ವಿದೇಶಿ ಮಹಿಳೆಗೆ ಹುಟ್ಟಿದವ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಗಾ ವಿರುದ್ಧ ಬಿಜೆಪಿ ನಾಯಕ ಕಿಡಿ

ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಸೋಲು ಕಂಡ ನಂತರ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ನಾಯಕ ಕೈಲಾಶ್​ ವಿಜಯ್​ವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ವಿದೇಶಿ ಮಹಿಳೆಗೆ ಹುಟ್ಟಿದ ಮಗು ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ. ದೇಶದ ಬಗ್ಗೆ ಹೃದಯಪೂರ್ವ ಕಾಳಜಿ ಹೊಂದಲು ಸಾದ್ಯವಿಲ್ಲ” ಎಂದು ಟ್ವೀಟ್​ ಮಾಡಿದ್ದಾರೆ.

“ರಾಹುಲ್​ ಗಾಂಧಿ ತಾಯಿ ಸೋನಿಯಾ ಗಾಂಧಿ ಮೂಲತಃ ಇಟಲಿಯವರು. ಆದರೆ ಇಷ್ಟು ವರ್ಷ ಭಾರತವೇ ತನ್ನ ದೇಶ ಎಂದು ಬಿಂಬಿಸಿಕೊಂಡಿದ್ದಾರೆ” ಎಂದು ಟ್ವೀಟ್​ ಮಾಡಿದ್ದರು. ಆದರೆ ಟ್ವೀಟ್​ಗೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಕೈಲಾಶ್ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

ಕೈಲಾಶ್​ ಅವರ ವಿವಾದಾತ್ಮಕ ಟ್ವೀಟ್​ಗೆ ಕಾಂಗ್ರೆಸ್​ ವಕ್ತಾರರಾದ ಪ್ರಿಯಾಂಕ ಚತುರ್ವೇದಿ , “ಮಧ್ಯಪ್ರದೇಶ ಚುನಾವಣೆ ಸೋಲಿನಿಂದಾಗಿರುವ ಆಘಾತದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅವರಿಗೆ ಮಾನಸಿಕ ಚಿಕಿತ್ಸೆ ಅವಶ್ಯವಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಕೈಲಾಶ್​ ಅವರು ಈ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. 2013ರಲ್ಲಿ ಅತ್ಯಾಚಾರದ ಕುರಿತು “ಯಾವ ಮಹಿಳೆ ನಿರ್ದಿಷ್ಟ ಪರಿಧಿಯನ್ನು ದಾಟುತ್ತಾಳೋ ಆಗ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ” ಎಂದಿದ್ದರು. (ದಿಗ್ವಿಜಯ ನ್ಯೂಸ್)