ಆಸ್ತಿ ತೆರಿಗೇಲಿ ವಿನಾಯಿತಿಗೆ ನೀಡಿ

ಹೊನ್ನಾಳಿ: ಮಾಜಿ ಸೈನಿಕರು ಹಾಗೂ ಯುದ್ಧದಲ್ಲಿ ಮಡಿದ ಯೋಧರ ಕುಟುಂಬ ಸದಸ್ಯರ ಆಸ್ತಿ ತೆರಿಗೆಯಲ್ಲಿ ಶೇ.100ರಷ್ಟು ವಿನಾಯಿತಿ ನೀಡಬೇಕೆಂದು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ಕಳೆದ ಸರ್ಕಾರದ ಅವಧಿಯಲ್ಲಿ ಗೃಹಮಂತ್ರಿಯಾಗಿದ್ದ ಡಾ.ವಿ.ಎಸ್.ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರಿ ನಡಾವಳಿಕೆಗಳ ಅನುಸಾರ ಸೈನಿಕರ ಕುಟುಂಬದವರಿಗೆ ಆಸ್ತಿ ತೆರಿಗೆಯಲ್ಲಿ ಶೇ.100ರಷ್ಟು ವಿನಾಯಿತಿ ನೀಡುವ ಮಸೂದೆಗೆ ಸರ್ವಾನುಮತದಿಂದ ಅಂಗೀಕಾರವಾಗಿತ್ತು. ಆದರೆ, ಸರ್ಕಾರ ಬದಲಾವಣೆಯ ಕಾರಣದಿಂದ ಅದು ಕಾರ್ಯಗತವಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಶೇ.100ರಷ್ಟು ಆಸ್ತಿ ತೆರಿಗೆ ರಿಯಾಯಿತಿಯನ್ನು ಕೂಡಲೇ ನೀಡಬೇಕೆಂದು ಮನವಿ ಮಾಡಿದರು.

ಮನವಿ ಪ್ರತಿಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆ ಬೆಂಗಳೂರು ಹಾಗೂ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಇಲಾಖೆ ಶಿವಮೊಗ್ಗ ಇವರಿಗೆ ಕೂಡ ಕಳಿಸಿಕೊಡಲಾಗುವುದು ಎಂದರು.

ಸಂಘದ ತಾಲೂಕು ಅಧ್ಯಕ್ಷ ಎಂ.ವಾಸಪ್ಪ, ಮಾಜಿ ಸೈನಿಕರಾದ ಎಂ.ಮಂಜಪ್ಪ, ಎನ್.ವಿ.ರಾಮಪ್ಪ, ಬಿ.ಆರ್.ನಾಗರಾಜ್, ಕೇಶವಮೂರ್ತಿ, ಬಸವರಾಜಪ್ಪ, ಕರಿಯಪ್ಪ, ಮರಿಯಪ್ಪ ಸೇರಿ ಹಲವರು ಇದ್ದರು.