ಬೆಳಗಾವಿ: ಇಟಲಿ ದೇಶದಿಂದ ಭಾರತಕ್ಕೆ ಬಂದಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಪೌರತ್ವ ನೀಡಿದ ದೇಶ ನಮ್ಮದು. ಇದೀಗ ವಿದೇಶಿಗಳಲ್ಲಿನ ಹಿಂದು ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ವಿರೋಧಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ ಠಾಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಸರ್ದಾರ್ ಮೈದಾನದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಜಿಲ್ಲಾ ಘಟಕ ಶನಿವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿ, ಇಟಲಿ ದೇಶದಿಂದ ಬಂದಿರುವ ಸೋನಿಯಾ ಗಾಂಧಿಗೆ ಪೌರತ್ವ ನೀಡಿದಲ್ಲದೆ ರಾಜಕೀಯ ಉನ್ನತ ಸ್ಥಾನ ಕಲ್ಪಿಸಿದ್ದೇವೆ. ಇದೀಗ ನಮ್ಮವರಿಗೆ ಪೌರತ್ವ ನೀಡಲು ಅವರು ವಿರೋಧ ಮಾಡುತ್ತಿದ್ದಾರೆ. ಇವರಿಗೆಲ್ಲ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು. ದೇಶದಲ್ಲಿ 60 ವರ್ಷ ಆಡಳಿತ ನಡಸಿರುವ ಕಾಂಗ್ರೆಸ್‌ಗೆ ಸಿಎಎ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ, ತ್ರಿವಳಿ ತಲಾಕ್, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ರಾಮಮಂದಿರ ನಿರ್ಮಾಣ ವಿಚಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಎಎ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಅಭಿನಂದನಾರ್ಹರು: ಜಗತ್ತಿನಲ್ಲಿ ಮುಸ್ಲಿಂ ರಾಷ್ಟ್ರಗಳು ಎಂದು ಘೋಷಣೆ ಮಾಡಿಕೊಂಡಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅ್ಘಾನಿಸ್ತಾನ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದುಗಳಿಗೆ ಬದುಕಲು ಅವಕಾಶ ನೀಡುತ್ತಿಲ್ಲ. ದೌರ್ಜನ್ಯ, ಮಹಿಳೆಯರ ಬಲಾತ್ಕಾರ, ಒತ್ತಾಯ ಮತಾಂತರ ನಡೆಸುತ್ತಿದ್ದಾರೆ. ಪರಿಣಾಮ ಶೇ.20ರಷ್ಟಿದ್ದ ಅಲ್ಪಸಂಖ್ಯಾತರು ಇದೀಗ ಶೇ. 9ಕ್ಕೆ ಇಳಿಕೆಯಾಗಿದೆ. ಅವರಿಗೆಲ್ಲ ಭಾರತವಲ್ಲದೆ ಮತ್ಯಾರು ರಕ್ಷಣೆ ನೀಡಬೇಕು? ಅವರಿಗೆಲ್ಲ ಆಶ್ರಯ ಕಲ್ಪಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ನಾವೆಲ್ಲರೂ ಅಭಿನಂದನೆ ಸಲ್ಲಿಸಬೇಕು ಎಂದರು. ಭಾರತ ಜ್ಯಾತ್ಯತೀತ ರಾಷ್ಟ್ರವಾಗಿರುವುದರಿಂದಲೇ ದೇಶದಲ್ಲಿನ ಅಲ್ಪಸಂಖ್ಯಾತರು ಸಂತೋಷದಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಅ್ಘಾನಿಸ್ತಾನ ದೇಶದಲ್ಲಿನ ಅಲ್ಪಸಂಖ್ಯಾತರ ಪರಿಸ್ಥಿತಿ ತೀರ ಕಠಿಣವಾಗಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್‌ನ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ, ಅನಿಲ ಬೆನಕೆ, ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಘೂಳಪ್ಪ ಹೊಸಮನಿ, ಶಂಕರಗೌಡ ಪಾಟೀಲ, ಮುಕ್ತಾರ ಪಠಾಣ, ರಾಜೇಂದ್ರ ಹರಕುಣಿ, ಗೋವಿಂದ ಕೊಪ್ಪದ ಇದ್ದರು.
ಅಲ್ಪಸಂಖ್ಯಾತರಿಗಿಲ್ಲ ತೊಂದರೆ: ಕೋರೆ
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ನಮ್ಮ ಕುಟುಂಬ, ಮುಸ್ಲಿಂ ಸಮುದಾಯವದರಿಗೆ ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ಹೆದರಿಕೊಳ್ಳುವ ವಶ್ಯಕತೆ ಇಲ್ಲ. ಆದರೆ ಕಾಂಗ್ರೆಸ್, ಎಡಪಕ್ಷಗಳು ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಜನರಿಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಬಿಜೆಪಿ ಜನಜಾಗೃತಿ ಸಭೆ ನಡೆಸುತ್ತಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಕೋಟ್ಯಂತರ ನುಸುಳುಕೋರರು ದೇಶಕ್ಕೆ ಬಂದಿದ್ದಾರೆ. ಅವರೆಲ್ಲರನ್ನೂ ಅವರ ದೇಶಕ್ಕೆ ಕಳುಹಿಸುವಂತೆ ಕೋರ್ಟ್ ಹೇಳಿದೆ. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯದವರು ಹೆದರುವ ಅವಶ್ಯಕತೆ ಇಲ್ಲ. ಸಿಎಎ ಕುರಿತು ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ತುಕಡೆ ಗ್ಯಾಂಗ್‌ಗಳಿಗೆ ತಕ್ಕ ಪಾಠ
ದೇಶದಲ್ಲಿ ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಸೇರಿ ಇನ್ನಿತರ ಕಡೆ ಕಾಂಗ್ರೆಸ್, ಎಡಪಂಥೀಯ ಪಕ್ಷಗಳ ಬೆಂಬಲದೊಂದಿಗೆ ಸಿಎಎ, ಎನ್‌ಆರ್‌ಸಿ ಹೆಸರಿನಲ್ಲಿ ದೇಶ ವಿಭಜಿಸಲು ‘ತುಕಡೆ ಗ್ಯಾಂಗ್’ ಸಂಚು ರೂಪಿಸುತ್ತಿವೆ. 130 ಕೋಟಿ ಭಾರತೀಯರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶ ವಿಭಜಿಸುವ ತುಕಡೆ ಗ್ಯಾಂಗ್‌ಗಳ ಹೋರಾಟದಲ್ಲಿ ಸಿನಿಮಾ ನಟಿಯೊಬ್ಬರು ಭಾಗವಹಿಸುತ್ತಿದ್ದಾರೆ. ಇವರ ಸಿನಿಮಾ ಎಷ್ಟರ ಮಟ್ಟಿಗೆ ಓಡಲಿದೆ ಎಂಬುದನ್ನು ಜನರು ತೋರಿಸಿಕೊಡಲಿದ್ದಾರೆ ಎಂದು ಸಚಿವ ಠಾಕೂರ್ ವಾಗ್ದಾಳಿ ನಡೆಸಿದರು.