್ಳೆಯದಾಗಿತ್ತು. ಕಥೆಯನ್ನು ಹೇಳಲು ಅವರು ಆಯ್ದುಕೊಂಡಿರುವ ವಿಧಾನವೇ ಹಾಗಿದೆ. ರಚಿತಾ ರಾಮ್ ಮತ್ತು ಉಪೇಂದ್ರ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ. ಅವರೇ ಈ ಚಿತ್ರದ ಮುಖ. ಆದರೆ ಕಥೆಯ ಮುಖ್ಯ ಭಾಗ ನನ್ನ ಪಾತ್ರ. ಆ ಪಾತ್ರವಿಲ್ಲದೆ ಸಿನಿಮಾ ಪೂರ್ಣ ಆಗುವುದಿಲ್ಲ. ನನ್ನ ಪಾತ್ರಕ್ಕೆ ಮೆಚ್ಚುಗೆ ಸೂಚಿಸುತ್ತಾರೆ ಎಂಬ ನಂಬಿಕೆ ನನಗಿದೆ. ಟ್ರೇಲರ್, ಪೋಸ್ಟರ್ ಮುಂತಾದವು ತಾತ್ಕಾಲಿಕ ಮಾತ್ರ. ರಿಲೀಸ್​ವರೆಗೆ ಮಾತ್ರ ಅವುಗಳು ಸೌಂಡು ಮಾಡುತ್ತವಷ್ಟೇ. ಆದರೆ ಸಿನಿಮಾವನ್ನು ಜನರು ಎಂದಿಗೂ ನೆನಪಿಟ್ಟುಕೊಳ್ಳುತ್ತಾರೆ.

# ನಿಮ್ಮ ಪಾತ್ರದ ಬಗ್ಗೆ ನಿರ್ದೇಶಕರು ಹೆಚ್ಚು ಮಾಹಿತಿ ಬಿಟ್ಟುಕೊಡದಿರಲು ಕಾರಣ ಏನು?

ನನ್ನ ಪಾತ್ರವನ್ನು ಈ ಕಥೆಯ ಹೃದಯ ಎನ್ನಬಹುದು. ಅದೇ ಮುಖ್ಯ ಟ್ವಿಸ್ಟ್. ಅದನ್ನು ಈಗಲೇ ಬಹಿರಂಗಪಡಿಸಿದರೆ ಅಸಲಿ ಮಜಾ ಹೊರಟುಹೋಗುತ್ತದೆ. ಚಿತ್ರಮಂದಿರದಲ್ಲಿಯೇ ಜನರು ಅದನ್ನು ನೋಡಿ ಎಂಜಾಯ್ ಮಾಡುತ್ತಾರೆ.

# ಉಪೇಂದ್ರ ಜತೆ ನಟಿಸಿದ್ದು ಹೇಗನಿಸಿತು?

ಚಿಕ್ಕವಳಿದ್ದಾಗಲೇ ಅವರ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೆ. ಆದರೆ ‘ಉಪೇಂದ್ರ’ ಸಿನಿಮಾ ನೋಡಿರಲಿಲ್ಲ. ಅದನ್ನು ನೋಡಲು ಇಂಟರ್​ನೆಟ್​ನಲ್ಲಿ ಹುಡುಕಿದಾಗ ಅವರ ಬಗ್ಗೆ ಇನ್ನಷ್ಟು ಮಾಹಿತಿ ಗೊತ್ತಾಯಿತು. ಭಾರತದ 10 ಅತ್ಯುತ್ತಮ ನಿರ್ದೇಶಕರಲ್ಲಿ ಉಪೇಂದ್ರ ಹೆಸರು ಕೂಡ ಇದೆ ಎಂಬುದು ತಿಳಿಯಿತು. ಅಂಥವರ ಜತೆ ನಟಿಸುವುದು ಎಂದರೆ ತಮಾಷೆಯ ವಿಷಯ ಅಲ್ಲ. ಚಿಕ್ಕ ಅಂಶಗಳನ್ನೂ ಗಮನಿಸುತ್ತಾರೆ ಎಂಬ ಕಾರಣಕ್ಕೆ ತುಂಬ ತಯಾರಿ ಮಾಡಿಕೊಂಡು ಶೂಟಿಂಗ್​ಗೆ ಹೋದೆ. ಆದರೆ ಅವರನ್ನು ನೋಡಿದ ತಕ್ಷಣ ಬ್ಲಾ್ಯಂಕ್ ಆದೆ. ಮೊದಲ ದಿನವೇ ಅವರ ಜತೆ ಮಾತಾಡುತ್ತ ಹೊಸ ವಿಚಾರಗಳು ಗೊತ್ತಾದವು. ಎಲ್ಲವೂ ಗೊತ್ತಿದ್ದರೂ ಒಂದು ಮಗುವಿನ ರೀತಿ ತನಗೆ ಏನೂ ತಿಳಿದಿಲ್ಲ ಎಂಬಂತೆ ಇರುತ್ತಾರೆ. ಇನ್ನಷ್ಟು ತಿಳಿದುಕೊಳ್ಳಬೇಕು ಎಂಬ ಹಂಬಲ ಅವರ ಮಾತುಗಳಲ್ಲಿ ಗೊತ್ತಾಗುತ್ತದೆ. ಪ್ರಜಾಕೀಯದ ಆಲೋಚನೆಗಳ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದರು. ಹಾಗಾಗಿ ಬೇರೆ ಎಲ್ಲ ನಟರಿಗಿಂತ ಉಪೇಂದ್ರ ತುಂಬ ಭಿನ್ನ ಎನಿಸಿದರು.

