More

  ಕಣ್ಮರೆಯಾದ ಬರದ್ವಾಡದ ಯೋಧ

  ವಿಜಯವಾಣಿ ಸುದ್ದಿಜಾಲ ಕುಂದಗೋಳ/ಲಕ್ಷೆ್ಮೕಶ್ವರ

  ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಸಿಆರ್​ಪಿಎಫ್​ನ ಯೋಧನೊಬ್ಬ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಗುರುವಾರ ಬೆಳಗಿನ ಜಾವ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

  ಈಶ್ವರಪ್ಪ ಯಲ್ಲಪ್ಪ ಸೂರಣಗಿ( 45) ಆತ್ಮಹತ್ಯೆ ಮಾಡಿಕೊಂಡ ಯೋಧ. ಕಳೆದ 16 ವರ್ಷಗಳಿಂದ ಸಿಆರ್​ಪಿಎಫ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ಹತ್ತಾರು ವರ್ಷಗಳಿಂದ ಲಕ್ಷ್ಮೇಶ್ವರದ ಈಶ್ವರ ನಗರದಲ್ಲಿ ಕುಟುಂಬ ಸಮೇತವಾಗಿ ವಾಸವಾಗಿದ್ದರು. ಡಿಸೆಂಬರ್​ನಲ್ಲಿ ರಜೆಗೆ ಬಂದು, ಜನವರಿ 6 ರಂದು ಕರ್ತವ್ಯಕ್ಕೆ ಮರಳಿದ್ದರು. ಪತ್ನಿ, ಮಕ್ಕಳೊಂದಿಗೆ ಫೋನ್​ನಲ್ಲಿ ಪ್ರತಿದಿನ ಮಾತನಾಡುತ್ತಿದ್ದರು. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಪತ್ನಿ ಲಲಿತಾ ಮತ್ತು ಮಕ್ಕಳಾದ ಸಾಗರ ಹಾಗೂ ಶಾಂಭವಿಯೊಂದಿಗೆ ಮಾತನಾಡಿದ್ದರು.

  ಗುರುವಾರ ಬೆಳಗ್ಗೆ ಶ್ರೀನಗರದಿಂದ ಮೊಬೈಲ್ ಕರೆಯೊಂದು ಬಂದಿದ್ದು, ಈಶ್ವರಪ್ಪ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪತ್ನಿಗೆ ಹಿಂದಿ ಭಾಷೆಯಲ್ಲಿ ತಿಳಿಸಿದ್ದಾರೆ. ಇದರಿಂದ ದಿಕ್ಕು ತೋಚದಂತಾದ ಪತ್ನಿ ಪತಿ ಮೊಬೈಲ್​ಗೆ ಸಂರ್ಪಸಲು ಪ್ರಯತ್ನಿಸಿದಾಗ ಸಂಪರ್ಕ ಕಡಿತಗೊಂಡಿದೆ. ಆಗ ಯೋಧನ ಸ್ನೇಹಿತರಿಗೆ ಕರೆ ಮಾಡಿದಾಗ ವಿಷಯ ಖಚಿತವಾಗಿದೆ.

  ಲಕ್ಷ್ಮೇಶ್ವರದ ಈಶ್ವರ ನಗರದ ಈಶ್ವರಪ್ಪ ಮನೆಯಲ್ಲಿ ದುಃಖ ಮಡುಗಟ್ಟಿದೆ. ಪತ್ನಿ ಹಾಗೂ ಮಕ್ಕಳ ರೋಧನ ನೆರೆದಿದ್ದವರ ಮನ ಕರಗಿಸುವಂತಿತ್ತು.

  ಯೋಧನ ಮೃತದೇಹ ಶುಕ್ರವಾರ ಶ್ರೀನಗರದಿಂದ ಸ್ವಗ್ರಾಮ ಬರದ್ವಾಡಕ್ಕೆ ಬರಲಿದೆ. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಲಿದೆ ಎಂದು ಈಶ್ವರಪ್ಪ ಸಂಬಂಧಿ ತಿಳಿಸಿದ್ದಾರೆ. ಕುಂದಗೋಳ ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರು ಬರದ್ವಾಡ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಯೋಧನ ಸಾವಿನ ಬಗ್ಗೆ ನಮಗೆ ಮೇಲಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ಗ್ರಾಮಸ್ಥರೇ ನಮಗೆ ತಿಳಿಸಿದ್ದರಿಂದ ಭೇಟಿ ನೀಡಿದ್ದೇನೆ’ ಎಂದು ತಿಳಿಸಿದರು.

  ಗ್ರಾಮದ ಎಲ್ಲರ ಅಚ್ಚುಮೆಚ್ಚಿನ ನಾಯಕನಾಗಿದ್ದ ಈಶ್ವರ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ. ಅವಧಿ ಮುಗಿದರೂ ಹೆಚ್ಚಿನ ದೇಶ ಸೇವೆ ಮಾಡಬೇಕೆಂಬ ದೃಷ್ಟಿಯಿಂದ ಮತ್ತೆ ರಜೆ ಮುಗಿದ ನಂತರ ಕರ್ತವ್ಯಕ್ಕೆ ಹಾಜರಾಗಿದ್ದರು. ಆತನ ಬಗ್ಗೆ ಹೆಮ್ಮೆ ಇದೆ.

  | ಪರಶುರಾಮ ಚವರದ ಯೋಧನ ಸ್ನೇಹಿತ

  ನನ್ನ ಮಗ ಯಾವಾಗಲೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧನಿದ್ದೇನೆ. ನನ್ನ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬೇಡಿ. ದೇಶದ ಸೇವೆ ನನ್ನ ಜನ್ಮಸಿದ್ಧ ಹಕ್ಕು ಎಂದು ಮಾತನಾಡುತ್ತಿದ್ದ. ಅಂಥವನು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ವೈರಿಗಳ ಗುಂಡಿಗೆ ಎದುರಿಸುವ ಶಕ್ತಿ ಅವನಲ್ಲಿತ್ತು.

  | ಎಲ್ಲಪ್ಪ ಸೂರಣಗಿ ಯೋಧನ ತಂದೆ

  ನನ್ನ ಮಗ ವೀರ ಯೋಧನಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾನೆ. ಅವನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಇಷ್ಟು ವರ್ಷವಾದರೂ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾನೆ ಉಳಿದ ಅವಧಿಯನ್ನು ದೇಶಕ್ಕಾಗಿ ಮುಡುಪಾಗಿಡುತ್ತೇನೆ ಎಂದು ಹೇಳಿದ್ದ.

  | ದ್ಯಾಮವ್ವ ಯೋಧನ ತಾಯಿ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts