ಮೈತ್ರಿಗೆ ಸೋನಿಯಾ ರಾಯಭಾರ

ನವದೆಹಲಿ: ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಮಹಾಮೈತ್ರಿ ಮತ್ತು ತೃತೀಯ ರಂಗ ರಚನೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಖಾಡಕ್ಕೆ ಇಳಿದಿದ್ದಾರೆ. ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಪಕ್ಷಗಳನ್ನು ಒಗ್ಗೂಡಿಸುವ ಯತ್ನ ನಡೆಸಿದ್ದಾರೆ. ಯುಪಿಎ ಮಾತ್ರವಲ್ಲದೇ, ಎನ್​ಡಿಎ ಹೊರತಾದ ಪಕ್ಷಗಳ ನಾಯಕರ ಜತೆ ಅವರು ದೂರವಾಣಿ ಮೂಲಕ ಮಾತುಕತೆ ನಡೆಸುತ್ತಿದ್ದು, ಮೇ 23ರ ನಂತರದ ಕಾರ್ಯತಂತ್ರ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಫಲಿತಾಂಶದ ದಿನ ಸಭೆ: ಲೋಕಸಭೆ ಫಲಿತಾಂಶ ಪ್ರಕಟವಾಗುವ ಮೇ 23ರಂದೇ ಸೋನಿಯಾ ಗಾಂಧಿ ಮಿತ್ರಪಕ್ಷಗಳ ಸಭೆ ಕರೆದಿದ್ದಾರೆ. ಎನ್​ಡಿಎ ಹಾಗೂ ಯುಪಿಎ ಹೊರತಾದ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಬಿಜೆಪಿ ಸ್ವತಂತ್ರವಾಗಿ ಬಹುಮತ ಪಡೆಯುವುದು ಅನುಮಾನ ಎಂದು ಅನೇಕ ಸಮೀಕ್ಷೆಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಎನ್​ಡಿಎಯೇತರ ಪಕ್ಷಗಳನ್ನು ಓಲೈಕೆ ಮಾಡಿ, ಯುಪಿಎ ಬಲ ಹೆಚ್ಚಿಸಿ ಸರ್ಕಾರ ರಚನೆಗೆ ಯತ್ನಿಸುವುದು ಸೋನಿಯಾ

ಗಾಂಧಿ ಯೋಜನೆ ಎನ್ನಲಾಗುತ್ತಿದೆ. ಬಿಜೆಡಿ, ವೈಎಸ್​ಆರ್​ಸಿಪಿ, ಟಿಆರ್​ಎಸ್ ಇನ್ನಿತರ ಪಕ್ಷಗಳ ನಾಯಕರಿಗೆ ಸೋನಿಯಾ ಗಾಂಧಿ ವೈಯಕ್ತಿಕವಾಗಿ ಪತ್ರ ಬರೆದು ಸಭೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಒಗ್ಗಟ್ಟು ಕಾಯ್ದುಕೊಳ್ಳುವುದೇ ದೊಡ್ಡ ಸವಾಲು

ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ ಬಳಿಕ ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದಾರೆ. ಆದರೆ ಯುಪಿಎ ಅಧ್ಯಕ್ಷೆ ಸ್ಥಾನದಲ್ಲಿ ಅವರು ಮುಂದುವರಿದಿದ್ದಾರೆ. ಮೋದಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಈವರೆಗೆ ಕಾಂಗ್ರೆಸ್ ಬಹುತೇಕ ವಿಫಲವಾಗಿದೆ. ಬಿಎಸ್​ಪಿ ಹಾಗೂ ಎಸ್​ಪಿ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಕಾಂಗ್ರೆಸ್​ನ್ನು ದೂರ ಇಟ್ಟಿವೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಪ್ರತ್ಯೇಕ ಬಣ ರಚಿಸಿ ತೃತೀಯ ರಂಗಕ್ಕೆ ಯತ್ನಿಸುತ್ತಿದ್ದಾರೆ. ಇದೇ ವೇಳೆ ಸೋನಿಯಾ ಗಾಂಧಿ ಮೈತ್ರಿ ಮಾತುಕತೆಗೆ ಇಳಿದಿರುವುದು ಕುತೂಹಲ ಮೂಡಿಸಿದೆ.

