ಹೆತ್ತ ತಾಯಿಯ ಕೈಯನ್ನೇ ಕತ್ತರಿಸಿದ ದುಷ್ಟ ಮಗ

ಹಾಸನ: ಕೈತುತ್ತು ನೀಡಿದ ಸಲಹಿದ ತಾಯಿಯ ಕೈಯನ್ನು ಪಾಪಿ ಮಗನೊಬ್ಬ ಕತ್ತರಿಸಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಯಡವರಹಳ್ಳಿ ಗ್ರಾಮದ ಲಲಿತಮ್ಮ (55) ಬಲಗೈ ಕಳೆದುಕೊಂಡು ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಹಿಳೆ. ಇವರ ಮಗ ದಿಲೀಪ್​ ಶುಕ್ರವಾರ ರಾತ್ರಿ ಕುಡಿದು ಬಂದು ತಾಯಿಯ ಬಳಿ ಜಗಳವಾಡಿದ್ದಾನೆ, ಈ ಸಂದರ್ಭದಲ್ಲಿ ಆತ ಮಾರಕಾಸ್ತ್ರಗಳಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ದಿಲೀಪ್​ಗೆ ಮದುವೆಯಾಗಿದ್ದು, ಪತ್ನಿ ಈತನನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ತನಗೆ ಎರಡನೇ ಮದುವೆ ಮಾಡುವಂತೆ ತಾಯಿಗೆ ಒತ್ತಾಯಿಸುತ್ತಿದ್ದ. ಆದರೆ ತಾಯಿ 2ನೇ ಮದುವೆಗೆ ಒಪ್ಪುತ್ತಿಲ್ಲ ಎಂಬ ಸಿಟ್ಟು ಇತ್ತಂತೆ. ಜತೆಗೆ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ದಿಲೀಪ್​ ಪದೇಪದೆ ತಾಯಿಯನ್ನು ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ಯಸಳೂರು ಪೊಲೀಸರು ದಿಲೀಪ್​ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.