# ಟ್ರೇಲರ್ ನೋಡಿದ ಬಳಿಕ ಸುದೀಪ್ ಕೂಡ ನಿಮ್ಮ ಪಾತ್ರದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ..

ಈ ಚಿತ್ರದಲ್ಲಿ ನಾನು ನಟಿಸಿದ್ದೇನೆ ಎಂಬುದು ನನ್ನ ಸ್ನೇಹಿತರು ಮತ್ತು ಸಂಬಂಧಿಗಳಿಗೇ ಗೊತ್ತಿರಲಿಲ್ಲ. ಟ್ರೇಲರ್ ನೋಡಿ ಸುದೀಪ್ ನನ್ನ ಪಾತ್ರದ ಬಗ್ಗೆ ಮಾತನಾಡಿದ ಬಳಿಕ ಎಲ್ಲರಿಗೂ ಕುತೂಹಲ ಮೂಡಿದೆ. ಸಿನಿಮಾ ಮತ್ತು ಪಾತ್ರ ಹೇಗಿದೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಆ ಟ್ರೇಲರ್​ನಲ್ಲಿ ನಾನು ಕಾಣಿಸಿಕೊಂಡಿರು ವುದು 2 ಸೆಕೆಂಡ್​ಗಿಂತಲೂ ಕಡಿಮೆ! ಹಾಗಿದ್ದರೂ ಸುದೀಪ್ ಅದನ್ನು ಗಮನಿಸಿದ್ದಾರೆ. ಸಿನಿಮಾಗಳ ಬಗ್ಗೆ ಅವರಿಗೆ ಎಷ್ಟು ಪ್ಯಾಷನ್ ಇದೆ ಎಂಬುದಕ್ಕೆ ಇದೇ ಸಾಕ್ಷಿ.

# ಗೃಹಿಣಿ ಪಾತ್ರ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯ?

ಆರಂಭದಲ್ಲಿ ನಿರ್ದೇಶಕ ಚಂದ್ರು ಬಂದು ಈ ಪಾತ್ರದ ಬಗ್ಗೆ ಹೇಳಿದಾಗ ನಿಜಕ್ಕೂ ಬೇಸರವಾಗಿತ್ತು. ಯಾಕಪ್ಪ ಪದೇಪದೆ ಎಲ್ಲರೂ ಇಂಥದ್ದೇ ಪಾತ್ರಗಳನ್ನೇ ನೀಡುತ್ತಾರಲ್ಲ ಎನಿಸಿತು. ಉಪೇಂದ್ರ ಜತೆ ನಟಿಸುವ ಅವಕಾಶ ಸಿಕ್ಕಿದೆ ಎಂಬ ಖುಷಿ ಇದ್ದರೂ ಮತ್ತೆ ಗೃಹಿಣಿಯಾಗಿ ಕಾಣಿಸಿಕೊಳ್ಳಲು ಮನಸ್ಸು ಹಿಂಜರಿಯಿತು. ಆದರೆ ನಂತರ ಆ ಪಾತ್ರವನ್ನು ನಿರ್ದೇಶಕರು ಪೂರ್ಣ ವಿವರಿಸಿದಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಹಾಗೆ ನೋಡಿದರೆ, ನಾನು ಚಿಕ್ಕವಯಸ್ಸಿನಲ್ಲೇ ಗೃಹಿಣಿ ಪಾತ್ರ ಮಾಡಿದ್ದೆ. ನನ್ನ 17ನೇ ವಯಸ್ಸಿನಲ್ಲಿ ಮಾಡಿದ ‘ಇಂತಿ ನಿಮ್ಮ ಪ್ರೀತಿಯ’ ಮತ್ತು ಮಮ್ಮೂಟ್ಟಿ ಜತೆ ನಟಿಸಿದ ‘ಬೆಸ್ಟ್ ಆಕ್ಟರ್’ ಚಿತ್ರದಲ್ಲೂ ಗೃಹಿಣಿಯಾಗಿದ್ದೆ. ಆ ಪ್ರಾಯದಲ್ಲೇ ಅಂಥ ಪಾತ್ರ ಮಾಡಿರುವಾಗ ಈಗ ಹಿಂಜರಿಯುವುದರಲ್ಲಿ ಅರ್ಥವಿಲ್ಲ ಎನಿಸಿತು. ಮತ್ತೆ ಕಮರ್ಷಿಯಲ್ ಹೀರೋಯಿನ್ ಆಗಿ ನಟಿಸುವುದು ದೊಡ್ಡ ಮಾತೇನಲ್ಲ. ಆದರೆ ಇಂಥ ಪಾತ್ರ ಮತ್ತೆ ಸಿಗುವುದಿಲ್ಲ ಎನಿಸಿ ಖುಷಿಯಿಂದ ಒಪ್ಪಿಕೊಂಡೆ.

