ಧಾರವಾಡ: ಪರೀಕ್ಷೆ ಹತ್ತಿರ ಬಂತು, ಚೆನ್ನಾಗಿ ಓದು ಎಂದು ಬುದ್ಧಿವಾದ ಹೇಳಿದ ಮಾವನಿಗೆ ಅಳಿಯ ಚಾಕುವಿನಿಂದ ಇರಿದ ಘಟನೆ ಇಲ್ಲಿನ ಆಂಜನೇಯನಗರದಲ್ಲಿ ಮಂಗಳವಾರ ನಡೆದಿದೆ.
ಆಂಜನೇಯನಗರದ ಅಶೋಕ ಬಂಡಿವಡ್ಡರ (35) ಗಾಯಗೊಂಡ ವ್ಯಕ್ತಿ.
ಈತ ಹತ್ತನೇ ತರಗತಿ ಓದುತ್ತಿರುವ ತನ್ನ ಅಳಿಯನಿಗೆ ಓದುವಂತೆ ಬುದ್ಧಿ ಹೇಳಿದ್ದ. ಎದುರುತ್ತರ ಕೊಟ್ಟ ಅಳಿಯನಿಗೆ ಎರಡು ಏಟು ಕೊಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ಅಳಿಯ, ತನ್ನ ಮಾವ ಅಶೋಕ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಚಾಕುವಿನಿಂದ ಬೆನ್ನಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಶೋಕನನ್ನು ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.