ಬನಾರಸ್​ನತ್ತ ಸೋನಲ್ ಪಯಣ

ಬೆಂಗಳೂರು: ‘ಬೆಲ್ ಬಾಟಂ’ ಚಿತ್ರದಿಂದ ಈ ವರ್ಷ ಆರಂಭದಲ್ಲೇ ದೊಡ್ಡ ಯಶಸ್ಸು ಪಡೆದ ನಿರ್ದೇಶಕ ಜಯತೀರ್ಥ ಹೊಸ ಸಿನಿಮಾದ ಕೆಲಸಗಳಿಗೆ ಕೆಲವು ದಿನಗಳ ಹಿಂದೆಯೇ ಚಾಲನೆ ನೀಡಿದ್ದರು. ಹೊಸ ನಟ ಜೈದ್ ಖಾನ್ ಅಭಿನಯಿಸಲಿರುವ ಈ ಚಿತ್ರಕ್ಕೆ ಈಗ ಶೀರ್ಷಿಕೆ ಅಂತಿಮವಾಗಿದ್ದು, ‘ಬನಾರಸ್’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಬಹುಪಾಲು ಕಥೆ ಕಾಶಿಯಲ್ಲಿ ನಡೆಯಲಿರುವ ಕಾರಣ ಈ ಟೈಟಲ್ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ಆಗಸ್ಟ್ ಕೊನೇ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ. ಮೊದಲ ಹಂತವಾಗಿ ಬನಾರಸ್​ನಲ್ಲೇ ಅಂದಾಜು 40 ದಿನ ಶೂಟಿಂಗ್ ನಡೆಯಲಿದೆ. ಆ ಬಳಿಕ ಒಂದು ಕಾರ್ಯಕ್ರಮ ಏರ್ಪಡಿಸಿ ಸಿನಿಮಾ ಘೋಷಣೆ ಮಾಡುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.

ಬಣ್ಣದ ಲೋಕದಲ್ಲಿ ಒಂದೊಂದೇ ಹಂತ ಮೇಲೇರುತ್ತಿರುವ ಸೋನಲ್ ಪ್ರತಿಭಾನ್ವಿತ ನಿರ್ದೇಶಕರ ಜತೆ ಕೆಲಸ ಮಾಡುವ ಆಫರ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವರು ನಟಿಸಿದ್ದ ‘ಪಂಚತಂತ್ರ’ಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಇದೇ ಮೊದಲ ಬಾರಿಗೆ ಜಯತೀರ್ಥ ನಿರ್ದೇಶನದಡಿ ಸೋನಲ್ ಅಭಿನಯಿಸಲಿದ್ದಾರೆ. ಹಲವು ದಿನಗಳಿಂದ ನಾಯಕಿ ಆಯ್ಕೆಯಲ್ಲಿ ತೊಡಗಿಕೊಂಡಿದ್ದ ನಿರ್ದೇಶಕರಿಗೆ ಇಷ್ಟವಾಗಿದ್ದೇ ಸೋನಲ್ ಮುಖದಲ್ಲಿನ ಮುಗ್ಧತೆ! ‘ಈ ಚಿತ್ರದ ನಾಯಕಿ ಪಾತ್ರ ತುಂಬ ಮುಗ್ಧವಾಗಿರುತ್ತದೆ. ಹಾಗಾಗಿ ಅವರನ್ನು ಆಯ್ಕೆ ಮಾಡಿಕೊಂಡೆವು. ಅಲ್ಲದೆ, ನಾಯಕ ನಟ ಜೈದ್​ಗೆ ಅವರು ಪಕ್ಕಾ ಜೋಡಿ ಆಗುತ್ತಾರೆ’ ಎಂದು ಮಾಹಿತಿ ನೀಡುವ ಜಯತೀರ್ಥ, ಈಗಾಗಲೇ ಇಬ್ಬರಿಗೂ ರಿಹರ್ಸಲ್ ಮಾಡಿಸಿದ್ದಾರೆ. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಜೈದ್ ಅಭಿನಯದ ಪಾಠ ಕಲಿತು ಬಂದಿದ್ದಾರೆ. ‘ಬನಾರಸ್’ ತಾಂತ್ರಿಕ ಬಳಗವೂ ಬಹುತೇಕ ಅಂತಿಮವಾಗಿದೆ. ಚಿತ್ರಕ್ಕೆ ಸಂಗೀತ ನೀಡುವ ಹೊಣೆಯನ್ನು ಅಜನೀಶ್ ಲೋಕನಾಥ್ ವಹಿಸಿಕೊಂಡಿದ್ದಾರೆ. ‘ಬೆಲ್ ಬಾಟಂ’ ಚಿತ್ರದಲ್ಲೂ ಅಜನೀಶ್-ಜಯತೀರ್ಥ ಕಾಂಬಿನೇಷನ್ ಮೋಡಿ ಮಾಡಿತ್ತು. ಹಾಡುಗಳ ಸಂಗೀತ ಸಂಯೋಜನೆ ಕೂಡ ಶುರುವಾಗಿದ್ದು, ಈಗಾಗಲೇ ಒಂದು ಗೀತೆಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಲಿದ್ದಾರೆ.

ನಮ್ಮ ನೆಲದ ಕಥೆ ಬನಾರಸ್​ನಲ್ಲಿ ಅರಳಲಿದೆ. ಅದರ ಬೇರುಗಳು ಕರುನಾಡಿನಲ್ಲಿರಲಿವೆ. ಹಾಗಾಗಿ ‘ಬನಾರಸ್’ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಚಿತ್ರದಲ್ಲಿ ಒಂದು ಪರಿಶುದ್ಧ ಪ್ರೇಮಕಥೆ ಹೇಳಲಿದ್ದೇವೆ.

| ಜಯತೀರ್ಥ ನಿರ್ದೇಶಕ

Leave a Reply

Your email address will not be published. Required fields are marked *