# ನಿರ್ದೇಶಕ ಚಂದ್ರು ಕಾರ್ಯವೈಖರಿ ಬಗ್ಗೆ ಹೇಳಿ…

ಕಮರ್ಷಿಯಲ್ ಸಿನಿಮಾಗಳ ನಿರ್ದೇಶಕರ ಜತೆ ನಾನು ಕೆಲಸ ಮಾಡಿದ್ದು ಕಡಿಮೆ. ಹಾಗಾಗಿ ಅಂಥ ನಿರ್ದೇಶಕರು ಕೆಲಸ ಮಾಡುವ ರೀತಿ ಹೇಗಿರುತ್ತದೆ ಎಂಬ ಕೌತುಕ ನನಗೆ ಸದಾ ಇರುತ್ತದೆ. ನನ್ನ ಪಾತ್ರವನ್ನು ಚಂದ್ರು ಕಟ್ಟಿಕೊಟ್ಟಿರುವ ಶೈಲಿ ತುಂಬ ಚೆನ್ನಾಗಿದೆ. ಹಲವು ವಿಚಾರಗಳ್ನು ಹೇಳಿಕೊಟ್ಟರು. ನಿರ್ದೇಶಕ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಶಿಕ್ಷಕನ ರೀತಿ ಇದ್ದರು. ಅವರು ಹೇಳಿಕೊಟ್ಟ ಅಂಶಗಳು ಬೇರೆ ಸಿನಿಮಾಗಳಲ್ಲಿ ನಟಿಸುವಾಗಲೂ ಸಹಾಯಕ್ಕೆ ಬರುತ್ತಿವೆ. ಈ ಚಿತ್ರದ ನಿರ್ವಪಕರು ಕೂಡ ಅವರೇ ಆಗಿರುವುದರಿಂದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದಾರೆ. ಗೆದ್ದರೂ ಸೋತರು ಅದರ ಸಂಪೂರ್ಣ ಹೊಣೆ ತಮ್ಮದೇ ಎಂಬ ಮನೋಭಾವದಲ್ಲಿ ಸಿನಿಮಾ ಮಾಡಿದ್ದಾರೆ. ಚಿತ್ರದ ಪ್ರಚಾರವನ್ನೂ ಶ್ರದ್ಧೆಯಿಂದ ಮಾಡುತ್ತಿದ್ದಾರೆ.

# ‘ಕಡ್ಡಾಯವಾಗಿ ಕುಟುಂಬ ಸಮೇತವಾಗಿ ನೋಡಿ..’ ಎಂಬ ವಾಕ್ಯದೊಂದಿಗೆ ಪ್ರಚಾರ ಮಾಡಲಾಗುತ್ತಿದೆ. ಆದರೆ ಟ್ರೇಲರ್​ನಲ್ಲಿ ಕೆಲವು ದೃಶ್ಯಗಳು ಹಾಟ್ ಆಗಿವೆ. ಅದಕ್ಕೆ ನೀವೇನು ಹೇಳುತ್ತೀರಿ?

