ಪ್ರಧಾನಿ ಹೆಸರಲ್ಲೂ ಟೋಪಿ ಹಾಕ್ತಾರೆ ಹುಷಾರ್!

ಹಾಸನ: ಡೆಬಿಟ್ ಕಾರ್ಡ್ ನವೀಕರಣ, ಅಕೌಂಟ್ ರದ್ದಾಗುತ್ತದೆ ಎಂದು ಭಯ ಹುಟ್ಟಿಸಿ ಮುಗ್ಧರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಆನ್​ಲೈನ್ ವಂಚಕರೀಗ ಪ್ರಧಾನಿ ನರೇಂದ್ರ ಮೋದಿ ಹೆಸರು ಬಳಸಿ ಕೊಂಡು ವಸೂಲಿಗೆ ಇಳಿದಿದ್ದಾರೆ. ಪ್ರತಿ ಅನ್ನದಾತರ ಖಾತೆಗೆ ಕೇಂದ್ರ ಸರ್ಕಾರ ಮಾಸಿಕ 2 ಸಾವಿರ ರೂ. ಜಮೆ ಮಾಡಲಿದೆ ಎಂದು ನಂಬಿಸಿ ರೈತರ ಬ್ಯಾಂಕ್ ಖಾತೆಗಳ ವಿವರ ಪಡೆದು 1 ಲಕ್ಷ ರೂ.ಗೂ ಹೆಚ್ಚು ಹಣ ದೋಚಿರುವ ಹತ್ತಾರು ಪ್ರಕರಣಗಳು ಹೊಳೆನರಸೀಪುರ ತಾಲೂಕಿನ ಗವಿಸೋಮನಹಳ್ಳಿಯಲ್ಲಿ ಬೆಳಕಿಗೆ ಬಂದಿವೆ. ವಂಚನೆಗೊಳಗಾದವರ್ಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ.

ಕೇಂದ್ರದ ಪ್ರತಿನಿಧಿ ಸೋಗಲ್ಲಿ ಕರೆ

ಶುಕ್ರವಾರ ಕೃಷಿಕರೊಬ್ಬರ ಮೊಬೈಲ್​ಗೆ ಕರೆ ಮಾಡಿದ ವ್ಯಕ್ತಿ ತನ್ನನ್ನು ಕೇಂದ್ರ ಸರ್ಕಾರದ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿ ದ್ದಾನೆ. ಪ್ರಧಾನಿ ನರೇಂದ್ರ ಮೋದಿ ಪ್ರತಿ ರೈತರ ಖಾತೆಗೆ ಮಾಸಿಕ ತಲಾ 2 ಸಾವಿರ ರೂ. ಜಮಾ ಮಾಡುವ ಯೋಜನೆ ಜಾರಿಗೆ ತಂದಿದ್ದು, ಅದರಂತೆ ನಿಮ್ಮ ಖಾತೆಗೆ ಈ ತಿಂಗಳು 2 ಸಾವಿರ ರೂ. ಜಮಾ ಮಾಡಲು ಬ್ಯಾಂಕ್ ಖಾತೆ ಸಂಖ್ಯೆ, ಡೆಬಿಟ್ ಕಾರ್ಡ್ ಮಾಹಿತಿ, ಒಟಿಪಿ ನೀಡಬೇಕೆಂದು ಕೇಳಿದ್ದಾನೆ. ಆರಂಭದಲ್ಲಿ ಸಂಶಯಿಸಿದ ಕೃಷಿಕ, ತನ್ನ ಖಾತೆಯಲ್ಲಿ ಹಣವಿಲ್ಲವಾದ್ದರಿಂದ ಒಮ್ಮೆ ಪರೀಕ್ಷಿಸಿ ನೋಡೋಣ ಎಂದು ಕೇಳಿದ್ದ ಎಲ್ಲ ವಿವರಗಳನ್ನೂ ನೀಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಅವರ ಖಾತೆಗೆ 2 ಸಾವಿರ ರೂ. ಜಮೆ ಆಗಿದೆ. ಬಳಿಕ ಮತ್ತೆ ಕರೆ ಮಾಡಿದ ವ್ಯಕ್ತಿ ಹಣ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮೋದಿ ಅವರ ಈ ಯೋಜನೆ ಬಗ್ಗೆ ಊರಿನವರಿಗೆಲ್ಲ ತಿಳಿಸಿ ಎಂದು ಸಲಹೆ ನೀಡಿ ಕರೆ ಸ್ಥಗಿತಗೊಳಿಸಿದ್ದಾನೆ.

2 ಸಾವಿರ ರೂ.ಗೆ ಮುಗಿಬಿದ್ದರು

ಎರಡು ಸಾವಿರ ರೂ. ಸಿಕ್ಕಿದ್ದರಿಂದ ಖುಷಿಯಾದ ರೈತ ಈ ವಿಷಯವನ್ನು ತಮ್ಮ ಸಂಬಂಧಿಕರು, ನೆರೆಹೊರೆಯವರೊಂದಿಗೆ ಹಂಚಿಕೊಂಡಿದ್ದಾನೆ. ತಕ್ಷಣವೇ ಮೊಬೈಲ್ ಸಂಖ್ಯೆ ಪಡೆದು ಕರೆ ಮಾಡಿದ ನೆರೆಹೊರೆಯವರು ಖಾತೆ ಸಂಖ್ಯೆ, ಡೆಬಿಟ್ ಕಾರ್ಡ್ ಮಾಹಿತಿ ಜತೆಗೆ ಒಟಿಪಿ ಸಂಖ್ಯೆಯನ್ನೂ ಹಂಚಿಕೊಂಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ 12ಕ್ಕೂ ಹೆಚ್ಚು ಜನರ ಖಾತೆಗಳಲ್ಲಿದ್ದ 1 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತ ವಂಚಕನ ಪಾಲಾಗಿದೆ. ಮೋಸ ಹೋಗಿದ್ದು ಖಚಿತವಾಗುತ್ತಲೇ ಇನ್ನೂ ಕೆಲವು ಗ್ರಾಮಸ್ಥರು ಹೊಳೆನರಸೀಪುರದಲ್ಲಿನ ಬ್ಯಾಂಕ್ ಶಾಖೆಗೆ ತೆರಳಿ ಖಾತೆಯ ವ್ಯವಹಾರವನ್ನು ತಡೆ ಹಿಡಿಯುವಂತೆ ಕೋರಿದ್ದಾರೆ.