ಮಳೆಹಾನಿ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ಸಕಲೇಶಪುರ: ಮಹಾ ಮಳೆಯಿಂದ ನಲುಗಿರುವ ಸಕಲೇಶಪುರ ತಾಲೂಕಿನ ಮಲೆನಾಡು ಭಾಗದ ವಿವಿಧ ಪ್ರದೇಶಗಳಿಗೆ ಅಂತರ ಸಚಿವಾಲಯದ ಕೇಂದ್ರ ತಂಡದ ಮೂವರು ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಪುತ್ತೂರಿನಿಂದ ಆಗಮಿಸಿದ ಬಿ.ಕೆ.ಸಿಂಗ್, ಎಂ.ಕೆ.ಪಂಡಿತ್ ಹಾಗೂ ಸದಾನಂದ ಬಾಬು ಅವರನ್ನೊಳಗೊಂಡ ಮೂವರು ಅಧಿಕಾರಿಗಳ ತಂಡ, ಶಿರಾಡಿಘಾಟ್, ಆಲುವಳ್ಳಿ-ಕಡ್ರವಳ್ಳಿ, ಮಂಕನಹಳ್ಳಿ, ವಳಲಹಳ್ಳಿ, ಹೆತ್ತೂರು, ಮೊಗನಹಳ್ಳಿ, ಬಿಸಿಲೆಘಾಟ್, ಅಡ್ಡಹೊಳೆ, ಮಾಗೇರಿಗೆ, ಹಿಜ್ಜನಹಳ್ಳಿ ಭಾಗದಲ್ಲಿ ಭೂಕುಸಿತ ಮತ್ತು ಕಾಫಿ ಇತ್ಯಾದಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿತ್ತು .
ಸಂತ್ರಸ್ತರು ಅಧಿಕಾರಿಗಳ ತಂಡದೆದುರು ಅಳಲು ತೋಡಿಕೊಂಡರು. ಈ ಬಾರಿಯ ಮಳೆಗೆ ಮಲೆನಾಡಿನ ಬಹುತೇಕ ಗ್ರಾಮಗಳಿಗೆ ಹಾನಿಯಾಗಿದ್ದು, ತಾಲೂಕು ಆಡಳಿತ 700 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂಬ ವರದಿ ನೀಡಿದೆ. ಕಾಫಿ, ಮೆಣಸು, ಏಲಕ್ಕಿ ಸೇರಿ 250 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದ್ದರೆ, ಕೃಷಿ ಜಮೀನು ಹಾಗೂ ಗುಡ್ಡ ಕುಸಿತದಿಂದ 150 ಕೋಟಿ ರೂ.ನಷ್ಟವಾಗಿದೆ. ಉಳಿ ದಂತೆ ಮನೆ, ಶಾಲಾಕಟ್ಟಡ, ರಸ್ತೆ ಸೇರಿ ಒಟ್ಟು 720 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮಾತ್ರ ಪರಿಹಾರ ನೀಡಿದರೆ ಸಾಲುವುದಿಲ್ಲ. ಬದಲಾಗಿ ರೈತರ ಕಣ್ಣೀರು ಆಲಿಸಿ, ಅದನ್ನು ಅಳಿಸುವಷ್ಟು ತೃಪ್ತಿಕರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಮಳೆಯಿಂದ ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರರು, ರೈತರು, ಹಳ್ಳಿಗಾಡಿನ ಜನರ ದೂರು ದುಮ್ಮಾನಗಳನ್ನು ಶಾಂತ ಚಿತ್ತದಿಂದ ಆಲಿಸಿದ ಅಧಿಕಾರಿಗಳ ತಂಡ ಈ ಬಗ್ಗೆ ಕೇಂದ್ರಕ್ಕೆ ವರದಿ ನೀಡುವುದಾಗಿ ತಿಳಿಸಿತು.
ಈ ವೇಳೆ ಅಧಿಕಾರಿ ಬಿ.ಕೆ.ಸಿಂಗ್ ಮಾತನಾಡಿ, ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇನ್ನಷ್ಟು ಮಾಹಿತಿ ಪಡೆಯುತ್ತೇವೆ. ಆದಷ್ಟು ಶೀಘ್ರ ಕೇಂದ್ರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದರು. ಜಿಪಂ ಸದಸ್ಯೆ ಉಜ್ಮರುಜ್ವಿ, ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಹಾಜರಿದ್ದರು.