ರಜೆಗಾಗಿ ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು

ರಾಯಚೂರು: ರಜೆ ಕಳೆಯಲೆಂದು ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಸಿಂಧನೂರು ತಾಲೂಕಿನ ಅಲಬೂರಿನ ಯೋಧ ಶಿವಕುಮಾರ (34) ರಜೆಯ ಮೇಲೆ ಊರಿಗೆ ಬಂದಿದ್ದ ವೇಳೆ ಹೃದಯಘಾತವಾಗಿತ್ತು. ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಪಾರ್ಥೀವ ಶರೀರಕ್ಕೆ ಸಿಂಧನೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆಯಲ್ಲಿ ನಿಂತು ಗೌರವ ಸಮರ್ಪಣೆ ಮಾಡಿದ್ದಾರೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದ್ದು, ತಾಲೂಕು ಆಡಳಿತ, ರೈತರು, ಸೈನಿಕರ ವೇದಿಕೆ ಹಾಗೂ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

ಕಳೆದ 15 ವರ್ಷಗಳಿಂದ ಶಿವಕುಮಾರ್​ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಅವರು ಜೋಧ್​​​ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಅವರಿಗೆ ಎರಡು ಬಾರಿ ಹೃದಯಾಘಾತ ಕಾಣಿಸಿಕೊಂಡಿತ್ತು. (ದಿಗ್ವಿಜಯ ನ್ಯೂಸ್​)