ಕೈ ತಂತ್ರಗಾರಿಕೆ ಏನು?

ತಟಸ್ಥವಾಗಿರುವ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ 20, ಟಿಆರ್​ಎಸ್ 11, ವೈಎಸ್​ಆರ್​ಸಿಪಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಇವುಗಳ ಒಟ್ಟೂ ಬಲ 39. ಈ ಪಕ್ಷಗಳನ್ನು ಮೈತ್ರಿಗೆ ಸೇರಿಸಿಕೊಂಡು ಬಲ ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್ ಯೋಜನೆಯಾಗಿದೆ.

ಕಾಂಗ್ರೆಸ್ ಪರ ನಿಂತ ನಾಯ್ಡು

ರಾಹುಲ್ ಗಾಂಧಿ ಉತ್ತಮ ನಾಯಕ ಎಂದಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, 1996ರ ರೀತಿಯಲ್ಲಿ ಕಾಂಗ್ರೆಸ್ ಹೊರತಾದ ಮೈತ್ರಿ ಪಕ್ಷ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಬಾರದು. ಯಾವುದೇ ಮೈತ್ರಿಕೂಟ ಕಾಂಗ್ರೆಸ್​ಗೆ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮೈತ್ರಿಕೂಟದಲ್ಲಿನ ಪಕ್ಷಗಳು ಗೆದ್ದ ಕ್ಷೇತ್ರದ ಸಂಖ್ಯೆ ಆಧಾರದ ಮೇಲೆ ಸ್ಥಾನಮಾನ ನಿರ್ಧಾರವಾಗಬೇಕು. ಮೈತ್ರಿಕೂಟ ರಚನೆ ವೇಳೆ ಹೆಚ್ಚಿನ ಷರತ್ತುಗಳನ್ನು ವಿಧಿಸಿದರೆ ಒಗ್ಗಟ್ಟು ಮೂಡಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಟ್ನಾಯಕ್ ಜತೆ ಕಮಲ್​ನಾಥ ಮಾತುಕತೆ

ಒಡಿಶಾ ಸಿಎಂ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಜತೆ ಮಧ್ಯಪ್ರದೇಶ ಸಿಎಂ ಕಮಲ್​ನಾಥ ಮಾತುಕತೆ ನಡೆಸುತ್ತಿದ್ದಾರೆ. ಮೇ 23ರ ಸಭೆಗೆ ಅವರನ್ನು ಕರೆತರುವ ಜವಾಬ್ದಾರಿಯನ್ನು ಕಮಲ್​ನಾಥಗೆ ನೀಡಲಾಗಿದೆ. ಒಡಿಶಾಗೆ ಚಂಡಮಾರುತ ಅಪ್ಪಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡಿದ್ದರು. ಪಟ್ನಾಯಕ್ ಸರ್ಕಾರ ಕೈಗೊಂಡಿದ್ದ ಮುಂಜಾಗ್ರತಾ ಕ್ರಮವನ್ನು ಮೋದಿ ಶ್ಲಾಘಿಸಿ, ಸಾವಿರ ಕೋಟಿ ರೂ. ಪರಿಹಾರವನ್ನು ಸ್ಥಳದಲ್ಲೇ ಘೋಷಣೆ ಮಾಡಿದ್ದರು. ಇದು ಅವರಿಬ್ಬರ ನಡುವಿನ ರಾಜಕೀಯ ಸ್ನೇಹ ಕುರಿತ ಚರ್ಚೆಗೆ ಕಾರಣವಾಗಿತ್ತು.

Leave a Reply

Your email address will not be published. Required fields are marked *