ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಸಮುದ್ರ ನೀರೆಲ್ಲ ಬಂಗಾರ ಬಣ್ಣಕ್ಕೆ ತಿರುಗಿಸುವ ಸೂರ್ಯಾಸ್ತ.. ಪಶ್ಚಿಮ ಘಟ್ಟದ ಹಸಿರು ವನಸಿರಿ ನಡುವೆ ಏರಿ ಬರುವ ಚಂದ್ರೋದಯ. ಕ್ಷಿತಿಜ ನೇಸರಧಾಮದಲ್ಲಿ ನಿಂತು ಕಣ್ಣು ಹಾಯಿಸಿದರೆ ಕಾಣುವ ಸಂಗಮ ವಿಹಂಗಮ ನೋಟ..!
ಇಷ್ಟೊಂದು ವೈವಿಧ್ಯತೆ ಪ್ರಕೃತಿ ಕೊಡುಗೆಯಾಗಿ ನೀಡಿದರೂ ಹತ್ತರಲ್ಲಿ ಹನ್ನೊಂದರಂತಿದ್ದ ಸೋಮೇಶ್ವರ ಬೀಚ್ ರೂಪಾಂತರಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎರಡು ವರ್ಷದಲ್ಲಿ ಸೋಮೇಶ್ವರ ಬೀಚ್ ಚಿತ್ರಣವೇ ಬದಲಾಗಲಿದೆ.
ಅಪೂರ್ವವೆಂಬಂತೆ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಬದ್ಧತೆ ಬೀಚ್ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಪ್ರವಾಸೋದ್ಯಮ ಇಲಾಖೆ ಬೀಚ್ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಪಡಿಸಿದ್ದು, ಸಿಆರ್ಜಡ್ ಒಪ್ಪಿಗೆಗೆ ಹೋಗಿದೆ. ಸಿಆರ್ಜಡ್ ಕ್ಲಿಯರೆನ್ಸ್ ಅನಂತರ ಹಂತಹಂತವಾಗಿ ಅಭಿವೃದ್ಧಿ ಕೆಲಸ ನಡೆಯಲಿದೆ. ಬೈಂದೂರು ಸೋಮೇಶ್ವರ ಕಡಲ ತೀರಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ ಪರಿಶೀಲಿಸಿರುವುದು ಬೀಚ್ ಅಭಿವೃದ್ಧಿ ಆಗುತ್ತದೆ ಎಂಬ ಭರವಸೆ ಮೂಡಿಸಿದೆ.
ಐದು ಕೋಟಿ ರೂ. ಮಂಜೂರು: ಬೈಂದೂರು ತಾಲೂಕು ಪಡುವರಿ ಗ್ರಾಮ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಹಂತದ ಐದು ಕೋಟಿ ರೂ. ಅನುದಾನ ಮಂಜೂರಾಗಿದೆ. ಸುಮನಾವತಿ ನದಿಗೆ ರೋಪ್ ಬ್ರಿಜ್ ಶೌಚಗೃಹ, ಬೀಚ್ ವಾಕ್, ಪಾರ್ಕಿಂಗ್, ಸಂಪರ್ಕ ರಸ್ತೆ, ವಾಣಿಜ್ಯ ಸಂಕೀರ್ಣ ಕಾಮಗಾರಿ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಸೋಮೇಶ್ವರ ಕಡಲ ಕಿನಾರೆ ಬಗ್ಗೆ ಮಾಹಿತಿ ನೀಡಲು ಶಿರೂರಿನಲ್ಲಿ ದೊಡ್ಡ ಸ್ವಾಗತ ಕಮಾನು ನಿರ್ಮಿಸಲಾಗುತ್ತದೆ. ಕಾಮಗಾರಿ ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಎರಡನೇ ಹಂತದ ಕಾಮಗಾರಿಗೆ 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ಸೋಮೇಶ್ವರ ಬೀಚ್ ಬದಲಾಗುವ ಮೂಲಕ ಪ್ರವಾಸಿಗರ ಸೆಳೆಯುವ ಜತೆ ಸ್ಥಳೀಯರಿಗೆ ಉದ್ಯೋಗ ಭರವಸೆ ಕಲ್ಪಿಸುವ ದಿನ ದೂರವಿಲ್ಲ.
ಲ್ಯಾಂಡ್ ಆರ್ಮಿ ಕಾಮಗಾರಿಗೆ ಅಪಸ್ವರ: ಬೈಂದೂರು ಸೋಮೇಶ್ವರ ಬೀಚ್ ಅಭಿವೃದ್ಧಿ ಪರಿಸರದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದರೆ, ಕಾಮಗಾರಿ ಲ್ಯಾಂಡ್ ಆರ್ಮಿ ನಿರ್ವಹಿಸುತ್ತಿದೆ ಎನ್ನುವುದು ಅಸಮಾಧಾನ ತಂದಿದೆ. ಹಿಂದೆ ಕೂಡ ಲ್ಯಾಂಡ್ ಆರ್ಮಿ ನಿರ್ವಹಿಸಿದ ಕೆಲಸ ಅರ್ಧಂಬರ್ಧ ಮಾಡಿದೆ. ಮತ್ತೆ ಅವರಿಗೆ ಕೆಲಸ ಕೊಟ್ಟರೆ ಗುಣಮಟ್ಟದ ಕಾಮಗಾರಿ ಸಾಧ್ಯವಾಗದು. ಜಿಲ್ಲಾಡಳಿತ ಲ್ಯಾಂಡ್ ಆರ್ಮಿಗೆ ಕೆಲಸ ಕೊಡುವ ಬದಲು ವಿಶ್ವಾಸಾರ್ಹತೆಯುಳ್ಳ ಬೇರೆ ಯಾವುದಾದರೂ ಕಂಪನಿಗೆ ವಹಿಸುವುದು ಸೂಕ್ತ ಎಂಬುವು ಸ್ಥಳೀಯರ ಅಭಿಪ್ರಾಯ.
