ದಶಕ ಕಳೆದರೂ ಅಭಿವೃದ್ಧಿಯಾಗದ ರಸ್ತೆ

ಸೋಮವಾರಪೇಟೆ: ಸಮೀಪದ ಕೋಟೆಯೂರು, ಬಸವನಕೊಪ್ಪ ಗ್ರಾಮಸ್ಥರದ್ದು ಸರಿಸುಮಾರು ಎರಡು ದಶಕಗಳ ಹೋರಾಟ. ಆದರೂ ರಸ್ತೆ, ಸೇತುವೆ ಕಾಮಗಾರಿ ಮಾತ್ರ ನಡೆದಿಲ್ಲ.

ಕಳೆದ ಮಳೆಗಾಲದಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಇನ್ನಷ್ಟು ಗುಂಡಿಮಯವಾಗಿದೆ. ಕೋಟೆಯೂರು ಸೇತುವೆ ಅಪಾಯದ ಅಂಚಿಗೆ ತಲುಪಿದೆ. ಮಳೆಗಾಲದಲ್ಲಿ ಇಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಕಾಟಾಚಾರಕ್ಕೆ ಸೇತುವೆ ವೀಕ್ಷಿಸಿ ತೆರಳಿದ್ದರು. ಆದರೆ, ಇದುವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ.

ಈ ವರ್ಷವಾದರೂ ಮಳೆಹಾನಿ ಅನುದಾನದಲ್ಲಿ ರಸ್ತೆ ಸರಿಪಡಿಸಬಹುದು ಎಂದು ಗ್ರಾಮಸ್ಥರು ಭಾವಿಸಿದ್ದರು. ಆದರೆ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ರಸ್ತೆ, ಸೇತುವೆ ಕಾಮಗಾರಿ ಕನಸನ್ನು ಮರೆತಿದ್ದಾರೆ. ಚುನಾವಣೆ ಮುಗಿದ ತಕ್ಷಣ ಮತ್ತೊಮ್ಮೆ ಮಳೆಗಾಲ ಪ್ರಾರಂಭವಾಗಲಿದೆ.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಟಿಕಟ್ಟೆ, ಅಜ್ಜಳ್ಳಿ, ಕೋಟೆಯೂರು, ಬಸವನಕೊಪ್ಪ, ಶನಿವಾರಸಂತೆ ಸಂಪರ್ಕ ರಸ್ತೆಯನ್ನು ಹೆಚ್ಚಿನ ಜನರು ಉಪಯೋಗಿಸುತ್ತಾರೆ. ಅದರಲ್ಲೂ ವಾಹನ ಚಾಲಕರು ಪ್ರತಿನಿತ್ಯ ಸರ್ಕಸ್ ಮಾಡಬೇಕಾಗಿದೆ.

ಪ್ರತಿನಿತ್ಯ ನಾಲ್ಕು ಶಾಲಾ ವಾಹನಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು, ನೂರಾರು ವಾಹನಗಳು ಸಂಚರಿಸುತ್ತವೆ. ಸ್ವಲ್ಪ ಆಯತಪ್ಪಿದರೂ ಅನಾಹುತವಾಗುವ ಸಂಭವವಿದೆ. ಸುಮಾರು 50 ವರ್ಷಗಳಷ್ಟು ಹಳೆಯದಾದ ಬಸವನಕೊಪ್ಪ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಇದು ಶನಿವಾರಸಂತೆಗೆ ಸಂಪರ್ಕ ರಸ್ತೆಯಾಗಿರುವುದರಿಂದ ಫಸಲನ್ನು ಇದೇ ರಸ್ತೆಯಲ್ಲಿ ಸಾಗಿಸಬೇಕು. ಕೂಗೇಕೋಡಿ, ಸುಳಿಮಳ್ತೆ, ದೊಡ್ಡಮಳ್ತೆ, ಶುಂಠಿ, ಚನ್ನಾಪುರ, ಹಿರಿಕರ, ಗೌಡಳ್ಳಿ, ಕೂಗೂರು, ಚಿಕ್ಕಾರ, ಹಾರಳ್ಳಿ ಸುತ್ತಮುತ್ತಲ ಗ್ರಾಮಗಳ ರೈತರು ಕೃಷಿ ಫಸಲನ್ನು ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಾಹನ ಸಾಗಿಸುತ್ತಾರೆ. ಚಾಲಕರು ಆಯತಪ್ಪಿದರೆ ಅನಾಹುತ ಸಂಭವಿಸಬಹುದು.

ಕೋಟೆಯೂರು ಹಾಗೂ ಬಸವನಕೊಪ್ಪ ಸಮೀಪ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗದ ಹಿನ್ನೆಲೆ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಳ್ಳುತ್ತಾರೆ. ಇನ್ನು ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ, ಗುಂಡಿಗಳಿಗೆ ಮಣ್ಣುಹಾಕಿ ಮುಚ್ಚಿ ವಾಹನ ಸಂಚಾರಕ್ಕೆ ಸರಿಪಡಿಸಿಕೊಳ್ಳುತ್ತಾರೆ. ಆದರೆ, ಮಳೆ ಬಿದ್ದಂತೆ ನೀರಿನಲ್ಲಿ ಮಣ್ಣು ಕೊಚ್ಚಿ ಹೋಗುತ್ತದೆ. ಜನಪ್ರತಿನಿಧಿಗಳು ಮೌನಕ್ಕೆ ಶರಣಾಗದೆ, ಕೂಡಲೇ ಈ ರಸ್ತೆಗೆ ಅನುದಾನ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅನುದಾನ ನೀಡುತ್ತಿಲ್ಲ: ಕೋಟೆಯೂರು, ಬಸವನಕೊಪ್ಪ ಗ್ರಾಮದಲ್ಲಿ ರಸ್ತೆ ತುಂಬ ಹಾಳಾಗಿದೆ. ಎಷ್ಟೇ ಮನವಿ ಮಾಡಿದರೂ ರಸ್ತೆ, ಸೇತುವೆ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ. ಗ್ರಾಮೀಣ ಭಾಗದ ರಸ್ತೆ, ಸೇತುವೆಗಳಿಗೆ ಅನುದಾನ ಕೊಡುತ್ತಿಲ್ಲವೇಕೆ? ಎಂಬ ಪ್ರಶ್ನೆಗೆ ಯಾರು ಉತ್ತರ ನೀಡುತ್ತಿಲ್ಲ ಎಂದು ಬಸವನಕೊಪ್ಪದ ಬಿ.ಟಿ. ಮೊಗಪ್ಪ ಹೇಳಿದರು.