ಹುತಾತ್ಮನ ಮನೆಯಲ್ಲಿ ಹಣಕ್ಕಾಗಿ ಜಗಳ: ಬೀದಿಗೆ ಬಂದ ಅತ್ತೆ-ಸೊಸೆ ಕದನ, ತವರಿಗೆ ತೆರಳಿದ ಯೋಧ ಗುರು ಪತ್ನಿ

ಕೆ.ಎಂ.ದೊಡ್ಡಿ(ಮಂಡ್ಯ): ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹೊಗೆಯಾಡುತ್ತಿದ್ದ ಅತ್ತೆ-ಸೊಸೆಯರ ಜಗಳ ಇದೀಗ ಬೀದಿಗೆ ಬಂದಿದೆ.

ಇಡೀ ದೇಶವೇ ಯೋಧರ ಸಾವಿಗೆ ಮರುಗಿತ್ತು. ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಗುರುವಿನ ಅಂತ್ಯಸಂಸ್ಕಾರ ನಡೆಸಿತ್ತು. ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಗುಡಿಗೆರೆಗೆ ಆಗಮಿಸಿ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

ರಾಜ್ಯ ಸರ್ಕಾರ ಸೇರಿ ಹಲವು ಕಂಪನಿ, ಸಂಘ-ಸಂಸ್ಥೆಗಳಿಂದ ಗುರು ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಹಲವಾರು ಬಾರಿ ಜಗಳ ನಡೆದು, ಅತ್ತೆ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಇದ್ದ ಮನಸ್ತಾಪ ಹೆಚ್ಚಾಗಿತ್ತು. ಪರಿಣಾಮ, ಮಂಗಳವಾರ ಇಬ್ಬರೂ ಪರಸ್ಪರ ನಿಂದಿಸಿಕೊಂಡಿದ್ದಾರೆ. ಈಗಾಗಲೇ ಹಲವು ಬಾರಿ ಗ್ರಾಮದ ಹಿರಿಯರು ಇಬ್ಬರ ನಡುವಿನ ಮನಸ್ತಾಪ ನಿವಾರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಹಣದ ವಿಚಾರಕ್ಕೆ ಕಿತ್ತಾಡಿಕೊಂಡರೆ ಗ್ರಾಮದ ಗೌರವ ಹೋಗುತ್ತದೆಂದು ತಿಳಿ ಹೇಳಿದ್ದರು ಎನ್ನಲಾಗಿದೆ.

ಪರಿಹಾರ ರೂಪದಲ್ಲಿ ಬಂದ ಚೆಕ್​ಗಳು ಕಲಾವತಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯವಾದರೆ, ನಗದು ರೂಪದಲ್ಲಿ ಬಂದ ಪರಿಹಾರದ ಹಣ ಗುರು ತಾಯಿ ಚಿಕ್ಕೋಳಮ್ಮ ಅವರಿಗೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಹೊಗೆಯಾಡುತ್ತಿದ್ದ ದ್ವೇಷ ಮಂಗಳವಾರ ಹೆಚ್ಚಾಗಿ ಗಲಾಟೆ ನಡೆದಿದೆ. ಗಲಾಟೆ ಬಿಡಿಸಲು ಗುರು ಸಹೋದರ ಮಧು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಸಾಸಲಪುರದಿಂದ ಆಗಮಿಸಿದ ಕಲಾವತಿ ಪೋಷಕರು ಮಗಳನ್ನು ಕರೆದೊಯ್ದರು.

ಇತ್ತ ಚಿಕ್ಕೋಳಮ್ಮ ಏನೂ ನಡೆದೇ ಇಲ್ಲವೆಂಬಂತೆ, ಮನೆಯಲ್ಲಿ ಇವೆಲ್ಲ ಸಹಜ. ಸಂಸಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇದೇ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಕುರಿತು ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರು ಇಬ್ಬರಿಗೂ ತಿಳಿವಳಿಕೆ ಹೇಳಿದ್ದರು.

ಕಲಾವತಿ ಅವರ ಬ್ಯಾಂಕ್ ಖಾತೆ ವಿವರ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಜನರೂ ಸ್ಪಂದಿಸಿದ್ದರು. ಇದರ ಮೊತ್ತವೇ ಕೋಟ್ಯಂತರ ರೂ. ಎನ್ನಲಾಗಿದೆ. ವಿದೇಶಿ ಉದ್ಯಮಿಯೊಬ್ಬರು 1 ಕೋಟಿ ರೂ., ರಾಜ್ಯ ಸರ್ಕಾರ 25 ಲಕ್ಷ, ಅಂಬಾನಿ ಕಂಪನಿಯಿಂದ 25 ಲಕ್ಷ, ಇನ್ಪೋಸಿಸ್ ಫೌಂಡೇಷನ್​ನಿಂದ 10 ಲಕ್ಷ, ಸಚಿವ ಜಮೀರ್ ಅಹಮದ್ ಖಾನ್ 10 ಲಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರೂ. ಸೇರಿ ವಿವಿಧ ಪಕ್ಷಗಳ ಮುಖಂಡರು, ಸಂಸ್ಥೆಗಳವರು ಹಣ ನೀಡಿದ್ದರು. ಅಲ್ಲದೆ, ನಟ ದಿ.ಅಂಬರೀಷ್ ಪತ್ನಿ ಸುಮಲತಾ 20 ಗುಂಟೆ ಜಮೀನನ್ನು ಕೊಡುಗೆಯಾಗಿ ನೀಡಿದ್ದರು. ಆದರೆ, ಈ ಹಣವೇ ಈಗ ಕುಟುಂಬ ಸದಸ್ಯರ ಸಂಬಂಧಕ್ಕೆ ಮುಳುವಾಗಿದೆ.

One Reply to “ಹುತಾತ್ಮನ ಮನೆಯಲ್ಲಿ ಹಣಕ್ಕಾಗಿ ಜಗಳ: ಬೀದಿಗೆ ಬಂದ ಅತ್ತೆ-ಸೊಸೆ ಕದನ, ತವರಿಗೆ ತೆರಳಿದ ಯೋಧ ಗುರು ಪತ್ನಿ”

  1. This is what life is. Mother lost son and wife lost husband. She will and should get married and aged parents are at the mercy of God.

Comments are closed.