ಸೋಮೇಶ್ವರ ಬೀಚ್ ಒಂದು ಟೂರಿಸ್ಟ್ ಪ್ರದೇಶ ಆಗಬೇಕು ಎಂಬ ಕನಸು ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಸೋಮೇಶ್ವರ ಬೀಚ್ ಉತ್ಸವ ಎರಡು ವರ್ಷದಿಂದ ಮಾಡಿಕೊಂಡು ಪ್ರವಾಸೋದ್ಯಮ ಇಲಾಖೆ 20 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ಮಾಡಿಕೊಟ್ಟಿತ್ತು. ಬೀಚ್ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಂಸದ ರಾಘವೇಂದ್ರ ಹಾಗೂ ಶಾಸಕ ಸುಕುಮಾರ ಶೆಟ್ಟಿ ಬೀಚ್ ಸೊಬಗು ಕಂಡು ಖುಷಿಪಟ್ಟು ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದು, ಐದು ಕೋಟಿ ರೂ. ಅನುದಾನ ಮಂಜೂರಾಗಿದೆ. ಎರಡನೇ ಹಂತದಲ್ಲಿ 20 ಕೋಟಿ ಅನುದಾನದಲ್ಲಿ ಬೀಚ್ ಅಭಿವೃದ್ಧಿಗೆ ಯೋಜನೆ ರೂಪಿಸಲು ಸೂಚಿಸಿದ್ದಾರೆ. ವಿವೇಕಾನಂದ ಸ್ಟ್ಯಾಚ್ಯೂ, ಬೀಚ್ ವಾಕ್, ತಾರಾಪತಿ ಬೆಸೆವ ತೂಗು ಸೇತುವೆ ಸೋಮೇಶ್ವರ ಬೀಚ್ ಮತ್ತಷ್ಟು ವಿಸ್ತರಿಸಲಿದೆ.
ಸದಾಶಿವ ಪಡುವರಿ ಪಡುವರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ
ಬೈಂದೂರಿನ ಸುತ್ತಮುತ್ತ ಪ್ರವಾಸಿಗರ ಆಕರ್ಷಿಸುವ ಪ್ರಾಕೃತಿಕ ನೆಲೆಗಳು, ಧಾರ್ಮಿಕ ಕೇಂದ್ರಗಳು, ಕಡಲತೀರಗಳು ಇವೆ. ಪಡುವರಿ ಪ್ರಕೃತಿ ರಮ್ಯ ತಾಣವಾಗಿ ಹಾಗೂ ಅಪಾಯರಹಿತ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಬೆಸುಗೆ ಫೌಂಡೇಶನ್ ಸರ್ಕಾರಕ್ಕೆ ಕೆಲವು ಪ್ರಸ್ತಾವನೆ ಸಲ್ಲಿಸುತ್ತಿದ್ದು, ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಿರುವುದು ಆಶಾಭಾವನೆ ಮೂಡಿಸಿದೆ. ಸುಮನಾವತಿಗೆ ತೂಗುಸೇತುವೆ ಮಾಡುವುದರಿಂದ ಸೋಮೇಶ್ವರ ತಾರಾಪತಿ ಒಟ್ಟಾಗಲಿದ್ದು, ಬೀಚ್ ವ್ಯಾಪ್ತಿ ಹಿಗ್ಗಲಿದೆ. ತಾರಾಪತಿಯಲ್ಲಿ ಜಲಕ್ರೀಡೆಗೆ ವಿಪುಲ ಅವಕಾಶವಿದ್ದು, ಕ್ರೀಡಾಸಕ್ತರನ್ನು ಸೆಳೆಯಲಿದೆ. ಮುಂದಿನ ದಿನಗಳಲ್ಲಿ ಮುರುಡೇಶ್ವರ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ನಡೆಯುತ್ತಿದೆ.
ವೆಂಕಟೇಶ ಕಿಣಿ ಅಧ್ಯಕ್ಷ, ಬೆಸುಗೆ ಫೌಂಡೇಶನ್, ಬೈಂದೂರು.
ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ರೂಪುರೇಷೆ ಸಿದ್ಧ್ದಪಡಿಸಿದ್ದು, ಸಿಆರ್ಜಡ್ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಕೂಡಲೆ ಸೋಮೇಶ್ವರ ಅಭಿವೃದ್ಧಿ ಕೆಲಸ ಆರಂಭವಾಗುತ್ತದೆ. ಸೋಮೇಶ್ವರ ಬೀಚ್ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲು ಸೂಚಿಸಿದ್ದು, ಸಾಹಸ ಜಲಕ್ರೀಡೆಗೆ ಒತ್ತು ಕೊಡುವ ಉದ್ದೇಶ ಇದೆ.
ಚಂದ್ರಶೇಖರ್ ಸಹಾಯಕ ನಿರ್ದೇಶಕ, ವಾರ್ತಾ ಇಲಾಖೆ, ಉಡುಪಿ.