ರಾಯ್ಬರೇಲಿಯಿಂದ ಸೋನಿಯಾ?

ದೆಹಲಿ: ರಾಯ್ಬರೇಲಿಯಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (ಗಾಂಧಿ) ಸ್ಪರ್ಧಿಸುತ್ತಾರೆ ಎಂಬ ಚರ್ಚೆ ರಾಜಕೀಯ ಅಂಗಳದಲ್ಲಿ ತೀವ್ರವಾಗಿತ್ತು. ಆದರೆ, ಕಾಂಗ್ರೆಸ್​ನ ನಿಕಟಪೂರ್ವ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ರಾಯ್ಬರೇಲಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಅನಾರೋಗ್ಯದ ಕಾರಣದಿಂದ ಸೋನಿಯಾ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಊಹಾಪೋಹಗಳು ಎದ್ದಿದ್ದವು. ಇತ್ತೀಚಿನ ಪಂಚರಾಜ್ಯ ಚುನಾವಣೆ ಸಂದರ್ಭದಲ್ಲೂ ತೆಲಂಗಾಣದಲ್ಲಿ ಮಾತ್ರ ಒಂದು ರ‍್ಯಾಲಿ ನಡೆಸಿದ್ದರು ಸೋನಿಯಾ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಒಂದೂ ರ‍್ಯಾಲಿ ನಡೆಸಿರಲಿಲ್ಲ. ಆಗಿನಿಂದಲೇ, ಸೋನಿಯಾ ಈ ಬಾರಿ ಲೋಕಸಭೆ ಚುನಾವಣೆ ಸ್ಪರ್ಧಿಸುವುದಿಲ್ಲ, ರಾಯ್ಬರೇಲಿಯಿಂದ ಪ್ರಿಯಾಂಕಾ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು.

ಪೂರ್ವ ಉತ್ತರಪ್ರದೇಶದ ಉಸ್ತುವಾರಿ ಹೊತ್ತು ಈಗಾಗಲೇ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಪ್ರಿಯಾಂಕಾ ಮೂರು ದಿನಗಳ ಲಖನೌ ಪ್ರವಾಸದ ಸಂದರ್ಭದಲ್ಲಿ ಪ್ರಯಾಗ್​ರಾಜ್, ಫುಲ್ಪುರ್ ಮತ್ತು ರಾಯ್ಬರೇಲಿಗೆ ಭೇಟಿ ನೀಡಿದರು. ಈ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರಿಯಾಂಕಾರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಆಗ್ರಹಿಸಿದರೂ, ರಾಯ್ಬರೇಲಿ ಜನತೆಯ ಒತ್ತಡ ತೀವ್ರವಾಗಿತ್ತು. ಹಿಂದಿನಿಂದಲೂ ಸೋನಿಯಾಗಾಗಿ ಪ್ರಿಯಾಂಕಾ ರಾಯ್ಬರೇಲಿಯಲ್ಲಿ ಪ್ರಚಾರ ನಡೆಸುತ್ತ ಬಂದಿರುವುದರಿಂದ, ಆ ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿದ್ದಾರೆ. ಹಾಗಾಗಿ, ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಪತ್ರಕರ್ತರು ಪ್ರಿಯಾಂಕಾರನ್ನೇ ಪ್ರಶ್ನಿಸಿದಾಗ, ‘ನಾನು ಚುನಾವಣೆಗೆ ಸ್ಪರ್ಧಿಸಿದರೆ ಇತರೆ ಕ್ಷೇತ್ರಗಳ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ’ ಎಂದು ಅವರು ಹೇಳಿದ್ದರು.

ಪ್ರಸಕ್ತ ಪಕ್ಷದ ಮೂಲಗಳು ಹೇಳುವಂತೆ, ಸೋನಿಯಾ ಅವರೇ ರಾಯ್ಬರೇಲಿಯಿಂದ ಸ್ಪರ್ಧಿಸಲಿದ್ದಾರೆ. 2004ರಿಂದ ಸೋನಿಯಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ, ಈ ಬಾರಿ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳು ಈ ಕ್ಷೇತ್ರದಿಂದ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ.