ಫಿಲ್ಮ್​ಇಂಡಸ್ಟ್ರಿಯಲ್ಲಿ ಕೆಲವರಿಗೆ ನನ್ನ ಅವನತಿ ಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಬಾಲಿವುಡ್​ ನಟಿ

ನವದೆಹಲಿ: ಫಿಲ್ಮ್​ ಇಂಡಸ್ಟ್ರಿಯಲ್ಲಿ ಕೆಲವು ಜನ ನನ್ನ ಅವನತಿಯನ್ನೇ ಕಾಯುತ್ತಿದ್ದಾರೆ ಎಂದು ನಟಿ ಕಂಗನಾ ರಣಾವತ್​ ಹೇಳಿದ್ದಾರೆ.

ಮಣಿಕರ್ಣಿಕಾ ಸಿನಿಮಾದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಮಿಂಚಿರುವ ಕಂಗನಾ ಸಿನಿಮಾ ಪ್ರಮೋಶನ್​ ಸಮಾರಂಭದಲ್ಲಿ ಸುದ್ದಿ ಸಂಸ್ಥೆ ಪಿಟಿಐ ಜತೆ ಮಾತನಾಡಿ, ಕೆಲವರು ನನ್ನ ಅವನತಿಯನ್ನೇ ಬಯಸುತ್ತಿದ್ದಾರೆ. ಈ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಿಷ್ಟು ಜನರಿಗೆ ಅವರನ್ನು ಅವರು ಉತ್ತಮರು ಎಂದು ಸಾಬೀತುಪಡಿಸಿಕೊಳ್ಳಬೇಕಾಗಿದೆ. ಹೀಗಾಗಿ ನನ್ನ ತುಳಿಯಲು ಯತ್ನಿಸುತ್ತಿದ್ದಾರೆ. ನನ್ನ ಸೋಲು ಅವರಿಗೆ ಬೇಕಾಗಿದೆ ಎಂದು ಹೇಳಿದ ಕಂಗನಾ, ನಾನೆಂದೂ ನನ್ನ ಸಹೋದ್ಯೋಗಿಗಳಿಗೆ ಕೆಟ್ಟದಾಗಲಿ ಎಂದು ಬಯಸಿಲ್ಲ ಎಂದರು.

ನನಗೆ ಕೆಟ್ಟದ್ದನ್ನು ಬಯಸುವವರ ಮನಸ್ಥಿತಿ ಅರ್ಥವಾಗುತ್ತದೆ. ಆದರೆ, ನಾನು ಅವರಂತೆ ಯೋಚಿಸುವುದಿಲ್ಲ. ನಾನು ತುಂಬ ಪಾಸಿಟಿವ್​ ಆಗಿ ಯೋಚಿಸುವವಳು. ನನಗೆ ಎರಡು ಮುಖಗಳಿಲ್ಲ. ಬೇರೆಯವರು ನನ್ನ ಬಗ್ಗೆ ಏನಾದರೂ ಅಂದುಕೊಳ್ಳಲಿ ನನಗೆ ಚಿಂತೆಯಿಲ್ಲ ಎಂದು ಹೇಳಿದರು.

ಇಲ್ಲಿ ಅಪಾರವಾದ ಲಿಂಗ ಭೇದವಿದೆ. ಒಬ್ಬ ಮಹಿಳೆ ಆ್ಯಕ್ಷನ್ ಸಿನಿಮಾದಲ್ಲಿ ನಟನೆ ಮಾಡಿದರೆ, ಅದನ್ನು ನಿರ್ದೇಶಿಸಿದರೆ ಅದನ್ನು ಕೆಂಗಣ್ಣಿನಿಂದ ನೋಡುವವರು ಹಲವರು ಇದ್ದಾರೆ. ಹಾಲಿವುಡ್​ ಕೂಡ ಇದಕ್ಕೆ ಹೊರತಾಗಿಲ್ಲ. ಏನು ಮಹಿಳಾ ನಿರ್ದೇಶಕಿ ಆ್ಯಕ್ಷನ್​ ಸಿನಿಮಾ ಮಾಡಿದ್ದಾರೆ ಎಂದು ವ್ಯಂಗ್ಯಭರಿತ ಉದ್ಗಾರ ತೆಗೆಯುತ್ತಾರೆ. ಸಿನಿಮಾ ಒಳ್ಳೆ ಯಶಸ್ಸು ಕಂಡರೆ ಎಲ್ಲರೂ ಹೊಗಳುತ್ತಾರೆ ಎಂದರು.

ಮಣಿಕರ್ಣಿಕಾ ಸಿನಿಮಾ ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡಿರುವ ಕಂಗನಾ, ನಾನು ಇದರ ಕ್ರೆಡಿಟ್​ನ್ನು ಕ್ರಿಶ್​ಗೆ ಸಲ್ಲಿಸುತ್ತೇನೆ. ಅವರಿಗೆ ಬೇರೊಂದು ಕೆಲಸದ ಕಮಿಟ್​ಮೆಂಟ್​ ಇರುವ ಕಾರಣ ನಾನೂ ನಿರ್ದೇಶನ ಮಾಡುವ ಸಂದರ್ಭ ಬಂತು. ಇದು ಆಕಸ್ಮಿಕ ಬದಲಾವಣೆ. ನಾನು ಇದಕ್ಕೆ ಸಿದ್ಧತೆ ನಡೆಸಿರಲಿಲ್ಲ. ನಾನು ನಿರ್ವಹಿಸುವ ಪಾತ್ರವನ್ನೂ ಮೊದಲು ರಿಹರ್ಸಲ್​ ಮಾಡಿರುತ್ತೇನೆ. ಆದರೆ, ನಿರ್ದೇಶನ ನನ್ನ ಪಾಲಿಗೆ ಸ್ವಲ್ಪ ಕಠಿಣ ಎಂದು ಹೇಳಿದರು.