ಕಟೀಲಿನಲ್ಲಿ ತ್ಯಾಜ್ಯ ಘಟಕ ಆರಂಭ

ನಿಶಾಂತ್ ಶೆಟ್ಟಿ ಕಿಲೆಂಜೂರು, ಕಟೀಲು

ದ್ರವ ತ್ಯಾಜ್ಯ ಘಟಕ ಆರಂಭಿಸಿದ ರಾಜ್ಯದ ಮೊದಲ ಮುಜರಾಯಿ ದೇವಸ್ಥಾನ ಎನಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಘನ ತ್ಯಾಜ್ಯ ಘಟಕ ಪ್ರಾರಂಭಿಸಲಾಗಿದೆ.

ಘನ ತ್ಯಾಜ್ಯ ಘಟಕಕ್ಕೆ ಅಗತ್ಯ ಯಂತ್ರವನ್ನು ಎಂಆರ್‌ಪಿಎಲ್ ಸಂಸ್ಥೆ ನೀಡಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ತಾಂತ್ರಿಕ ಸಹಕಾರದಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದೆ. ಕಟೀಲು ದೇವಸ್ಥಾನದ ಭೋಜನ ಶಾಲೆ ಸಮೀಪದ ದೇವರಗುಡ್ಡೆ ಬಳಿ ಘಟಕ ಪ್ರಾರಂಭವಾಗಿದ್ದು, ನಾಲ್ವರು ಸಿಬ್ಬಂದಿ ಕಾಂಪೋಸ್ಟ್ ಗೊಬ್ಬರ ತಯಾರಿ ಕಾಯಕದಲ್ಲಿ ನಿರತರಾಗಿದ್ದಾರೆ. ಘಟಕದಲ್ಲಿ ಸದ್ಯಕ್ಕೆ ಊಟದ ಎಲೆಗಳನ್ನು ಉಪಯೋಗಿಸುತ್ತಿದ್ದು ಗೊಬ್ಬರ ತಯಾರಿಗೆ ವಿವಿಧ ರಾಸಾಯನಿಕವನ್ನು ಬಳಸಲಾಗುತ್ತದೆ. ಘಟಕದಲ್ಲಿ 5- 6 ದಿನದ ಪ್ರಕ್ರಿಯೆ ನಂತರ ಗೊಬ್ಬರ ಹೊರಬರುತ್ತದೆ.

ಕಟೀಲು ದೇವಸ್ಥಾನದಲ್ಲಿ ದಿನಂಪ್ರತಿ ಆರರಿಂದ ಎಂಟು ಸಾವಿರದಷ್ಟು ಭಕ್ತರು, ದೇವಳದಿಂದ ನಡೆಸಲಾಗುವ ವಿದ್ಯಾಸಂಸ್ಥೆಗಳ ಎರಡೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಅನ್ನಪ್ರಸಾದ ಸ್ವೀಕರಿಸುತ್ತಾರೆ. ವಿದ್ಯಾರ್ಥಿಗಳ ಊಟಕ್ಕೆ ಬಟ್ಟಲಿನ ವ್ಯವಸ್ಥೆ ಇದೆ. ಆದರೆ ಭಕ್ತರ ಊಟಕ್ಕೆ ಹಿಂದಿನಿಂದಲೂ ಬಾಳೆ ಎಲೆ ಬಳಸಲಾಗುತ್ತಿದೆ. ಇದರ ವಿಲೇವಾರಿ ಸಮಸ್ಯೆ ನಿವಾರಣೆಗೆ ಇದೀಗ ಘನ ತ್ಯಾಜ್ಯ ಘಟಕ ಆರಂಭಗೊಂಡಿದ್ದು, ಸದ್ಯ ಊಟಕ್ಕೆ ಬಳಸಿದ ಬಾಳೆ ಎಲೆಗಳನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿಸಲಾಗುತ್ತಿದೆ. ನೂತನ ಘನ ತ್ಯಾಜ್ಯ ಘಟಕದಲ್ಲಿ ಉತ್ಪಾದನೆ ಆಗುತ್ತಿರುವ ಗೊಬ್ಬರವನ್ನು ಮಾರಾಟ ಮಾಡುವ ಯೋಜನೆ ಇದ್ದು, ಬೆಲೆ ನಿಗದಿ ಆಗಿಲ್ಲ ಎಂದು ದೇಗುಲದ ಮೂಲಗಳು ತಿಳಿಸಿವೆ.

