ತೋಟಗಳಾದ ಭತ್ತದ ಗದ್ದೆಗಳು

ಹಿರಿಕರ ರವಿ ಸೋಮವಾರಪೇಟೆ
ಭತ್ತದ ಕಣಜವೆಂದೇ ಕರೆಸಿಕೊಳ್ಳುತ್ತಿದ್ದ ತಾಲೂಕಿನಲ್ಲಿ ಪ್ರತಿ ವರ್ಷವೂ ಭತ್ತ ಗದ್ದೆಗಳು ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಮುಂಗಾರು ವಿಳಂಬ, ಅಕಾಲಿಕ ಮಳೆ, ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಕೊರತೆ, ರೋಗಬಾಧೆ ಹಾಗೂ ಫಸಲು ನಷ್ಟದ ಭೀತಿಯಿಂದ ಬಹತೇಕ ಭತ್ತ ಬೆಳೆಗಾರರು ಗದ್ದೆಗಳನ್ನು ಸಮತಟ್ಟು ಮಾಡಿ ಕಾಫಿ, ಬಾಳೆ ಕೃಷಿ ಮಾಡುತ್ತಿದ್ದಾರೆ.

ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ಭತ್ತದ ಕೃಷಿಗೆ ಬಹಳಷ್ಟು ಹಾನಿಯಾಗಿತ್ತು. ಧಾರಾಕಾರ ಮಳೆಗೆ ನಾಟಿ ಸಸಿ ಕೊಳೆತು ಹೋಗಿದ್ದವು. ಭತ್ತದ ಗದ್ದೆಗಳ ಮೇಲೆ ಹೂಳು ತುಂಬಿತ್ತು. ಬರೆ ಕುಸಿದು ಗದ್ದೆಗಳು ನಾಶವಾದವು. ಈ ವರ್ಷದ ಮುಂಗಾರು ಇನ್ನೂ ಪ್ರಾರಂಭವಾಗಿಲ್ಲ. ಸಸಿ ಮಡಿ ಮಾಡಲು ಬಹುತೇಕ ಕೃಷಿಕರಿಗೆ ಸಾಧ್ಯವಾಗಿಲ್ಲ. ಈ ವರ್ಷವೂ ಭತ್ತ ಕೃಷಿಗೆ ಕೈ ಹಾಕಿದರೆ, ನಷ್ಟ ಗ್ಯಾರೆಂಟಿ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ತಾಲೂಕಿನ 9,438 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಮಹಾಮಳೆಯ ಆರ್ಭಟಕ್ಕೆ 2,793 ಹೆಕ್ಟೇರ್ ಭತ್ತ ಕೃಷಿ ಹಾನಿಯಾಗಿತ್ತು. 5,744 ರೈತರು ಪರಿಹಾರಕ್ಕಾಗಿ ಸರ್ಕಾರದ ಎದುರು ಕೈಯೊಡ್ಡಿದ್ದರು. ಆದರೆ ಇದುವರೆಗೆ ಹೆಚ್ಚಿನ ಜನರಿಗೆ ಪರಿಹಾರ ಸಿಕ್ಕಿಲ್ಲ. ಇಂತಹ ಕಾರಣಗಳೇ ಭತ್ತದ ಕೃಷಿಗೆ ಗುಡ್‌ಬೈ ಹೇಳಲು ಕಾರಣ ಎನ್ನಲಾಗಿದೆ.

ಭತ್ತಕ್ಕೆ ಸರಿಯಾದ ಬೆಂಬಲ ಬೆಲೆ ಇಲ್ಲದಿರುವುದು. ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಭತ್ತ ಬೆಳೆದು ಸಾಲಗಾರ ರಾಗುವುದಕ್ಕಿಂದ, ಗದ್ದೆಗಳನ್ನು ಮುಚ್ಚಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದು ಒಳ್ಳೆಯದು ಎಂಬುದು ಕೃಷಿಕ ಸುರೇಶ್ ಅವರ ಅಭಿಪ್ರಾಯ.