ಇಂದಿನ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಸಿನಿಮಾ ಮಾಡಲಾಗಿದೆ. ಟ್ರೇಲರ್​ನಲ್ಲಿ ನೀವು ನೋಡಿರುವುದು ಚಿತ್ರದ ಒಂದು ಮುಖ ಮಾತ್ರ. ಒಂದು ನಾಣ್ಯಕ್ಕೆ ಎರಡು ಮುಖ ಇರುವ ಹಾಗೆ ಈ ಚಿತ್ರಕ್ಕೆ ಇನ್ನೊಂದು ಆಯಾಮ ಕೂಡ ಇದೆ. ಇದು ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ ಕೂಡ ಆಗಿರುವುದರಿಂದ ಕುಟುಂಬ ಸಮೇತ ನೋಡಿ ಎಂದು ನಿರ್ದೇಶಕರು ಹೇಳುತ್ತಿದ್ದಾರೆ. ನನ್ನ ಎಲ್ಲ ಚಿತ್ರಗಳನ್ನೂ ನಾನು ಕುಟುಂಬದವರ ಜತೆಯೇ ನೋಡುವುದು. ‘ಐ ಲವ್ ಯೂ’ ಸಹ ನೋಡುತ್ತೇನೆ.

# ರಚಿತಾ ರಾಮ್ ಜತೆ ನೀವು ತೆರೆಹಂಚಿಕೊಂಡಿದ್ದೀರಾ?

ಅದನ್ನು ಈಗಲೇ ಹೇಳುವುದಿಲ್ಲ. ಅವರು ನಿಭಾಯಿಸಿದ ಪಾತ್ರ ಆಕರ್ಷಕವಾಗಿದೆ. ಇಂಥ ಬೋಲ್ಡ್ ಪಾತ್ರವನ್ನು ಮತ್ತೆ ಮಾಡುವುದಿಲ್ಲ ಎಂದು ಒಂದು ಸಂದರ್ಶನದಲ್ಲಿ ಅವರು ಹೇಳಿದ್ದು ಗೊತ್ತಾಯಿತು. ನನ್ನ ಪ್ರಕಾರ, ಬೋಲ್ಡ್ ಅಲ್ಲದಿದ್ದರೂ ಇಂಥ ಭಿನ್ನ ಪಾತ್ರಗಳಲ್ಲಿ ಅವರು ಮತ್ತೆ ಮತ್ತೆ ಕಾಣಿಸಿಕೊಳ್ಳಬೇಕು. ಅವರೊಳಗಿನ ಪ್ರತಿಭೆ ತೋರಿಸಲು ಇನ್ನೂ ಬೇರೆ ರೀತಿಯ ಚಿತ್ರ ಮತ್ತು ಪಾತ್ರಗಳ ಅಗತ್ಯ ಇದೆ. ಅಭಿಮಾನಿಗಳು ಅವರನ್ನು ಯಾವುದಕ್ಕೂ ಬ್ರಾ್ಯಂಡ್ ಮಾಡಬಾರದು.

# ಈ ಚಿತ್ರದ ಮೂಲಕ ತೆಲುಗಿಗೂ ಕಾಲಿಡುತ್ತಿದ್ದೀರಿ..

ಹೌದು, ಆ ಚಿತ್ರದಿಂದ ‘ಚತುರ್ಭಾಷಾ ನಟಿ’ ಎನಿಸಿಕೊಳ್ಳುತ್ತಿದ್ದೇನೆ ಎಂಬ ಖುಷಿ ಇದೆ. ನನಗೆ ಪರಭಾಷೆಯಲ್ಲಿ ಅವಕಾಶಗಳು ಸಿಗಲು ಕಾರಣವಾಗಿದ್ದೇ ಕನ್ನಡ ಸಿನಿಮಾಗಳು. ನನ್ನ ಮೂಲ ಇರುವುದೇ ಇಲ್ಲಿ. ನಾನಾಗಿಯೇ ಅವಕಾಶ ಕೇಳಿಕೊಂಡು ಎಲ್ಲಿಗೂ ಹೋಗಿಲ್ಲ. ಕನ್ನಡ ಸಿನಿಮಾಗಳನ್ನು ನೋಡಿ ಬೇರೆ ಭಾಷೆಯವರು ಚಾನ್ಸ್ ನೀಡುತ್ತಿದ್ದಾರೆ. ಈಗ ಪರಭಾಷೆಯಲ್ಲಿ ಕನ್ನಡದ ನಾಯಕಿಯರು ಹೆಚ್ಚು ಖ್ಯಾತಿ ಪಡೆಯುತ್ತಿದ್ದಾರೆ. ಒಂದು ವೇಳೆ ‘ಐ ಲವ್ ಯೂ’ ಮೂಲಕ ಟಾಲಿವುಡ್​ನಲ್ಲಿ ಒಳ್ಳೆಯ ಆಫರ್​ಗಳು ಬರಲಾರಂಭಿಸಿದರೆ ಅದಕ್ಕೆ ಚಂದ್ರು ಅವರಿಗೆ ಧನ್ಯವಾದ ಹೇಳುತ್ತೇನೆ.

Leave a Reply

Your email address will not be published. Required fields are marked *