33 ವರ್ಷ ಬಳಿಕ ಮನೆಗೆ ಬಂದ ಹಿರಿಮಗ

<ಮಾನಸಿಕ ಖಿನ್ನತೆಯಿಂದ ಊರುಬಿಟ್ಟದ್ದ ರಾಮಖಾರ್ವಿ>

ಗಂಗೊಳ್ಳಿ: ಮನೆ ಬಿಟ್ಟು ಹೋಗಿದ್ದ ಯುವಕನೊಬ್ಬ ಬರೋಬ್ಬರಿ 33 ವರ್ಷಗಳ ಬಳಿಕ ತನ್ನ ಮನೆಗೆ ವಾಪಸಾಗಿದ್ದಾನೆ.

ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಗೋಧಿಹಿತ್ಲು ನಿವಾಸಿ ದಿ.ಗೋವಿಂದ ಖಾರ್ವಿ ಮತ್ತು ಕಮಲಾ ಖಾರ್ವಿ ದಂಪತಿ ಹಿರಿಯ ಪುತ್ರ ರಾಮ ಖಾರ್ವಿ(50) ಬುಧವಾರ ತನ್ನ ಮನೆಗೆ ಮರಳಿದ್ದಾರೆ.

ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆ ಹೊತ್ತಿಗೆ ತನ್ನ ಮನೆಯನ್ನು ಹುಡುಕಿಕೊಂಡು ಮ್ಯಾಂಗನೀಸ್ ರಸ್ತೆಯಲ್ಲಿ ಅಲೆದಾಡುತ್ತಿದ್ದ ರಾಮ ಖಾರ್ವಿ, ಅದೇ ಪ್ರದೇಶದ ಪ್ರಕಾಶ ಖಾರ್ವಿ ಎಂಬುವರಲ್ಲಿ ತನ್ನದೇ ಮನೆಯ ವಿಳಾಸ ತೋರಿಸಿ ದಾರಿ ಕೇಳಿದ್ದಾನೆ. ಪ್ರಕಾಶ ಖಾರ್ವಿ ಈತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದಾಗ ಸುಮಾರು 33 ವರ್ಷಗಳ ಹಿಂದೆ ಮನೆಬಿಟ್ಟು ಹೋದ ರಾಮ ಖಾರ್ವಿಯೇ ಈತ ಎಂಬುದು ಮನದಟ್ಟಾಗಿದೆ. ಸಣ್ಣ ಪ್ರಾಯದಲ್ಲಿ ಆಗಿದ್ದ ಗಾಯದ ಗುರುತು ಹಿಡಿದ ಕುಟುಂಬ ಸದಸ್ಯರು ಈತನನ್ನು ರಾಮ ಖಾರ್ವಿ ಎಂದು ಒಪ್ಪಿಕೊಂಡು ಸಂತೋಷದಿಂದ ಮನೆಗೆ ಸ್ವಾಗತಿಸಿಕೊಂಡರು.

ಘಟನೆ ಹಿನ್ನೆಲೆ: ಗೋಧಿಹಿತ್ಲು ನಿವಾಸಿ ದಿ.ಗೋವಿಂದ ಖಾರ್ವಿ ಮತ್ತು ಕಮಲಾ ಖಾರ್ವಿ ದಂಪತಿಯ ಏಳು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರ ಪೈಕಿ ಹಿರಿಯವನಾದ ರಾಮ ಖಾರ್ವಿ ಮೀನುಗಾರಿಕಾ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಚಿಕ್ಕ ಪ್ರಾಯದಲ್ಲೇ ಬೋಟನ್ನು ದಡಕ್ಕೆ ಎಳೆದು ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರೆ ತಂದೆ ಮೀನುಗಾರಿಕೆ ಹೋಗುತ್ತಿದ್ದರು. ಈತ ತನ್ನ ಪಾಡಿಗೆ ಈ ಕೆಲಸ ಮಾಡಿಕೊಂಡಿದ್ದ. ಇದೇ ಸಂದರ್ಭ ಬೋಟ್ ಎಳೆಯುವ ರೋಪು ಈತನ ಕಾಲಿಗೆ ತಗುಲಿ ಗಂಭೀರ ಗಾಯಗೊಂಡಿದ್ದನು. ಬಳಿಕ ಸ್ಥಳೀಯ ವೈದ್ಯರ ಹಾಗೂ ಕುಂದಾಪುರದ ವೈದ್ಯರ ಪ್ರಯತ್ನದಿಂದ ಗುಣಮುಖನಾಗಿದ್ದ. ಈ ಹಿಂದೆ ಎರಡು ಬಾರಿ ಊರು ಬಿಟ್ಟು ಹೋಗಲು ಪ್ರಯತ್ನ ನಡೆಸಿದ್ದ ಆತ ಒಂದು ಬಾರಿ ಹುಬ್ಬಳ್ಳಿ, ಇನ್ನೊಂದು ಬಾರಿ ಹೊನ್ನಾವರದಲ್ಲಿ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದ,