ಎಲೆ ಬದಲು ಬಟ್ಟಲು: ಕಟೀಲು ದೇವಸ್ಥಾನದಲ್ಲಿ ಈಗಾಗಲೇ ಮಕ್ಕಳ ಊಟಕ್ಕೆ ಬಟ್ಟಲುಗಳನ್ನು ಬಳಸಲಾಗುತ್ತಿದ್ದು, ಭಕ್ತರ ಊಟಕ್ಕೂ ಬಟ್ಟಲನ್ನು ಬಳಸುವ ಯೋಜನೆ ಮಾಡಲಾಗಿದೆ. ಈಗಾಗಲೇ ಧರ್ಮಸ್ಥಳ, ಉಡುಪಿ, ಶೃಂಗೇರಿ ಮುಂತಾದ ದೇವಸ್ಥಾನಗಳಲ್ಲಿ ಬಟ್ಟಲುಗಳ ವ್ಯವಸ್ಥೆ ಇದೆ. ಕಟೀಲಿನಲ್ಲಿ ಬೆಳಗ್ಗೆ ಗಂಜಿ ಊಟ, ಮಧ್ಯಾಹ್ನ ಹಾಗೂ ರಾತ್ರಿಯೂ ಅನ್ನಪ್ರಸಾದ ಇದೆ. ಬಟ್ಟಲು ತೊಳೆಯುವ 15 ಲಕ್ಷ ರೂ. ವೆಚ್ಚದ ಯಂತ್ರಕ್ಕೆ ಅನುಮೋದನೆ ಪಡೆಯಲು ತಿಂಗಳುಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿದೆ. ಬಟ್ಟಲುಗಳು ಆರಂಭವಾದರೆ ಬಾಳೆ ಎಲೆಗಳ ಬಳಕೆ ಕಡಿಮೆಯಾಗಲಿದೆ. ಬಳಿಕ ಘನ ತ್ಯಾಜ್ಯ ಘಟಕಕ್ಕೆ ರಬ್ಬರು, ಪ್ಲಾಸ್ಟಿಕ್ ಹೊರತುಪಡಿಸಿ ಉಳಿದ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸಬಹುದು.

ಸೀಯಾಳ ಚಿಪ್ಪು ವಿಲೇವಾರಿ: ಕಟೀಲು ದೇವಸ್ಥಾನದಲ್ಲಿ ದಿನಂಪ್ರತಿ ಸರಾಸರಿ ಐನೂರರಷ್ಟು ಸೀಯಾಳಗಳ ಅಭಿಷೇಕ ನಡೆಯುತ್ತಿದ್ದು, ಈ ಸಂಖ್ಯೆ ಶುಕ್ರವಾರ ಭಾನುವಾರಗಳಲ್ಲಿ ಎರಡರಿಂದ ಮೂರು ಸಾವಿರ ದಾಟುತ್ತದೆ. ಸೀಯಾಳದ ಚಿಪ್ಪುಗಳ ವಿಲೇವಾರಿಯೂ ಒಂದು ಸಮಸ್ಯೆಯಾಗಿದೆ. ಇದೀಗ ಸೀಯಾಳ ಚಿಪ್ಪನ್ನು ಗೊಬ್ಬರವನ್ನಾಗಿಸುವ ಯಂತ್ರದ ಖರೀದಿಗೆ ದೇವಸ್ಥಾನ ಸಿದ್ಧವಾಗಿದ್ದು, ಶೀಘ್ರದಲ್ಲಿ ಈ ಯಂತ್ರ ಬರುವ ಸಾಧ್ಯತೆ ಇದೆ.

ದ್ರವ ತ್ಯಾಜ್ಯ ಘಟಕ: ಎರಡು ವರ್ಷಗಳ ಹಿಂದೆ 45 ಲಕ್ಷ ರೂ. ವೆಚ್ಚದಲ್ಲಿ ಪ್ರಾರಂಭವಾದ ದ್ರವ ತ್ಯಾಜ್ಯ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಹೊರಬಂದ ನೀರನ್ನು ಪಕ್ಕದ ತೋಟಕ್ಕೆ, ಕುದುರು ಹಾಗೂ ದೇವಸ್ಥಾನದ ಹೂತೋಟಗಳಿಗೆ ಬಳಸಲಾಗುತ್ತಿದೆ. ಇದೀಗ 48 ಲಕ್ಷ ರೂ.ನಲ್ಲಿ ಎರಡನೇ ಹಂತದ ಘಟಕ ಆರಂಭವಾಗಲಿದೆ. ವಸತಿ ಗೃಹ, ಅನ್ನಛತ್ರಗಳ ದ್ರವ ತ್ಯಾಜ್ಯ ವಿಲೇವಾರಿಗೆ ಕಟೀಲು ದೇವಸ್ಥಾನ ತಿಂಗಳೊಂದಕ್ಕೆ ಸುಮಾರು ಎರಡು ಲಕ್ಷ ರೂ. ವ್ಯಯಿಸುತ್ತಿದೆ. ಘಟಕ ಆರಂಭವಾದರೆ ಈ ಖರ್ಚು ಉಳಿತಾಯವಾಗಲಿದೆ. ಜಿಲ್ಲಾಧಿಕಾರಿಗಳ ಅನುಮೋದನೆಗೆ ಒಂದೂವರೆ ವರ್ಷ ಕಾಯಬೇಕಾದ ಕಾರಣ ಎರಡನೇ ಹಂತದ ಯೋಜನೆ ನಿಧಾನವಾಗಿದೆ.