ಸೋಮವಾರಪೇಟೆ ತಾಲೂಕಿನಲ್ಲಿ ಅತಿಹೆಚ್ಚು ಅರೇಬಿಕಾ ಕಾಫಿ ಬೆಳೆಯುತ್ತಿದ್ದು, ಹಿಂದಿನ ವರ್ಷಗಳಲ್ಲಿ ಭತ್ತ ಗದ್ದೆಗಳನ್ನು ಸಮತಟ್ಟು ಮಾಡಿ, ಕಾಫಿ ಕೃಷಿ ಮಾಡಿದ ಕೃಷಿಕರು ಉತ್ತಮ ಫಸಲನ್ನು ಪಡೆದು ಯಶ ಕಂಡ ಹಿನ್ನೆಲೆಯಲ್ಲಿ, ಕೃಷಿಕರು ಉತ್ತೇಜನಗೊಂಡು ಭತ್ತದ ಕೃಷಿಗೆ ಗುಡ್‌ಬೈ ಹೇಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ಉತ್ತಮ ಇಳುವರಿ ಸಿಗುತ್ತಿತ್ತು. ಆದರೆ ಶಾಂತಳ್ಳಿ ಹೋಬಳಿ ಹೊರತುಪಡಿಸಿ ಉಳಿದ ಮೂರು ಹೋಬಳಿಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಬಹುತೇಕ ಕೃಷಿಕರು ಭತ್ತದ ಭೂಮಿಯನ್ನು ಪಾಳುಬಿಟ್ಟು ಕಾಫಿತೋಟ ಮಾಡಿದ್ದಾರೆ. ಕೆಲವರು ಕೆಸ, ಗೆಣಸನ್ನು ಬೆಳೆಯುತ್ತಿರುವುದು ಕಂಡುಬರುತ್ತಿದೆ.
ಅತಿಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಭತ್ತದ ಕೃಷಿಯನ್ನು ಮುಂದುವರಿಸಿದ್ದಾರೆ. ಅತಿ ಹೆಚ್ಚು ಮಳೆ ಬೀಳುವ ಕಾರಣ ಕಾಫಿಗೆ ಹವಾಮಾನ ಪೂರಕವಾಗಿಲ್ಲ. ಏಲಕ್ಕಿಗೆ ಕೊಳೆರೋಗ ಬಾಧೆ ಕಾಡುತ್ತಿರುವುದರಿಂದ ಕೃಷಿಕರು ಭತ್ತದ ಕೃಷಿಯನ್ನು ಮುಂದುವರಿಸಿದ್ದಾರೆ.

ಹರಗ, ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಹೆಗ್ಗಡ ಮನೆ, ಮಲ್ಲಳ್ಳಿ, ಕೊತ್ತನಳ್ಳಿ, ನಾಡ್ನಳ್ಳಿ ಸೇರಿದಂತೆ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಭತ್ತ ಭೂಮಿಯನ್ನು ಪಾಳುಬಿಟ್ಟಿಲ್ಲ.
ಸಮಸ್ಯೆಯ ಸುಳಿಯಲ್ಲಿ ಸಣ್ಣ ರೈತ: ಭತ್ತದ ಗದ್ದೆ ಮುಚ್ಚಿ ಕಾಫಿತೋಟ ಮಾಡಿರುವ ಕಾರಣ, ಸಣ್ಣ ಹಾಗೂ ಅತಿಸಣ್ಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಕ್ಕದ ಗದ್ದೆಗಳು ತೋಟಗಳಾಗಿ ಪರಿವರ್ತನೆಯಾಗಿವೆ. ನೆರಳು ನಿರ್ವಹಣೆಯ ಪಾನವಾಳ ಮರ, ಸಿಲ್ವರ್‌ಮರ, ಬಾಳೆ ಸೇರಿದಂತೆ ಇತರ ಮರ ಗಿಡಗಳನ್ನು ಬೆಳೆಸಿರುವ ಪರಿಣಾಮ ಪಕ್ಕದ ಗದ್ದೆಯಲ್ಲಿ ಭತ್ತ ಬೆಳೆಯಲು ಸಾಧ್ಯವಾಗುತ್ತಿಲ್ಲ.

ಸುತ್ತಲು ಕಾಫಿತೋಟಗಳಿದ್ದು, ಮಧ್ಯದಲ್ಲಿರುವ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ತೋಟದ ನೆಪದಲಿ ್ಲಗದ್ದೆಗಳಿಗೆ ನೀರು ಬರುವ ಕೊಲ್ಲಿ, ತೊರೆಗಳನ್ನು ಮುಚ್ಚಲಾಗಿದೆ. ಕಾಫಿತೋಟದ ನೆರಳಿನಿಂದ ಭತ್ತದ ಬೆಳೆ ಸಮೃದ್ಧವಾಗಿ ಬೆಳೆಯುದಿಲ್ಲ ಎಂದು ನೊಂದ ರೈತರು ಹೇಳುತ್ತಾರೆ.

ಸಣ್ಣ ಹಾಗೂ ಅತಿ ಸಣ್ಣ ರೈತರು, ಗದ್ದೆಗಳನ್ನು ಸಮತಟ್ಟು ಮಾಡಿ ಕಾಫಿತೋಟ ಮಾಡಲು ಬಂಡವಾಳವಿಲ್ಲದೆ ಕೆಲವು ಕೃಷಿಕರು ಭತ್ತದ ಗದ್ದೆಗಳನ್ನು ಪಾಳುಬಿಟ್ಟಿದ್ದಾರೆ. ಹೀಗೆ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭತ್ತದ ಗದ್ದೆಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿಯೂ ಬರಬಹುದು.

Leave a Reply

Your email address will not be published. Required fields are marked *