ಕಾಲಿನ ಗಾಯದ ಸಮಸ್ಯೆಯಿಂದ ಮಾನಸಿಕವಾಗಿ ಬಳಲುತ್ತಿದ್ದ ರಾಮ ಖಾರ್ವಿ 1986ರ ಮೇಯಲ್ಲಿ ಮನೆ ಬಿಟ್ಟು ಹೋಗಿದ್ದನು. ಬ್ಯಾಂಕಿನಲ್ಲಿರುವ 600 ರೂ. ಪಡೆದುಕೊಂಡು ಬೆಂಗಳೂರು ಸೇರಿಕೊಂಡಿದ್ದ ಆತ ಬಳಿಕ ಒರಿಸ್ಸಾದ ಭುವನೇಶ್ವರ ಹಾಗೂ ಹೈದರಾಬಾದ್‌ನ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ.

ಧರ್ಮಸ್ಥಳಕ್ಕೆ ಬಂದಿದ್ದ: ಈ ನಡುವೆ ಎರಡು ಬಾರಿ ಗಂಗೊಳ್ಳಿ ಮಾರ್ಗವಾಗಿ ರಾಮಖಾರ್ವಿ ಧರ್ಮಸ್ಥಳಕ್ಕೆ ತೆರಳಿದ್ದಾನೆ. ಆದರೆ ಮನೆಗೆ ಬರುವ ಮನಸ್ಸು ಮಾತ್ರ ಮಾಡಿರಲಿಲ್ಲ. ಆದರೆ ಈ ಬಾರಿ ಏನೋ ಮನಸ್ಸಾಗಿ ಮನೆಗೆ ಬರಬೇಕು, ತಾಯಿ,ಕುಟುಂಬಸ್ಥರನ್ನು ನೋಡಬೇಕೆಂದು ಒರಿಸ್ಸಾದಿಂದ ನೇರವಾಗಿ ಗಂಗೊಳ್ಳಿಗೆ ಹೊರಟು ಬಂದಿದ್ದಾನೆ. ಬುಧವಾರ ಮಧ್ಯಾಹ್ನ ಗಂಗೊಳ್ಳಿಯಲ್ಲಿ ಒಂದು ಗಂಟೆ ಉರಿ ಬಿಸಿಲಿನಲ್ಲಿ ಮನೆ ಹುಡುಕಾಡಿದ್ದ ರಾಮ ಖಾರ್ವಿ, ಮನೆ ವಿಳಾಸ ದೊರೆಯದಿದ್ದರೆ ಮರಳಿ ಒರಿಸ್ಸಾಗೆ ಹೋಗಲು ನಿರ್ಧರಿಸಿದ್ದ.

ವಿಳಾಸ ನೀಡುತ್ತಿರಲಿಲ್ಲ:
ಊರು ಬಿಟ್ಟ 2-3 ವರ್ಷ ಮನೆಯವರಿಗೆ ಪತ್ರ ಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದ ಆತ, ತನ್ನ ವಿಳಾಸವನ್ನು ಮಾತ್ರ ನೀಡುತ್ತಿರಲಿಲ್ಲ. ಹೀಗಾಗಿ ಮನೆಯವರಿಗೆ ಈತನನ್ನು ಹುಡುಕಲು ಕಷ್ಟವಾಯಿತು. ಸಿಕ್ಕ ಸಿಕ್ಕ ದೇವರಲ್ಲಿ ಹರಕೆ ಹೊತ್ತುಕೊಂಡ ಈತನ ತಾಯಿ ಮಗನ ಬರುವಿಕೆಗೆ ದಾರಿ ಕಾಯುತ್ತಿದ್ದರು. ಕುಟುಂಬಸ್ಥರು ಕೂಡ ಇಂದಲ್ಲ ನಾಳೆ ರಾಮ ಮರಳಿ ಮನೆಗೆ ಬರುವ ವಿಶ್ವಾಸ ಹೊಂದಿದ್ದರು.

ತಾಯಿ, ಮನೆಯವರು ಹಾಗೂ ಕುಟುಂಬಸ್ಥರನ್ನು ನೋಡಿ ಬಹಳ ಸಂತೋಷವಾಗುತ್ತಿದೆ. ಮುಂದೆ ಗಂಗೊಳ್ಳಿಯಲ್ಲಿಯೇ ಉಳಿಯಬೇಕೆಂಬ ಆಸೆ ಇದೆ. ಬಾಲ್ಯದಲ್ಲಿ ಮನಸ್ಸಿಗೆ ಏನೋ ತೋಚಿ ಮನೆ ಬಿಟ್ಟು ಹೋಗಿದ್ದೆ. ಆದರೆ ಈಗ ಮತ್ತೆ ಮನೆ ಸೇರುವಂತಾಗಿದ್ದು ನನ್ನ ಪುಣ್ಯ
ರಾಮ ಖಾರ್ವಿ