ಅಲೋಕ್‌ ವರ್ಮಾ ತೀರ್ಪು ಸ್ವಾಗತಾರ್ಹ, ರಫೇಲ್‌ನಿಂದ ಮೋದಿ ರಕ್ಷಣೆ ಅಸಾಧ್ಯ: ರಾಹುಲ್‌ ಗಾಂಧಿ

ನವದೆಹಲಿ: ಕಡ್ಡಾಯ ರಜೆಯನ್ನು ಹಿಂಪಡೆದು ಮತ್ತೆ ಸಿಬಿಐ ನಿರ್ದೇಶಕರಾಗಿ ಅಲೋಕ್‌ ವರ್ಮಾ ಮುಂದುವರಿಯುವಂತೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನ ಸ್ವಾಗತಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಇಂದು ಸ್ವಲ್ಪ ನ್ಯಾಯ ಒದಗಿಸಿದ್ದು, ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ರಫೇಲ್‌ ಯುದ್ಧ ವಿಮಾನ ಒಪ್ಪಂದ ಕುರಿತಂತೆ ವಿಚಾರಣೆ ನಡೆಸಲು ಮುಂದಾಗಿದ್ದರಿಂದಾಗಿ ಸಿಬಿಐ ಮುಖ್ಯಸ್ಥರನ್ನು ತಡರಾತ್ರಿ 1 ಗಂಟೆ ವೇಳೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಆದರೆ ಇಂದು ಅವರನ್ನು ಮತ್ತೆ ಸಿಬಿಐ ನಿರ್ದೇಶಕರಾಗಿ ಮುಂದುವರಿಯುವಂತೆ ಆದೇಶ ನೀಡಿದ್ದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ರಫೇಲ್‌ ಒಪ್ಪಂದದಿಂದ ನರೇಂದ್ರ ಮೋದಿಯವರನ್ನು ಯಾವುದೂ ರಕ್ಷಿಸಲಾರದು ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು. (ಏಜೆನ್ಸೀಸ್)